ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹೋಳಿ ಉತ್ಸವಕ್ಕೆ ಖ್ಯಾತಿ ಪಡೆದಿರುವ ಬಾಗಲಕೋಟೆಯಲ್ಲಿ ಬಣ್ಣದಾಟ ಜೋಶ್ ಇಮ್ಮಡಿಗೊಳ್ಳುತ್ತಿದ್ದು, ಮುಳುಗಡೆ ನಗರಿ ಬಣ್ಣದ ಬಂಡಿಗಳ ಕಲರವಕ್ಕೆ ಮನಸೋತು ಹೋಯಿತು. ಸಾಂಪ್ರದಾಯಿಕ ಹಲಗೆ ನಿನಾದ ಜೊತೆಗೆ ಡಿಜೆ ಸೌಂಡ್‌ಗೆ ಬಾಗಲಕೋಟೆ ಕಲರ್ ಫುಲ್ ಕೋಟೆಯಾಗಿ ಕಂಗೂಳಿಸಿತು.ಶನಿವಾರ ಹಳೇ ಬಾಗಲಕೋಟೆ, ವಿದ್ಯಾಗಿರಿ, ನವನಗರ ಸೇರಿದಂತೆ ಈಡೀ ಬಾಗಲಕೋಟೆ ನಗರವೇ ಬಣ್ಣದಾಟದ ಅಬ್ಬರಕ್ಕೆ ಸಾಕ್ಷಿಯಾಯಿತು. ವೆಂಕಪಪೇಟೆ, ಹಳಪೇಟೆ, ಜೈನಪೇಟೆ ಓಣಿ ಬಣ್ಣ ಸಂತಸ, ಸಂಭ್ರಮಕ್ಕೆ ಕಿರೀಟ ಇಟ್ಟಿತು. ವಯಸ್ಸಿನ ಮಿತಿ ಇಲ್ಲದೆ, ಜಾತಿ, ಮತ, ಪಂಥಗಳ ಬೇಧಭಾವ ಇಲ್ಲದೆ ಬಣ್ಣದೋಕುಳಿಯಲ್ಲಿ ಮುಳುಗಿತ್ತು.
ಬಗೆಬಗೆಯ ಬಣ್ಣ ಹಚ್ಚುತ್ತ ಬಣ್ಣದೋಕುಳಿಗೆ ರಂಗೇರುವಂತೆ ಮಾಡಿದರು. ಮಾಧ್ಯಾಹ್ನದ ನಂತರ ನಗರದ ತುಂಬೆಲ್ಲ ಬಣ್ಣದ ಓಕುಳಿ ತೀವ್ರಗೊಂಡಿತು. ಮೂರು ಪೇಟೆಗಳ ಜನರು ಬಣ್ಣದ ಬಂಡಿಗಳ ಜೊತೆಗೆ ಕೋಟೆ ನಗರಿಯ ಪ್ರಮುಖ ರಸ್ತೆಗಳಲ್ಲಿ ಬಣ್ಣದ ನೀರು ಎರೆಚುತ್ತ ಸಾಗಿದರು. ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದವರೆಗೆ ಪರಸ್ಪರ ಎದುರಾದ ವೆಂಕಟಪೇಟೆ, ಹಳಪೇಟೆ, ಜೈನ್‌ಪೇಟೆಯ ಬಣ್ಣದ ಬಂಡಿಗಳು ನೋಡುವುದೇ ಕಣ್ಣಿಗೆ ಹಬ್ಬದಂತೆ ಗೋಚರಿಸಿತು.ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರೆಲ್ ಇರಿಸಿ ಎದುರು ಬದುರು ನಿಂತು ಹೊಯ್ಯುತ್ತ ಬಣ್ಣದ ಹಬ್ಬದ ಮೆರಗು ಹೆಚ್ಚಿಸಿದರು. ಮೂರು ಪೇಟೆಗಳ ಜನರು ಒಂದು ಕಡೆಗೆ ಬಣ್ಣದಲ್ಲಿ ಸಮಾಗಮವಾಗುವ ದೃಶ್ಯವನ್ನು ನೋಡಲು ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು. ಬಸವೇಶ್ವರ ವೃತ್ತದಲ್ಲಿ ರೇನ್ ಡ್ಯಾನ್ಸ್ ಆಕರ್ಷಣೀಯವಾಗಿತ್ತು. ಡಿಜೆ ಸಂಗೀತ ಜೊತೆಗೆ ಸಾಂಪ್ರದಾಯಿಕ ಹಲಗೆ ನಿನಾದ ಹಬ್ಬದ ಸಂಭ್ರಮ ಹೆಚ್ಚಿಸಿತು.
ಚಿಣ್ಣರು, ಯುವಕರು ಹಲಗೆ ಬಾರಿಸುತ್ತಾ ಪ್ರಮುಖ ಬೀದಿ ಸಂಚರಿಸಿದರು. ಕ್ಷಣಕ್ಷಣಕ್ಕೂ ಹೊರ ಹೊಮ್ಮುತ್ತಿದ್ದ ಹಲಗೆ ನಿನಾದಕ್ಕೆ ಗುಂಪು, ಗುಂಪಾಗಿ ಕುಣಿದು ಕುಪ್ಪಳಿಸಿದರು. ಕೊತ್ತಲೇಶ ದೇವಸ್ಥಾನ, ಎಂ.ಜಿ. ರಸ್ತೆ, ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ವಲ್ಲಾಭಾಯಿ ಚೌಕ ಸೇರಿದಂತೆ ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಜನಸಾಗರವೇ ಸೇರಿ ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.ಬಾಗಲಕೋಟೆಯಲ್ಲಿ ಮೊದಲ ದಿನ ಕಿಲ್ಲಾ ಹಾಗೂ 2ನೇ ದಿನ ಹಳೆಪೇಟೆ, ಜೈನ್‌ಪೇಟೆ, ವೆಂಕಟಪೇಟೆ ಬಣ್ಣದಾಟ ಸಂಪನ್ನಗೊಂಡಿದ್ದು, ಭಾನುವಾರ ಮೂರನೇ ದಿನ ಹೊಸಪೇಟದಿಂದ ಬಣ್ಣದಾಟ ನಡೆಯಲಿದೆ. ಬಾಗಲಕೋಟೆ ಹೋಳಿ ಉತ್ಸವ ಐತಿಹಾಸಿಕ ಜನ ಮನ್ನಣೆ ಪಡೆದುಕೊಂಡಿದೆ. ಈ ವರ್ಷ ಬಣ್ಣದಾಟ ಭರ್ಜರಿಯಾಗಿ ನಡೆಯುತ್ತಿದೆ. ರೇನ್ ಡ್ಯಾನ್ಸ್, ಡಿಜೆ ಸಂಗೀತವು ಉತ್ಸವದ ಮೆರಗು ಹೆಚ್ಚಿಸಿದೆ. ಭಾನುವಾರ ಕೊನೆಯ ದಿನದ ಬಣ್ಣದಾಟ ನಡೆಯಲಿದ್ದು, ಬಾಗಲಕೋಟೆ ಬಣ್ಣ ಬಣ್ಣಗಳಲ್ಲಿ ಕಂಗೂಳಿಸಲಿದೆ.
-ಸಂಜೀವ ವಾಡಕರ ಹೋಳಿ ಆಚರಣೆ ಸಮಿತಿ ಸಂಘಟನಾ ಕಾರ್ಯದರ್ಶಿ