ಸಾರಾಂಶ
ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟಿನ ವತಿಯಿಂದ ಇಲ್ಲಿನ ಇಂದ್ರಾಳಿಯಲ್ಲಿ ಸುಮಾರು 8 ವರ್ಷಗಳ ಸುದೀರ್ಘ ಅವಧಿಯಲ್ಲಿ ನಿರ್ಮಾಣಗೊಂಡು ರೈಲ್ವೆ ಮೇಲ್ಸೇತುವೆ ಕೊನೆಗೂ ಲೋಕಾರ್ಪಣೆಗೊಂಡಿರುವ ಪ್ರಯುಕ್ತ ಹರ್ಷೋತ್ಸವವನ್ನು ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಸಲಾಯಿತು.
ದೀಪವನ್ನು ಬೆಳಗಿಸಿ ಮಾತನಾಡಿದ ಸ್ವಾಮೀಜಿ, ಮೇಲ್ಸೇತುವೆ ಲೋಕಾರ್ಪಣೆಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಸೇತುವೆ ಬಳಿ ವಿದ್ಯಾ ಸಂಸ್ಥೆಗಳಿದ್ದು, ಶಾಲಾ ವಿದ್ಯಾರ್ಥಿಗಳು ವಾಹನ ದಟ್ಟಣೆ ಇರುವ ಹೆದ್ದಾರಿ ದಾಟಲು ಅಪಾಯ ಎದುರಿಸಬೇಕಾದ ಪರಿಸ್ಥಿತಿ ಇದ್ದು, ಇದಕ್ಕೆ ಸೂಕ್ತ ಪರ್ಯಾಯ ಉಪಾಯವನ್ನು ಜನಪ್ರತಿನಿಧಿಗಳು ವ್ಯವಸ್ಥೆಗೊಳಿಸಲು ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಶಾಸಕ ಯಶಪಾಲ್ ಸುವರ್ಣ, ಡಿವೈಎಸ್ಪಿ ಡಿ. ಟಿ. ಪ್ರಭು, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಮಿತಿಯ ಅಧ್ಯಕ್ಷ ಎಂ.ನಾಗೇಶ್ ಹೆಗ್ಡೆ, ಬಡಗುಬೆಟ್ಟು ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್, ಸಮಿತಿಯ ಕಾರ್ಯಕರ್ತರಾದ ತಾರಾನಾಥ್ ಮೇಸ್ತ ಶಿರೂರು, ಸತೀಶ್ ಕುಮಾರ್, ಯಾದವ್, ಜಯಶ್ರೀ, ಅಶ್ವಿನಿ, ಪ್ರಶಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಈ ಹರ್ಷೋತ್ಸವದ ಸಂತಸದಲ್ಲಿ ನಗರದ ಜಹಾಂಗೀರ್ ಭಟ್ಸ್ ಸ್ವೀಟ್ಸ್ ಹೌಸ್ ಹಾಗೂ ವೇದಾಂತ್ ರೆಸ್ಟೋರೆಂಟಿನ ನುರಿತ ಸಿಹಿ ಖಾದ್ಯತಜ್ಞರು ಸ್ಥಳದಲ್ಲಿಯೇ ಸುಮಾರು 4 ಸಾವಿರ ಜಿಲೇಬಿಗಳನ್ನು ತಯಾರಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದರು.