ಸಾರಾಂಶ
ಪೌರಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ ತುರ್ತಾಗಿ ನೇರ ನೇಮಕಾತಿ ಆದೇಶ ಪತ್ರ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ನ್ಯಾಯಾಧೀಶ ಪರಶುರಾಮ ದೊಡ್ಡಮನಿ ತಿಳಿಸಿದರು.
ಹುಬ್ಬಳ್ಳಿ: ನೇರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 8 ದಿನಗಳಿಂದ ಪೌರಕಾರ್ಮಿಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬುಧವಾರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಧರಣಿ ನಿರತ ಪೌರಕಾರ್ಮಿಕರು ಮಾತನಾಡಿ, 8 ದಿನಗಳಿಂದ ಚಳಿಯಲ್ಲಿ ಹಗಲು ರಾತ್ರಿ ಎನ್ನದೇ ಧರಣಿ ನಡೆಸುತ್ತಿದ್ದೇವೆ. ಆದರೆ, ಈ ವರೆಗೂ ಯಾವೊಬ್ಬ ಪಾಲಿಕೆ ಅಧಿಕಾರಿಯು ಬಂದು ಸಮಸ್ಯೆ ಆಲಿಸುತ್ತಿಲ್ಲ. ಪೌರಕಾರ್ಮಿಕರ ಸಮಸ್ಯೆ ಹೇಳಿದರೆ ಪಾಲಿಕೆ ಆಯುಕ್ತರು ಮೌನಕ್ಕೆ ಶರಣಾಗಿದ್ದಾರೆ. ನೇಮಕಾತಿ ಆದೇಶ ನೀಡುವಂತೆ ಮನವಿ ಸಲ್ಲಿಸಿದರೂ ಮೂವರು ಪೌರಕಾರ್ಮಿಕರ ಪೊಲೀಸ್ ವೆರಿಫಿಕೇಶನ್ ಬಾಕಿ ಇದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಈ ವರೆಗೂ ಆದೇಶ ಪ್ರತಿ ನೀಡುತ್ತಿಲ್ಲ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡರು.ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶ ಪರಶುರಾಮ ದೊಡ್ಡಮನಿ ಮಾತನಾಡಿ, ಪೌರಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ ತುರ್ತಾಗಿ ನೇರ ನೇಮಕಾತಿ ಆದೇಶ ಪತ್ರ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಪೌರಕಾರ್ಮಿಕರಿಗೆ ಯಾವುದೇ ತೊಂದರೆಗಳಾದರೆ ಸುಮ್ಮನೆ ಬಿಡುವುದಿಲ್ಲ. ಅವರಿಗೆ ಸೂಕ್ತ ರಕ್ಷಣೆ, ವೈದ್ಯಕೀಯ ಸೌಲಭ್ಯ ನೀಡಬೇಕು. ಈ ಬಗ್ಗೆ ಸಂಘದಿಂದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಬೇಕಾದ ಕಾನೂನು ನೆರವು ನೀಡುವುದಾಗಿ ತಿಳಿಸಿದರು. ಅಧಿಕಾರಿಗಳಿಗೆ ಡಿ. 19ರಂದು ನ್ಯಾಯಾಲಯದಲ್ಲಿ ಬಂದು ವರದಿ ಸಲ್ಲಿಸುವಂತೆ ಸೂಚನೆ ನೀಡಿ ಪೌರಕಾರ್ಮಿಕರಿಗೆ ಆತ್ಮಸ್ಟೈರ್ಯ ತುಂಬಿದರು.ಈ ವೇಳೆ ಪೌರಕಾರ್ಮಿಕರಾದ ಗಂಗಮ್ಮ ಸಿದ್ರಾಂಪುರ, ಪ್ರೇಮವ್ವ ಕಣೇಕಲ್, ರಾಧಾ ಬಾಗಳೂರ, ನಿಂಗಮ್ಮ ಕದ್ರಳ್ಳಿ, ಕೃಷ್ಣಪ್ಪ ಹೂಗಾರ, ದ್ಯಾಮವ್ವ ಗಬ್ಬೂರ ಸೇರಿದಂತೆ ಹಲವರಿದ್ದರು.
18ಎಚ್‌ಯುಬಿ22, 23ಹುಬ್ಬಳ್ಳಿಯ ಮಹಾನಗರ ಪಾಲಿಕೆ ಎದುರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 8 ದಿನಗಳಿಂದ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಭೇಟಿ ನೀಡಿ ಸಮಸ್ಯೆ ಆಲಿಸಿದರು.