ಸಾರಾಂಶ
ಮಧ್ಯಸ್ಥಿತಿಕೆ ವಹಿಸಲು ಗವಿಸಿದ್ಧೇಶ್ವರ ಸ್ವಾಮೀಜಿಗೆ ಪತ್ರ
ಗವಿಮಠ ಪರಂಪರೆಯಲ್ಲಿಯೇ ಇದು ಮೊದಲುಸ್ವಾಮೀಜಿಗಳ ಬಳಿ ಸೆ. 22ರಂದು ಹೋಗಲು ಸತಿ, ಪತಿಗಳಿಬ್ಬರಿಂದ ಸಮ್ಮತಿ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ವಿಚ್ಛೇದನ ಕೋರಿ ಬಂದಿದ್ದ ಸತಿ, ಪತಿಗಳಿಬ್ಬರನ್ನು ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತ್ ಗವಿಸಿದ್ಧೇಶ್ವರ ಸ್ವಾಮೀಜಿಗಳ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಂಡು, ಒಂದಾಗಿ ಬಾಳಿ ಎಂದು ಹೇಳಿ ಕಳುಹಿಸಿರುವ ಅಪರೂಪದ ಘಟನೆ ನಡೆದಿದೆ.ಗದಗ ಜಿಲ್ಲೆಯ ಮೂಲದ ಸತಿ, ಪತಿಗಳಿಬ್ಬರು ಧಾರಾವಾಡ ಹೈಕೋರ್ಟಿನಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವಿವಾಹ ವಿಚ್ಛೇದನ ಕೋರಿ ಬಂದಿದ್ದ ಸತಿ, ಪತಿಗಳಿಬ್ಬರಿಗೂ ಬುದ್ಧಿವಾದ ಹೇಳಿದ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತ, ಗಂಡ ಹೆಂಡತಿ ಎಂದರೆ ಸಮಸ್ಯೆ ಇರುವುದೇ, ಯಾರ ಬಾಳಲ್ಲಿ ಇಲ್ಲ ಹೇಳಿ ಸಮಸ್ಯೆ. ಹಾಗೆ ಸಮಸ್ಯೆಗಳನ್ನೇ ಮುಂದೆ ಮಾಡಿಕೊಂಡು ಬೇರೆಯಾಗುವುದು ಸರಿಯಲ್ಲ. ರಸ್ತೆ ಎಂದರೆ ಮೇಲೆ ನೇರವಾಗಿಯೇ ಇರುವುದಿಲ್ಲ, ತಿರುವುಗಳು ಇರುತ್ತವೆ, ಉಬ್ಬುಗಳು ಇರುತ್ತವೆ. ನೋಡಿಕೊಂಡು ಸಾಗಬೇಕು. ಹಾಗೆಯೇ ಸಂಸಾರ ಎಂದರೂ ಸಹ ಭಿನ್ನಾಭಿಪ್ರಾಯ, ಮನಸ್ತಾಪಗಳು ಇದ್ದಿದ್ದೆ, ಅದನ್ನು ಮೀರಿಯೂ ಹೊಂದಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಮಾನಸಿಕವಾಗಿ ಸಮಸ್ಯೆ ಇದ್ದರೆ ಮನೋವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮನಸ್ಸು ಸಹ ಒಂದು ಅಂಗ ಎನ್ನುವುದನ್ನು ಮರೆತುಬಿಡುತ್ತೇವೆ. ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ ಎಂದು ನ್ಯಾಯಾಧೀಶರು ಸಲಹೆ ನೀಡುತ್ತಾರೆ. ಆಗ ಅವರಿಬ್ಬರು ಈಗಾಗಲೇ ಮನೋವೈದ್ಯರ ಬಳಿಯೂ ಹೋಗಿದ್ದೇವೆ ಎನ್ನುತ್ತಾರೆ.ಆಗ ಯಾರಾದರೂ ಮಠಾಧೀಶರ ಬಳಿ ಹೋಗಿ ಎಂದು ನ್ಯಾಯಮೂರ್ತಿ ಸಲಹೆ ನೀಡುತ್ತಾರೆ. ಪತಿ ಗದಗಿನ ತೋಂಟದಾರ್ಯ ಮಠದ ಸ್ವಾಮೀಜಿಗಳ ಬಳಿ ಹೋಗುತ್ತೇವೆ ಎನ್ನುತ್ತಾನೆ. ಆದರೆ, ಸತಿ ಇದಕ್ಕೆ ಸಮ್ಮತಿಸುವುದಿಲ್ಲ. ಆಗ ಅವರು ನೀನು ಹೇಳು ಯಾವ ಸ್ವಾಮೀಜಿಯ ಬಳಿ ಹೋಗುತ್ತಿರಿ ಎಂದು ಪತ್ನಿಗೆ ಪ್ರಶ್ನಿಸುತ್ತಾರೆ. ಆಕೆ, ನಾವು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳ ಬಳಿ ಹೋಗುತ್ತೇವೆ ಎನ್ನುತ್ತಾಳೆ.
ನ್ಯಾಯಮೂರ್ತಿ ಒಳ್ಳೆಯದೇ ಆಯಿತು, ಅವರು ಸ್ವಾಮಿ ವಿವೇಕಾನಂದರು ಇದ್ದಂತೆ ಇದ್ದಾರೆ. ಅವರ ಭಾಷಣ ಕೇಳಿದ್ದೇನೆ, ಅವರು ಸಾಕಷ್ಟು ಅರಿತುಕೊಂಡಿದ್ದಾರೆ. ಅವರ ಬಳಿಯೇ ಹೋಗಿ ಎಂದಾಗ ಸತಿ, ಪತಿಗಳಿಬ್ಬರು ಸಮ್ಮತಿಸುತ್ತಾರೆ.ನ್ಯಾಯಮೂರ್ತಿಗಳು ಕೊಪ್ಪಳ ಸಂಸ್ಥಾನ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಸಂದೇಶವನ್ನು ಪೋಸ್ಟ್ ಹಾಗೂ ಇ ಮೇಲ್ ಮೂಲಕ ಕಳುಹಿಸಲು ಆದೇಶಿಸುತ್ತಾರೆ.
ಇಬ್ಬರ ಸಹಮತದ ಮೇರೆಗೆ ಸೆ. 22ರಂದು ಕೊಪ್ಪಳ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಬಳಿಗೆ ಹೋಗಲು ಆದೇಶಿಸಿದ್ದಾರೆ.ವಿಶೇಷ ಪ್ರಕರಣ:ಗವಿಮಠ ಪರಂಪರೆಯಲ್ಲಿಯೇ ಇದು ವಿಶೇಷ ಪ್ರಕರಣ. ಇದೇ ಮೊದಲ ಬಾರಿಗೆ ಧಾರವಾಡ ಹೈಕೋರ್ಟ್ ನ್ಯಾಯಾಮೂರ್ತಿಗಳು ವಿಚ್ಛೇದನ ಕೋರಿ ಬಂದಿದ್ದ ಸತಿ, ಪತಿಗಳನ್ನು ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಮಾಡಿಕೊಳ್ಳುವಂತೆ ಪತ್ರದೊಂದಿಗೆ ಕಳುಹಿಸಿದ್ದಾರೆ.ಮೌನದಲ್ಲಿರುವ ಶ್ರೀಗಳು:
ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಸೆ. 17ರಿಂದ ಮೌನಾನುಷ್ಠಾನದಲ್ಲಿದ್ದಾರೆ.ಸಾಮಾನ್ಯವಾಗಿ ವಾರಕ್ಕೊಂದು ಬಾರಿ ಮಂಗಳವಾರ ಮೌನಾನುಷ್ಠಾನ ಮಾಡುತ್ತಿದ್ದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಈ ಬಾರಿ ಅದನ್ನು ಕೆಲವು ದಿನ ಮುಂದುವರೆಸಿದ್ದಾರೆ.