ಕಲಿಯುಗದಲ್ಲಿ ಸುಳ್ಳೆ ಸಂಸಾರ

| Published : Mar 05 2025, 12:30 AM IST

ಸಾರಾಂಶ

ಯಾವುದೋ ಸಮುದಾಯ ಮೆಚ್ಚಿಸಲು ಅನೇಕ ಸತ್ಯ ಮುಚ್ಚಿಟ್ಟು ಹಿಂದೂ ಸಮಾಜವನ್ನು ಗೋಳಾಡಿಸಿ,ಬಗ್ಗು ಬಡಿಯಲಾಗಿದೆ

ಯಲ್ಲಾಪುರ: ಕಲಿಯುಗದಲ್ಲಿ ಸುಳ್ಳೇ ಸಂಸಾರವಾಗಿದೆ. ಹೇಳಿದ ಒಂದು ಸುಳ್ಳಿಗೆ ನೂರು, ಸಾವಿರ ಸುಳ್ಳು ಹೇಳುವ ಮೂಲಕ ಸುಳ್ಳಿನ ಸರಮಾಲೆ ಕಟ್ಟಬೇಕಾಗುತ್ತದೆ. ಸುಳ್ಳು ಹೇಳುವುದನ್ನೇ ಬಿಟ್ಟರೆ ಅಡಗಿಕೊಳ್ಳುವ ಪ್ರಮೇಯವೇ ಬರದು.ಈ ನಾಟಕದ ಮೂಲಕ ರಚನಾಕಾರರು ಸತ್ಯದ ಅನಾವರಣ ಮಾಡಿದ್ದಾರೆ ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಅವರು ತಾಲೂಕಿನ ಮಂಚಿಕೇರಿಯಲ್ಲಿ ಶಿರಸಿಯ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕೊಡಗಿನ ರಂಗಭೂಮಿ ಟ್ರಸ್ಟ್ ಪ್ರಸ್ತುತಪಡಿಸಿದ ಸತ್ಯವನ್ನೇ ಹೇಳುತ್ತೇನೆ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾಟಕ ರಚಿಸಿ, ನಿರ್ದೇಶಿಸಿದ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಯಾವುದೋ ಸಮುದಾಯ ಮೆಚ್ಚಿಸಲು ಅನೇಕ ಸತ್ಯ ಮುಚ್ಚಿಟ್ಟು ಹಿಂದೂ ಸಮಾಜವನ್ನು ಗೋಳಾಡಿಸಿ,ಬಗ್ಗು ಬಡಿಯಲಾಗಿದೆ. ನಮ್ಮನ್ನಾಳಿದವರು ಆಡಿದ ಮಾತನ್ನೇ ಇತಿಹಾಸ ಎಂದು ನಂಬಿದ್ದೇವೆ. ಮುಚ್ಚಿಟ್ಟ ಸತ್ಯ ಬಿಚ್ಚಿಡುವ ಪ್ರಯತ್ನ ಈ ನಾಟಕದಲ್ಲಿ ಮಾಡಲಾಗಿದೆ. ಇದು ರಂಗಯಜ್ಞದಲ್ಲಿ ಭಾರತ ಮಾತೆಗೆ ನೀಡಿದ ಹವಿಸ್ಸು. ಇಲ್ಲಿನ ಪ್ರತಿ ವಾಕ್ಯ,ಸಂಭಾಷಣೆಗೂ ನಾನೇ ಜವಾಬ್ದಾರನಾಗಿದ್ದೇನೆ'''' ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನಾವು ಕಾಶ್ಮೀರದಲ್ಲಿ ರಕ್ತ ಹರಿಸಿದವರನ್ನು ಉಗ್ರಗಾಮಿ ಎನ್ನುತ್ತಿದ್ದೇವೆ.ಆದರೆ, ಅಂದಿನ ಸಂದರ್ಭದಲ್ಲಿ ರಕ್ತವನ್ನು ಬಸಿದು ಸ್ವಾತಂತ್ರಕ್ಕಾಗಿ ಹೋರಾಡಿದವರನ್ನು ಉಗ್ರಗಾಮಿ ಎಂದು ಗುರುತಿಸಲಾಗುತ್ತಿತ್ತು. ಸತ್ಯದ ಮರೆಮಾಚಿ, ಕರಾಳ ಸತ್ಯ ಅದುಮಿ ಸುಳ್ಳಿನ ಇತಿಹಾಸ ವೈಭವೀಕರಿಸಿದ್ದರು. ಇದೀಗ ಬಚ್ಚಿಡಲಾದ ಸತ್ಯ ಹೊರಬರುವ ಮೂಲಕ ಜನರಲ್ಲಿ ವಾಸ್ತವದ ಚಿತ್ರಣ ಮೂಡಿಸಲಾಗುತ್ತಿದೆ'''' ಎಂದರು.

ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ಸಾಂದರ್ಭಿಕ ಮಾತನಾಡಿದರು.

ರಂಗಕರ್ಮಿ ಆರ್.ಎನ್. ಭಟ್ಟ ದುಂಡಿ, ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಸಾಮಾಜಿಕ ಕಾರ್ಯಕರ್ತ ಪ್ರಸಾದ ಹೆಗಡೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ವೇದಿಕೆಯಲ್ಲಿದ್ದರು. ಅನಂತಮೂರ್ತಿ ಹೆಗಡೆ ಸ್ವಾಗತಿಸಿದರು. ಪ್ರಕಾಶ ಭಟ್ಟ ವಂದಿಸಿದರು.