ಕನ್ನಡದ ಮೇಲಿನ ಅಭಿಮಾನವನ್ನು ಆಚರಣೆಗೆ ಸೀಮಿತಗೊಳಿಸದೆ ಪ್ರತಿನಿತ್ಯದ ಜೀವನದಲ್ಲಿ ಮಾತೃಭಾಷೆಯಾಗಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು ಹಾಗೂ ಕನ್ನಡವನ್ನು ಬೆಳೆಸಬೇಕು ಎಂದು ಕಲ್ಮಠದ ಗುರುಸಿದ್ಧ ಮಹಾಸ್ವಾಮೀಜಿ ಹೇಳಿದರು.
ಗುತ್ತಲ: ಕನ್ನಡದ ಮೇಲಿನ ಅಭಿಮಾನವನ್ನು ಆಚರಣೆಗೆ ಸೀಮಿತಗೊಳಿಸದೆ ಪ್ರತಿನಿತ್ಯದ ಜೀವನದಲ್ಲಿ ಮಾತೃಭಾಷೆಯಾಗಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಬೇಕು ಹಾಗೂ ಕನ್ನಡವನ್ನು ಬೆಳೆಸಬೇಕು ಎಂದು ಕಲ್ಮಠದ ಗುರುಸಿದ್ಧ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ರುದ್ರಮುನಿ ಶಿವಯೋಗಿಗಳ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಿದ 71ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀಗಳು, ಕರ್ನಾಟಕ ರಾಜ್ಯವಾಗುವ ಮೊದಲು ಅನೇಕ ಸಾಮ್ರಾಜ್ಯಗಳು ರಾಜ ವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡನಾಡನ್ನು ಒಂದು ಮಾಡಿದ ಹೆಮ್ಮೆಯ ದಿನವಾಗಿದ್ದು, ಬಹು ಭಾಷೆ, ಬಹು ಸಂಸ್ಕೃತಿ, ಬಹು ಮಾದರಿಯ ಜನಾಂಗ, ವೈವಿಧ್ಯತೆಯಿಂದ ಕೂಡಿದ ಕರುನಾಡು ಎಂದರು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ವಚನಕಾರರ, ಶರಣರ, ಸಂತರ ಕೊಡುಗೆ ಅಪಾರ, ಅನುಭವ ಮಂಟಪದಲ್ಲಿ ಅಲ್ಲಮ ಪ್ರಭು, ಜಗಜ್ಯೋತಿ ಬಸವಣ್ಣ, ಅಕ್ಕ ಮಹಾದೇವಿ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ ಸೇರಿದಂತೆ ಅನೇಕರು ವಚನ ಕ್ರಾಂತಿಯ ಮೂಲಕ ಕನ್ನಡದ ಇಂಪನ್ನು ನಾಡಿನೆಲ್ಲೆಡೆ ಪಸರಿಸಿದರು. ಪಟ್ಟಣದ ಯುವಕರು ಕನ್ನಡ ನಾಡಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ ಆಚರಣೆ ಮಾಡುತ್ತಿರುವುದು ಕನ್ನಡ ನಾಡಿನ ಮೇಲಿರುವ ಮಹತ್ವವನ್ನು ತಿಳಿಸುತ್ತದೆ ಎಂದರು.ಪಿಎಸ್ಐ ಅಂಬಿಗೇರ ಮಾತನಾಡಿ, ಭಾರತ ದೇಶ ಅದರಲ್ಲು ಕರ್ನಾಟಕ ರಾಜ್ಯದಲ್ಲಿ ಜನಿಸಿದ ನಾವು ಪುಣ್ಯವಂತರು. ಕನ್ನಡ ನಾಡು, ನುಡಿಯ ಬಗ್ಗೆ ಹೆಚ್ಚಿನ ಅಭಿಮಾನವಿರಬೇಕು ಎಂದರು.ಮುಖ್ಯೋಪಾಧ್ಯಾಯರಾದ ಎಂ.ಬಿ. ಕೋಡಬಾಳ ಮಾತನಾಡಿ, ನವೆಂಬರ್ 1 ಕನ್ನಡಿಗರ ಪಾಲಿಗೊಂದು ನಾಡ ಹಬ್ಬವಿದ್ದಂತೆ, ಕನ್ನಡ ಭಾಷೆಗೆ ತನ್ನದೇ ಆದ ವಿಶೇಷವಾದ ಮಹತ್ವವಿದ್ದು ಕನ್ನಡ ಭಾಷೆಗೆ ಸುಮಾರು ವರ್ಷಗಳ ಇತಿಹಾಸವಿದೆ. ಕರುನಾಡ ಜನರ ಉಸಿರಿನಲ್ಲಿ ಕನ್ನಡ ಭಾಷೆ ಹಸಿರಾಗಿ ಉಳಿದಿದೆ, ಆಲೂರ ವೆಂಕಟರಾಯ, ಬಿ.ಎಂ. ಶ್ರೀಕಂಠಯ್ಯ, ಟಿ.ಪಿ. ಕೈಲಾಸಂ, ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ ಸೇರಿದಂತೆ ಅನೇಕ ಮಹನೀಯರು ಕನ್ನಡಕ್ಕಾಗಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಧ್ವಜಾರೋಹಣದ ನಂತರ ಜಯ ಕರ್ನಾಟಕ ಆಟೋ ಚಾಲಕ ಹಾಗೂ ಮಾಲಿಕರ ಸಂಘದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ನಡೆಸಿ, ನಂತರ ಅನ್ನ ಸಂತರ್ಪಣೆ ಜರುಗಿತು.ಕಾರ್ಯಕ್ರಮದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಚನ್ನಪ್ಪ ಕಲಾಲ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಸೊಪ್ಪಿನ, ಸದಸ್ಯ ಆರ್.ಎಸ್. ಸಾಲಿಮಠ, ಪ.ಪಂ ಸದಸ್ಯ ಪ್ರದೀಪ ಸಾಲಗೇರಿ, ಜಗದೇವಯ್ಯ ಕೂಡಲಮಠ, ಮಂಜುನಾಥ ಯರವಿನತಲಿ, ಕುಮಾರ ಚಿಗರಿ, ರಾಜಶೇಖರ ಕೂಡಲಮಠ, ಗುರುಪ್ರಸಾದ ಸಾಗರ, ವಿನಯ ಕೂಡಲಮಠ, ಜಯ ಕರ್ನಾಟಕ ಆಟೋ ಚಾಲಕ ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಬಾಬಣ್ಣ ಆಲದಗೇರಿ, ಮಲ್ಲಪ್ಪ ಜಾಲಮ್ಮನವರ, ಗುಡ್ಡಪ್ಪ ಹಡಗಲಿ, ನಿಂಗಪ್ಪ ಹಡಗಲಿ, ನಾಗರಾಜ ಆರೇರ, ಸಂತೋಷ ಶೆಟ್ಟೆಪ್ಪನವರ, ಅಜ್ಜಪ್ಪ ಗಿರಿಯಪ್ಪನವರ, ಪರಸಪ್ಪ ಕೋಟೆಗಾರ, ಅಶೋಕ ಕಿತ್ತೂರ, ದಾದಾಪೀರ ಗಳಗನಾಥ, ಪಕ್ಕಿರಯ್ಯ ನಂದಿಕೋಲಮಠ, ಹೊನ್ನಪ್ಪ ಆರಿಕಟ್ಟಿ, ಮಾಂತೇಶ ಕೋಟೆರ, ನಾಗರಾಜ ಕೋಟೆರ, ದ್ಯಾಮಪ್ಪ ಕನವಳ್ಳಿ, ಸಾಧಿಕ್ ಸಾಂಗ್ಲಿ, ರಾಜು ಚನ್ನದಾಸರ, ಆರೀಪ ಖಾಜಿ, ಪೇದೆಗಳಾದ ಸುರೇಂದ್ರ ಸನದಿ ಹಾಗೂ ಹಿಂದೂ ಜಾಗರಣ ವೇದಿಕೆ ಸದಸ್ಯರು ಸೇರಿದಂತೆ ಅನೇಕರಿದ್ದರು.