ನರಸಿಂಹರಾಜಪುರಕೆಲವೇ ಸಾಹಿತಿಗಳು, ಕನ್ನಡ ಅಭಿಮಾನಿಗಳಿಂದ ಪ್ರಾರಂಭಗೊಂಡ ಸಾಹಿತ್ಯ ಪರಿಷತ್ ಇಂದು ಬೃಹದಾಕಾರವಾಗಿ ಬೆಳೆದು ಕನ್ನಡಗಿರ ಅಸ್ಮಿತೆ ಹೆಚ್ಚಿಸಿದೆ ಎಂದು ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬೆಮ್ಮನೆ ದಯಾನಂದ್ ತಿಳಿಸಿದರು.

ತಾಲೂಕು ಕ.ಸಾ.ಪರಿಷತ್ ಆಶ್ರಯದಲ್ಲಿ 112 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೆಲವೇ ಸಾಹಿತಿಗಳು, ಕನ್ನಡ ಅಭಿಮಾನಿಗಳಿಂದ ಪ್ರಾರಂಭಗೊಂಡ ಸಾಹಿತ್ಯ ಪರಿಷತ್ ಇಂದು ಬೃಹದಾಕಾರವಾಗಿ ಬೆಳೆದು ಕನ್ನಡಗಿರ ಅಸ್ಮಿತೆ ಹೆಚ್ಚಿಸಿದೆ ಎಂದು ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬೆಮ್ಮನೆ ದಯಾನಂದ್ ತಿಳಿಸಿದರು.

ಮಂಗಳವಾರ ಸಂಜೆ ತಾಲೂಕು ಕಸಾಪದಲ್ಲಿ ನಡೆದ 112 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾಹಿತ್ಯ ಪರಿಷತ್‌ ಉದಯ, ಉದ್ದೇಶ ಹಾಗೂ ನಡೆದು ಬಂದ ದಾರಿ ಬಗ್ಗೆ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯದ ಏಕೈಕ ಸ್ವಾಯುತ್ತ ಸಂಸ್ಥೆ. ಕಸಾಪ ಪ್ರತಿ ವರ್ಷ ರಾಜ್ಯ ಸಮ್ಮೇಳನ, ಜಿಲ್ಲಾ ಹಾಗೂ ತಾಲೂಕು ಸಮ್ಮೇಳನ ನಡೆಸುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಹೋಬಳಿ ಘಟಕ ಪ್ರಾರಂಭವಾಗಿದ್ದು ಆ ಘಟಕದಿಂದಲೂ ಕನ್ನಡ ಕಾರ್ಯಕ್ರಮ ನಡೆಸುತ್ತಿದೆ. ಪ್ರಸ್ತುತ ವರ್ಷಗಳಲ್ಲಿ ಕಸಾಪ ಗ್ರಾಮೀಣ ಭಾಗದ ಜನರಿಗೂ ತಲುಪಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಶಾಲೆಗಳಲ್ಲಿ ಮಕ್ಕಳು ಕಡಿಮೆ ಯಾಗಿ ಕನ್ನಡ ಸರ್ಕಾರಿ ಶಾಲೆ ಮುಚ್ಚುವ ಹಂತ ತಲಪಿದ್ದು ವಿಷಾದದ ಸಂಗತಿ. ಕನ್ನಡ ಶಾಲೆ ಉಳಿಸಲು ಪ್ರತಿಯೊಬ್ಬ ಕನ್ನಡಿಗರು ಪ್ರಯತ್ನ ನಡೆಸಬೇಕಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳ ಹಾಗೂ ಅವರ ಗ್ರಂಥಗಳ ಪರಿಚಯ ಮಾಡಿಕೊಡಬೇಕು. ನರಸಿಂಹರಾಜಪುರದಲ್ಲಿ ಕನ್ನಡಭವನ ಅಗತ್ಯವಿದ್ದು ಸರ್ಕಾರ ಕನ್ನಡ ಭವನಕ್ಕೆ ನಿವೇಶನ ನೀಡಬೇಕು. ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ನೀಡುವ ಅನುದಾನ ಕಡಿಮೆ ಇದ್ದು ಇದನ್ನು ಜಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಸಾಪದಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಗುವುದು. ಯಾವುದೇ ಸಂಸ್ಥೆ ಚೆನ್ನಾಗಿ ನಡೆಯಬೇಕಾದರೆ ಎಲ್ಲಾ ಸದಸ್ಯರು ಒಂದು ತಂಡವಾಗಿ ಕೆಲಸ ಮಾಡಬೇಕು. ಸಂಘಟನೆ, ಕ್ರಿಯಾಶೀಲತೆ ಹಾಗೂ ಬದ್ದತೆಯಿಂದ ಕೆಲಸ ಮಾಡಿದರೆ ಜನರಿಗೆ ತಲುಪಲು ಸಾದ್ಯ ಎಂದರು.

ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಕನ್ನಡದ ಕಟ್ಟಾಳುಗಳಾದ ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿ ಕರ್ನಾಟಕ ಸಾಹಿತ್ಯ ಪರಿಷತ್‌ ಎಂಬ ಹೆಸರಿನಲ್ಲಿ ಹುಟ್ಟು ಹಾಕಿದ್ದರು. ನಂತರ ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣ ಮಾಡಲಾಯಿತು. ಸಾಹಿತ್ಯ ಪರಿಷತ್ ಪ್ರಾರಂಭವಾಗಿ 112 ವರ್ಷ ಕಳೆದಿದೆ. ಬೆರಳೆಣಿಕೆಯಷ್ಟು ಜನರು ಇದ್ದ ಕನ್ನಡಸಾಹಿತ್ಯ ಪರಿಷತ್ ಇಂದು ಲಕ್ಷಾಂತರ ಸದಸ್ಯರ ಒಳಗೊಂಡಿದೆ ಎಂದರು.

21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಎಂ.ಜಯಮ್ಮ ಉದ್ಘಾಟಸಿದರು. ಸಭೆಯಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್, ಜೇಸಿ ಸದಸ್ಯರಾದ ಅಪೂರ್ವ ರಾಘು, ಮಿಥುನ್ ಗೌಡ, ಕ.ಸಾ.ಪ ಸದಸ್ಯರಾದ ತಕ್ಷಕ್ ಕುಮಾರ್, ಸುಷ್ಮಾ ಯಗಾಂದರ್, ಹಿರಿಯ ಸದಸ್ಯ ಪಿ.ಸಿ.ಮ್ಯಾಥ್ಯೂ,ಯುಗಾಂದರ್, ಸುಪ್ರೀತ, ಹಿರೇನಲ್ಲೂರು ಶ್ರೀನಿವಾಸ್, ಕು. ಹರಿಪ್ರಿಯ ಇದ್ದರು.

ಗಾಯಕರಾದ ಹಿರೇನಲ್ಲೂರು ಶ್ರೀನಿವಾಸ್, ಸುಷ್ಮಾ ಯುಗಾಂಧರ್ ನಾಡ ಗೀತೆ ಹಾಗೂ ಕನ್ನಡ ಗೀತೆಗಳನ್ನು ಹಾಡಿದರು.ಅಪೂರ್ವ ರಾಘು ಸ್ವಾಗತಿಸಿದರು. ಸುಷ್ಮಾ ಯುಗಾಂದರ್ ಕಾರ್ಯಕ್ರಮ ನಿರೂಪಿಸಿದರು.ಹಿರೇನಲ್ಲೂರು ಶ್ರೀನಿವಾಸ್ ವಂದಿಸಿದರು.