ಅರಸು ಸಾಮಾಜಿಕ ಕ್ರಾಂತಿಯ ಹರಿಕಾರ: ಮುಂಡರಗಿ ನಾಗರಾಜ

| Published : Aug 21 2025, 01:00 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯದಲ್ಲಿ ಭೂ ಒಡೆತನ, ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದುಕೊಟ್ಟ ಸಾಮಾಜಿಕ ಕ್ರಾಂತಿಯ ಹರಿಕಾರ.

ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯದಲ್ಲಿ ಭೂ ಒಡೆತನ, ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದುಕೊಟ್ಟ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್‌) ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವರಾಜ ಅರಸು ಅವರು 1972ರಿಂದ 1980ರವರೆಗೆ ಮುಖ್ಯಮಂತ್ರಿಯಾಗಿದ್ದರು. ಅವರು ಕರ್ನಾಟಕದ ಅಪರೂಪದ ರಾಜಕಾರಣಿ. ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು.

ಉಳುವವನೆ ಭೂಮಿ ಒಡೆಯ ಕಾಯ್ದೆಯ ಪರಿಣಾಮವಾಗಿ ಚಿಕ್ಕ ಸಮುದಾಯದವರು ಸಹ ಭೂಮಿ ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.

ದೇವರಾಜು ಅರಸು ಹಲವು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಅನುಕೂಲ ಮಾಡಿಕೊಟ್ಟರು. ದಕ್ಷ ಆಡಳಿತಗಾರ ಆಗಿದ್ದ ಅವರು ಎಲ್.ಜಿ.ಹಾವನೂರು ವರದಿ ಜಾರಿಗೊಳಿಸಿ ಸಣ್ಣ, ಶೋಷಿತ ಸಮುದಾಯಕ್ಕೆ ನೆರವಾದರು ಎಂದರು.

ಇಂದಿನ ಯುವ ಪೀಳಿಗೆಯು ಮೊಬೈಲ್ ಗೀಳಿಗೆ ಬೀಳಬಾರದು. ಅದರಿಂದ ಒಳ್ಳೆಯ ವಿಚಾರಗಳನ್ನು ಮಾತ್ರ ಆಸ್ವಾದಿಸಬೇಕು. ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಒಬ್ಬ ಮನುಷ್ಯ ದೇವರಾಗಲು ಸಾಧ್ಯವಿಲ್ಲ. ಅಂದಿನ ಸಮಯದಲ್ಲಿ ದೇವರಾಜು ಅರಸರನ್ನು ಬಡವರು, ದಲಿತರು, ಹಿಂದುಳಿದ ವರ್ಗದವರ ದೇವರೆಂದೇ ಭಾವಿಸಿದ್ದರು. ಯಾರೇ ಆದರೂ ಅಧಿಕಾರವನ್ನು ಒಳ್ಳೆಯ ಕೆಲಸಗಳಿಗಾಗಿಯೇ ವಿನಿಯೋಗಿಸದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಪಂಚ ಗ್ಯಾರಂಟಿ ಜಾರಿಗೊಳಿಸಿ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಸಮ ಸಮಾಜ ನಿರ್ಮಾಣಕ್ಕೆ ನಾಂದಿಹಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಅರಸು ಹಾದಿಯಲ್ಲೇ ಸಾಗುತ್ತಿದ್ದಾರೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ನಂತರ ‘ಸದ್ಭಾವನಾ ದಿನಾಚರಣೆ’ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅತಿಹೆಚ್ಚು ಅಂಕ ಪಡೆದ, ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹಾರಿಸ್ ಸುಮೇರ್, ಎಎಸ್ಪಿ ಕೆ.ಪಿ. ರವಿಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ ಎ.ಕೆ., ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ಚಂದ್ರಶೇಖರ್, ಮಹಾನಗರ ಪಾಲಿಕೆಯ ಸಭಾನಾಯಕ ಪಿ.ಗಾದೆಪ್ಪ, ಮುಖಂಡರಾದ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಗಾದಿಲಿಂಗನಗೌಡ, ಮಂಜುಳಾ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಹಿಂದುಳಿದ ವರ್ಗಗಳ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಇಲಾಖೆಯ ಅಧಿಕಾರಿ-ಸಿಬ್ಬಂದಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಹಣ ಮತ್ತು ಅಧಿಕಾರ ಒಂದೇ ಕಡೆ ಇರಬಾರದು:ಹಣ ಮತ್ತು ಅಧಿಕಾರ ಒಂದೇ ಕಡೆ ಇರಬಾರದು. ಇದ್ದರೆ ಅಲ್ಲಿ ಪ್ರಜಾಪ್ರಭುತ್ವ ಸತ್ತಂತೆ ಎಂದು ಅಭಿಪ್ರಾಯಪಟ್ಟವರು ಡಿ.ದೇವರಾಜು ಅರಸರು. ಅವರು ಜಾರಿಗೆ ತಂದ ಹಲವಾರು ಕಾಯ್ದೆ-ಕಾನೂನುಗಳು, ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಂದಿನ ಅಧಿಕಾರಿ ವರ್ಗವು ಪ್ರಮುಖ ಪಾತ್ರ ವಹಿಸಿತ್ತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಡಿ.ದೇವರಾಜ ಅರಸು ದೂರದೃಷ್ಟಿ ಹೊಂದಿದ ಬಹುತ್ವವಾದಿಯಾಗಿದ್ದರು. ವಿಧಾನಸೌಧದ ಮೆಟ್ಟಿಲು ಹತ್ತದವರನ್ನು ವಿಧಾನಸೌಧಕ್ಕೆ ಬರುವ ಹಾಗೆ ಮಾಡಿದವರು. ಅವರ ಕನಸುಗಳನ್ನು ಈಡೇರಿಸುವ ಹೊಣೆಗಾರಿಕೆ ಈಗಿನ ಯುವಕರ ಮೇಲಿದೆ ಎಂದರು.