ಅಗ್ನಿಕುಂಡವಾಗಿದ್ದ ಧರೆಗೆ ತಂಪೆರೆದ ಕೃತಿಕಾ ಮಳೆ

| Published : May 12 2024, 01:16 AM IST

ಅಗ್ನಿಕುಂಡವಾಗಿದ್ದ ಧರೆಗೆ ತಂಪೆರೆದ ಕೃತಿಕಾ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪ ಜನರನ್ನು ಹೈರಾಣು ಮಾಡಿತ್ತು. ಮಧ್ಯಾಹ್ನ 3ರಿಂದ ಸಣ್ಣದಾಗಿ ಶುರುವಾದ ಮಳೆ ಬಳಿಕ ರಭಸವಾಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳೆದ ಹಲವು ದಿನಗಳಿಂದ ಬಿರು ಬಿಸಿಲಿನಿಂದ ಬಸವಳಿದು ಅಕ್ಷರಶಃ ಅಗ್ನಿಕುಂಡವಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆಯಾಧ್ಯಂತ ಕೃತಿಕಾ ಮಳೆ ಆರಂಭದ ದಿನವೇ ಶನಿವಾರ ಸಂಜೆ ಆಲಿಕಲ್ಲು ಸಹಿತವಾಗಿ ಅಬ್ಬರದಿಂದ ಸುಳಿದು ತಂಪೆರೆಯಿತು.

ಜತೆಗೆ ಹಲವು ಅವಾಂತರಗಳನ್ನೂ ಸೃಷ್ಟಿಸಿ, ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಗಾಳಿ- ಮಳೆಯಿಂದಾಗಿ ಹತ್ತಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಹಲವೆಡೆ ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ. ನೂರಾರು ಮನೆಗಳಿಗೆ, ವಾಣಿಜ್ಯ ಸಂಕೀರ್ಣಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.

ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪ ಜನರನ್ನು ಹೈರಾಣು ಮಾಡಿತ್ತು. ಮಧ್ಯಾಹ್ನ 3ರಿಂದ ಸಣ್ಣದಾಗಿ ಶುರುವಾದ ಮಳೆ ಬಳಿಕ ರಭಸವಾಯಿತು. ಗುಡುಗು, ಮಿಂಚು, ಸಿಡಿಲು ಸಮೇತ ಸುರಿಯಲು ಆರಂಭಿಸಿದ ಮಳೆ ಕೆಲಹೊತ್ತಿನಲ್ಲೇ ಅವಾಂತರ ಸೃಷ್ಟಿಸಿತು.

ರಭಸದ ಮಳೆಯಿಂದಾಗಿ ನಗರದಲ್ಲಿನ ಬಹುತೇಕ ಚರಂಡಿಗಳು ತುಂಬಿ ಅದರಲ್ಲಿನ ಕೊಳಚೆಯೆಲ್ಲ ರಸ್ತೆ ಮೇಲೆ ಹರಿಯಲಾರಂಭಿಸಿತು. ವಾಹನ ಸವಾರರು ಹರಸಾಹಸ ಪಡುವಂತಾಯಿತು. ಇಲ್ಲಿನ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಬಳಿ ಇರುವ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ಸಂಪೂರ್ಣ ನೀರಿನಲ್ಲೇ ಮುಳುಗಿತ್ತು. ಅಂಬೇಡ್ಕರ್‌ ವೃತ್ತದಿಂದ ಹಿಡಿದು ಕೊಪ್ಪಿಕರ್‌ ರಸ್ತೆಯ ವರೆಗಿನ ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ಒಳಚರಂಡಿಗಳೆಲ್ಲ ಬಂದಾಗಿ ರಸ್ತೆಯ ಮೇಲೆ ನೀರು ನಿಂತು ಸವಾರರು ಸಂಚರಿಸಲು ಪರದಾಡಿದರು. ದಾಜಿಬಾನ್‌ಪೇಟೆ, ಕಾಯ್ವಿನ್‌ ರಸ್ತೆಯಲ್ಲಂತೂ ಮಳೆ ರಭಸಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನಗಳೆಲ್ಲ ಅರ್ಧಕ್ಕೂ ಹೆಚ್ಚು ಮುಳುಗಿದ್ದವು. ಕೆಲ ವಾಹನಗಳಂತೂ ಇನ್ನೇನು ತೇಲಾಡಿಕೊಂಡೇ ಹೋಗುತ್ತವೇನೋ ಎಂಬಂತೆ ಭಾಸವಾಗುತ್ತಿತ್ತು.

ಧಿಡೀರನೇ ಆಗಮಿಸಿದ ಮಳೆಯಿಂದಾಗಿ ಮಾರುಕಟ್ಟೆಗೆ ತರಕಾರಿ ಖರೀದಿಸಲು ಆಗಮಿಸಿದ್ದ ಜನರು ಮಳೆಯಲ್ಲಿಯೇ ತೊಯ್ದುಕೊಂಡು ಮನೆ ಸೇರುವಂತಾಯಿತು. ಕೆಲವರು ಮಾರುಕಟ್ಟೆಯಲ್ಲಿರುವ ಅಂಗಡಿಗಳ ಮುಂದೆ ಕೆಲಕಾಲ ಆಶ್ರಯ ಪಡೆದರೆ ಇನ್ನೂ ಕೆಲವರು ರಭಸದ ಮಳೆಯಾಗುತ್ತದೆ ಎಂಬ ಭಯದಲ್ಲಿ ಮಳೆಯಲ್ಲಿ ನೆನೆಯುತ್ತಲೇ ತಮ್ಮ ಮನೆಗೆ ವಾಪಸ್ಸಾದರು.

ಮರಗಳು ಧರಾಶಾಹಿ:

ಇಲ್ಲಿನ ಶಕ್ತಿಕಾಲನಿ, ಅರವಿಂದ ನಗರ, ನೆಹರು ಮೈದಾನ, ಕಾರವಾರ ರಸ್ತೆ, ಗೋಪನಕೊಪ್ಪ, ಇಸ್ಲಾಂಪುರ, ಗಿರಣಿ ಚಾಳ, ಹಳೆ ಮೇದಾರ ಓಣಿ, ಹಳೇಹುಬ್ಬಳ್ಳಿಯ ಕೆಲ ಪ್ರದೇಶಗಳಲ್ಲಿ ಮರಗಳು ನೆಲಕ್ಕುರುಳಿವೆ. ಹುಬ್ಬಳ್ಳಿಯ ಮಾಧವಪುರದಲ್ಲಿ ಟಿಸಿವೊಂದು ಸುಟ್ಟು ಹೋಗಿದೆ. ಕೊಪ್ಪಿಕ‌ರ್ ರಸ್ತೆ, ಆನಂದನಗರ ಮುಖ್ಯ ರಸ್ತೆ, ಹೊಸೂರ ವೃತ್ತ, ಸಿದ್ಧಾರೂಢಮಠ, ಹಳೇ ಇನ್‌ಕಂಟ್ಯಾಕ್ಸ್, ಜನತಾ ಬಜಾರ್, ದುರ್ಗದ್ ಬೈಲ್, ಕಮರಿಪೇಟೆ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ- ಧಾರವಾಡ ಮುಖ್ಯ ರಸ್ತೆಗಳಲ್ಲಿ ನೀರು ನಿಂತು ಸವಾರರು ಸಂಚರಿಸದಂತಹ ಪರಿಸ್ಥಿತಿ ಎದುರಾಯಿತು.

ಕೆಲವೆಡೆ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ರಸ್ತೆಗೆ ಬಾಗಿಕೊಂಡಿವೆ. ಇದರಿಂದಾಗಿ ನಗರದ ಹಲವು ವಾರ್ಡ್‌ಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಅರವಿಂದ ನಗರದಲ್ಲಿ ಬೃಹತ್‌ ಮರವೊಂದು ರಸ್ತೆಯ ಬದಿಗೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ತೀವ್ರ ಹಾನಿಯನ್ನುಂಟು ಮಾಡಿತು. ನೆಹರು ಕ್ರೀಡಾಂಗಣದ ಪಕ್ಕದಲ್ಲಿಯೇ ಬೃಹತ್‌ ಮರವೊಂದು ಧರೆಗುರುಳಿದ ಪರಿಣಾಮ 2 ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

ಇಲ್ಲಿನ ಜನತಾ ಬಜಾರ, ದುರ್ಗದಬೈಲ್‌ನಲ್ಲಿರುವ ಸಂತೆ ಮಾರುಕಟ್ಟೆ ಸೇರಿದಂತೆ ಗೋಪನಕೊಪ್ಪದಲ್ಲಿ ಪ್ರತಿ ಶನಿವಾರದ ಮಾರುಕಟ್ಟೆಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಇದಲ್ಲದೇ ಮಾರುಕಟ್ಟೆ ಪ್ರದೇಶದ ಇಕ್ಕೆಲಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿಯೇ ಮುಳುಗುವಂತಾಯಿತು.

ಒಟ್ಟಾರೆಯಾಗಿ ಶನಿವಾರ ಸುರಿದ ಮಳೆಯು ಧರೆಗೆ ತಂಪನ್ನೆರೆಯುವುದರೊಂದಿಗೆ ಹಲವು ಅವಾಂತರಕ್ಕೆ ಸಾಕ್ಷಿಯಾಯಿತು.

ಮನೆ, ಅಂಗಡಿಗೆ ನುಗ್ಗಿದ ನೀರು

ಹಳೇ ಹುಬ್ಬಳ್ಳಿ ಗಾರ್ಡನ್ ಪೇಟ, ಅಂಬೇಡ್ಕರ್ ಕಾಲನಿ, ತುಳಜಾಭವಾನಿ ದೇವಸ್ಥಾನ, ಮಹಾವೀರ ಗಲ್ಲಿ, ದಾಜಿಬಾನ್‌ ಪೇಟದಿಂದ ಮ್ಯಾದರ ಓಣಿಗೆ ಹೋಗುವ ರಸ್ತೆಯಲ್ಲಿ ಅಂಗಡಿ ಹಾಗೂ ಮನೆಗಳಿಗೆ ಚರಂಡಿ ನೀರು ನುಗ್ಗಿ ತೊಂದರೆ ಅನುಭವಿಸಿದರೆ, ಇನ್ನು ಇದೇ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ, ತ್ರಿಚಕ್ರ ವಾಹನಗಳು ಚರಂಡಿ ನೀರಿನಲ್ಲಿ ತೇಲಿಕೊಂಡು ಹೋಗಿವೆ. ಮಳೆ ಆಗಮಿಸುವ ಹಿನ್ನೆಲೆಯಲ್ಲಿ ಚರಂಡಿ ಸೇರಿದಂತೆ ಮುಖ್ಯ ರಸ್ತೆಯ ಕಾಲುವೆಗಳಲ್ಲಿನ ಹೂಳು ತೆಗೆಯದಿರುವುದರಿಂದ ಹಾಗೂ ಯಾವುದೇ ರೀತಿಯ ಮುಂಜಾಗೃತೆ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಅವಾಂತರ ಸೃಷ್ಟಿಯಾಗಿದ್ದು, ಸಾರ್ವಜನಿಕರು ಅವ್ಯವಸ್ಥೆಗೆ ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಯಿತು.ಮಳೆ ಅವಾಂತರದ ಫೋಟೋಗಳು...