ಸಂಪೂರ್ಣ ಹಾಳಾಗಿರುವ ಕುಂಟನಹೊಸಳ್ಳಿ-ಸಾಂವಸಗಿ ರಸ್ತೆ

| Published : Aug 25 2024, 01:56 AM IST

ಸಾರಾಂಶ

ಹಾನಗಲ್ಲ ತಾಲೂಕಿನ ಕುಂಟನಹೊಸಳ್ಳಿ ಹಾಗೂ ಸಾಂವಸಗಿ ಗ್ರಾಮದ ನಡುವಿನ ರಸ್ತೆ ಮಳೆ ಕಾರಣದಿಂದ ಹಾಳಾಗಿ ನೀರು ನಿಂತಿದ್ದು ದುರಸ್ತಿಯಿಲ್ಲದಿದ್ದರೆ ಕೃಷಿ ಚಟುವಟಿಕೆ ಸೇರಿದಂತೆ ಇಲ್ಲಿನ ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿದೆ.

ಹಾನಗಲ್ಲ; ತಾಲೂಕಿನ ಕುಂಟನಹೊಸಳ್ಳಿ ಹಾಗೂ ಸಾಂವಸಗಿ ಗ್ರಾಮದ ನಡುವಿನ ರಸ್ತೆ ಮಳೆ ಕಾರಣದಿಂದ ಹಾಳಾಗಿ ನೀರು ನಿಂತಿದ್ದು ದುರಸ್ತಿಯಿಲ್ಲದಿದ್ದರೆ ಕೃಷಿ ಚಟುವಟಿಕೆ ಸೇರಿದಂತೆ ಇಲ್ಲಿನ ಸಾರ್ವಜನಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿದೆ.ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಸಾಕಷ್ಟು ಇರುತ್ತದೆ. ಆದರೆ ಈ ರಸ್ತೆ ಸುಧಾರಣೆಗೊಂಡು ಸುಮಾರು ೧೨ ವರ್ಷವಾದರೂ ಈತನಕ ಇಲ್ಲಿ ನಿರ್ವಹಣೆ ಕಾಮಗಾರಿಗಳು ನಡೆದಿಲ್ಲ ಎಂದು ಕುಂಟನಹೊಸಳ್ಳಿ ಗ್ರಾಮಸ್ಥರು ಆರೋಪಿಸುತ್ತಾರೆ.ಸುಮಾರು ೩ ಕಿ.ಮೀ ಉದ್ದದ ಈ ರಸ್ತೆಗೆ ಅಡ್ಡಲಾಗಿ ಹರಿದ ಧರ್ಮಾ ನದಿಗೆ ಈಗಿರುವ ಸೇತುವೆ ತೆರವು ಮಾಡಿ ಮೇಲ್ಮಟ್ಟದ ಸೇತುವೆ ಪಿಡಬ್ಲುಡಿ ವತಿಯಿಂದ ನಿರ್ಮಿಸುವ ಉದ್ದೇಶದಿಂದ ಈ ಸ್ಥಳದಲ್ಲಿ ಕೆಲವಷ್ಟು ಅಂತರದ ರಸ್ತೆಯನ್ನು ಸುಧಾರಣೆ ಮಾಡಲಾಗಿದೆ.ಇನ್ನುಳಿದ ರಸ್ತೆ ಜಿ.ಪಂ. ವ್ಯಾಪ್ತಿಗೆ ಒಳಪಡುತ್ತಿದ್ದು, ರಸ್ತೆಯ ಅಲ್ಲಲ್ಲಿ ಆಳವಾದ ತಗ್ಗು, ಗುಂಡಿಗಳು ಸೃಷ್ಟಿಯಾಗಿವೆ. ಮಳೆ ನೀರು ಸಂಗ್ರಹಗೊಂಡ ಈ ಗುಂಡಿಯಲ್ಲಿ ಆಯತಪ್ಪಿ ಬೈಕ್ ಸವಾರರು ಬೀಳುತ್ತಾರೆ. ಯಾಮಾರಿದರೆ ಕಂಟಕ ಖಚಿತ:ಕುಂಟನಹೊಸಳ್ಳಿ ದೊಡ್ಡ ಕೆರೆಯ ದಂಡೆಯ ಮೇಲೆ ಈ ರಸ್ತೆ ಹಾಯ್ದುಹೋಗುತ್ತದೆ. ಕೆರೆ ದಂಡೆಗೆ ತಡೆಗೋಡೆ ರಕ್ಷಣೆ ಇಲ್ಲ. ರಾತ್ರಿ ಹೊತ್ತಿನಲ್ಲಿ ಇಲ್ಲಿ ಸಂಚಾರ ದುಸ್ತರ. ಸ್ವಲ್ಪ ಯಾಮಾರಿದರೂ ಭರ್ತಿಯಾಗಿರುವ ಕೆರೆಯಲ್ಲಿ ವಾಹನಗಳು ಬೀಳುವ ಸಂಭವವಿದೆ ಎಂದು ಗ್ರಾಮದ ಅಜ್ಜಪ್ಪ ಜಿಗಳಿ, ಶಶಿಧರ ಅರಳೇಶ್ವರ, ಸಚೀನ್ ಜಿಗಳಿ ಹೇಳುತ್ತಾರೆ.ಕುಂಟನಹೊಸಳ್ಳಿ ಸೇರಿದಂತೆ ಸುತ್ತಲಿನ ಸಾಕಷ್ಟು ಗ್ರಾಮಸ್ಥರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ರಸ್ತೆ ಬಹಳಷ್ಟು ಹಾಳಾಗಿದೆ. ನಾಲ್ಕೈದು ವರ್ಷದಿಂದ ಇದೇ ಗತಿ ಇದೆ. ಈ ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ದುಸ್ತರವಾಗಿದೆ. ಸಂಬಂಧಿಸಿದ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಬಸವನಗೌಡ ಹೊಟ್ಟೆಗೌಡ್ರ, ಅಜ್ಜಪ್ಪ ಅರಳೇಶ್ವರ, ನಾಗೇಂದ್ರ ಅರಳೇಶ್ವರ, ನಾಗೇಶ ಹಳ್ಳದ, ರುದ್ರಯ್ಯ ಹಿರೇಮಠ ಹೇಳುತ್ತಾರೆ.

ನೈಸರ್ಗಿಕ ವಿಪತ್ತುಗಳ ಕಾಮಗಾರಿಯ ಅಡಿಯಲ್ಲಿ ಕುಂಟನಹೊಸಳ್ಳಿ ರಸ್ತೆ ಸುಧಾರಣೆಗೆ ಅನುದಾನಕ್ಕಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆ ಬಳಿಕ ತೇಪೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ ಎಂದು ಜಿಪಂ ಸಹಾಯಕ ಎಂಜಿನಿಯರ್‌ ಐ.ಎನ್‌. ಖಾಜಿ ಹೇಳಿದರು.