ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕಂಪೆನಿಗಳಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬದುಕಿನ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಕೆಮಿಕಲ್ ದುರ್ನಾತ- ತ್ಯಾಜ್ಯ ಘಾಟುವಿನಿಂದಾಗಿ ಸುತ್ತಮುತ್ತಲ ಹಳ್ಳಿಗಳ ಜನರ ಮೇಲಷ್ಟೇ ಅಲ್ಲ, ಇಲ್ಲಿನ ವಿವಿಧೆಡೆ ಕೆಲಸ ಮಾಡುತ್ತಿರುವ ಕೆಲವು ಕಾರ್ಮಿಕರ ಬದುಕಿನ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ
ಕಂಪೆನಿ ಮುಖ್ಯಸ್ಥರ ದೂರಾಲೋಚನೆ । ತ್ಯಾಜ್ಯ ಘಾಟಿನಿಂದ ಪಾರಾಗಲು ವಾಸ । ಕಾರ್ಮಿಕರಿಗೆಲ್ಲ ಅನಿವಾರ್ಯದ ಬದುಕು
ಕನ್ನಡಪ್ರಭ ಸರಣಿ ವರದಿ ಭಾಗ 21ಆನಂದ್ ಎಂ.ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕಂಪೆನಿಗಳಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬದುಕಿನ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಕೆಮಿಕಲ್ ದುರ್ನಾತ- ತ್ಯಾಜ್ಯ ಘಾಟುವಿನಿಂದಾಗಿ ಸುತ್ತಮುತ್ತಲ ಹಳ್ಳಿಗಳ ಜನರ ಮೇಲಷ್ಟೇ ಅಲ್ಲ, ಇಲ್ಲಿನ ವಿವಿಧೆಡೆ ಕೆಲಸ ಮಾಡುತ್ತಿರುವ ಕೆಲವು ಕಾರ್ಮಿಕರ ಬದುಕಿನ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ. ಬಿಹಾರ್, ಉತ್ತರಪ್ರದೇಶ, ಒಡಿಶಾ ಮುಂತಾದ ಅನ್ಯರಾಜ್ಯಗಳಿಂದ ಕೆಲಸ ಮಾಡಲು ಬಂದವರಿಗೆ ಭದ್ರತೆಯ ಬಗ್ಗೆ ಆತಂಕವಿದೆಯಾದರೂ, ಅನಿವಾರ್ಯತೆಯಿಂದ ಅಲ್ಲಿ ಕೆಲ ನಿರ್ವಹಿಸುವಂತಾಗಿದೆ ಎಂಬ ಮಾತುಗಳಿವೆ.‘ತಮ್ಮ ಆಸ್ಪತ್ರೆಗೆ ಬರುವ ಬಹುತೇಕ ಕಾರ್ಮಿಕರು, ಉಸಿರಾಟ, ದಮ್ಮು ಕೆಮ್ಮಿನ ಕಾರಣದಿಂದ ಬಳಲುತ್ತಿರುತ್ತಾರೆ. ಮುಖ್ಯವಾಗಿ, ಅವರ ಕಣ್ಗಳು- ಕೈಕಾಲು- ಚರ್ಮ ನೀಲಿಕಂದುಗಟ್ಟಿ, ಇವರು ಕೆಮಿಕಲ್ ಕಾರ್ಖಾನೆಯ ಕಾರ್ಮಿಕರು ಅನ್ನೋದು ಸ್ಪಷ್ಟವಾಗಿ ಗೊತ್ತಾಗಿರುತ್ತದೆ. ಇಂತ ತೀವ್ರತರಹದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ನಾವು ಶಿಫಾರಸ್ಸು ಮಾಡುತ್ತೇವೆಯಾದರೂ, ಅವರು ತೆಲಂಗಾಣದ ಮೆಹಬೂಬ್‌ನಗರದತ್ತ ತೆರಳಿ, ಚಿಕಿತ್ಸೆ ಪಡೆಯುತ್ತಾರೆ. ಕೆಲವರು ಬರುತ್ತಾರೆ, ಕೆಲವರು ಬರುವುದಿಲ್ಲ..’ ಎಂದು ‘ಕನ್ನಡಪ್ರಭ’ಗೆ ಅಲ್ಲಿನ ಕರಾಳ ಕತೆಗಳನ್ನು ತಿಳಿಸಿದ ವೈದ್ಯರೊಬ್ಬರು, ಇದೇ ವಾತಾವರಣ ಮುಂದುವರಿದರೆ ಮುಂದಿನ ಐದಾರು ವರ್ಷಗಳಲ್ಲಿ ಜೀವನಕ್ಕೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಂಪನಿಗಳಲ್ಲಿ ಕೆಲಸ ಮಾಡುವ ಉನ್ನತ ದರ್ಜೆಯ ಅಧಿಕಾರಿಗಳು, ವ್ಯವಸ್ಥಾಪಕರು ಈ ಭಾಗದಲ್ಲಿ ಮನೆ ಮಾಡುವುದೇ ಇಲ್ಲವಂತೆ. ವಿಷಗಾಳಿಯ ಆತಂಕ, ತ್ಯಾಜ್ಯ ದುರ್ನಾತದ ಘಾಟು ಹಾಗೂ ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಮೊದಲೇ ಅರಿವಿರುವ ಅವರೆಲ್ಲ ಇಲ್ಲಿಂದ 30 ಕಿ.ಮೀ. ದೂರದಲ್ಲಿರುವ ತೆಲಂಗಾಣದ ಮಕ್ತಾಲ್, ಮೆಹಬೂಬ್ ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಲೇಬರ್ ಕ್ಲಾಸ್ ಮಾತ್ರ ಇಲ್ಲಿ ಮನೆಗಳ ಮಾಡ್ಕೊಂಡು ಇರ್ತಾರೆ ಎಂದೆನ್ನುವ ಸೈದಾಪುರದ ಮಲ್ಲಯ್ಯ, ಇಲ್ಲಿನವರಾಗಿದ್ದರೆ ಎಲ್ಲ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ತೆಲಂಗಾಣ ಹಾಗೂ ಅನ್ಯರಾಜ್ಯಗಳ ಕಂಪನಿಗಳೇ ಹೆಚ್ಚಿರುವ ಕಾರ್ಮಿಕರೂ ಸಹ ಹೊರಗಡೆ ಏನೂ ಹೇಳೋದಿಲ್ಲ. ಎಲ್ಲವನ್ನೂ ಗೌಪ್ಯವಾಗಿಡುತ್ತಾರೆ ಎಂದು ಹೇಳಿದರು.ತೆಲಂಗಾಣದ ಮೆಹಬೂಬ್ ನಗರ, ಮಕ್ತಾಲ್‌ಗಳಲ್ಲಿ ಇಲ್ಲಿನ ಕಾರ್ಮಿಕರು ಚಿಕಿತ್ಸೆ ಪಡೆಯುತ್ತಾರೆ. ಕಾರ್ಮಿಕರಿಗಂಟಿದ ರೋಗಗಳಿಗೆ ಏನು ಕಾರಣ ಎಂಬುದನ್ನು ಅಲ್ಲಿ ಪತ್ತೆ ಹಚ್ಚಲಾಗಿರುತ್ತದೆಯಾದರೂ, ಅಲ್ಲಿಂದ ಬರುವ ಯಾವುದೇ ತರಹದ ರಿಪೋರ್ಟ್‌ಗಳನ್ನು ಬಹಿರಂಗ ಮಾಡುವುದಿಲ್ಲ. ಇಲ್ಲಿನ ವಾತಾವರಣ, ಕಾರ್ಖಾನೆಗಳಲ್ಲಿ ಕಾರ್ಮಿಕರ ಬದುಕಿನ ಭದ್ರತೆಯ ಬಗ್ಗೆ ಯಾವುದೇ ಮಾಹಿತಿ ಸೋರಿಕೆಯಾದರೆ, ವಾಸ್ತವ ಚಿತ್ರಣ ಹೊರಬರುತ್ತದೆ ಎಂಬ ಕಾರಣಕ್ಕೆ ಎಲ್ಲವನ್ನೂ ಮರೆಮಾಚಲಾಗುದೆ ಎಂದು ಹೇಳಿದರು.
ಜನರಿಂದ ದೂರು ಕೇಳಿ ಬಂದಾಗ, ಪ್ರತಿಭಟನೆಗಳು ನಡೆದಾಗ ಅಥವಾ ವರದಿಗಳಾದಾಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿ ಬಂದು ನಡೆಸುವ ತಪಾಸಣೆ ಸಮಾಧಾನಕ್ಕೆ ಮಾತ್ರ ಎಂತಿರುತ್ತದೆ. ಆಳವಾದ ಪರಿಶೀಲನೆ- ಅಧ್ಯಯನ ನಡೆಸಿದರೆ ಸತ್ಯ ಹೊರಬರುತ್ತದೆ ಎಂಬುದು ಗೊತ್ತಿದ್ದರೂ ಸರ್ಕಾರದ ವಿರುದ್ಧ ಸರ್ಕಾರದ ಅಧಿಕಾರಿಗಳು ವರದಿ ಮಾಡುವುದಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸೈದಾಪುರದ ಭೀಮಣ್ಣ ಆಕ್ರೋಶ ಹೊರಹಾಕುತ್ತಾರೆ.ಮೂರನೇ ವ್ಯಕ್ತಿ ಅಥವಾ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಿಂದ ತಪಾಸಣೆ, ಅಧ್ಯಯನ ನಡೆಸಬೇಕು. ಇಲ್ಲವಾದಲ್ಲಿ ಇವರೆಲ್ಲ ಈ ಹಿಂದಿನಂತೆ ತಿಪ್ಪೆ ಸಾರಿಸಿದಂತೆ ವರದಿ ನೀಡಿ, ಇಲ್ಲಿ ವಾಸಿಸುತ್ತಿರುವ ಜನರದ್ದೇ ತಪ್ಪು, ಮೊದಲು ಇವರನ್ನೆಲ್ಲ ಇಲ್ಲಿಂದ ಸ್ಥಳಾಂತರಿಸಿ ಎಂದು ವರದಿ ಬರೆದು ಕೈ ತೊಳೆದುಕೊಳ್ಳುತ್ತಾರೆ ಎಂದು ದೂರಿದರು.