ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ಬನಹಟ್ಟಿ ಸಮೀಪದ ಜಾಕವೆಲ್ ಸುಮಾರು ೧ ಕಿ.ಮೀನಷ್ಟು ದೂರ ನೀರಿನಿಂದ ಸುತ್ತುವರೆದಿದ್ದು, ಅಲ್ಲಿರುವ ಕಾರ್ಮಿಕರು ೧೮ ದಿನಗಳಿಂದ ಅಲ್ಲೇ ಇದ್ದು ಅವಳಿ ನಗರಕ್ಕೆ ನೀರು ಒದಗಿಸುತ್ತಿದ್ದಾರೆ.ರಬಕವಿ-ಬನಹಟ್ಟಿ ಸಮೀಪದ ಮಹಿಷವಾಡಗಿ ಸೇತುವೆ ಬಳಿಯಿರುವ ರಬಕವಿ ಹಾಗೂ ಬನಹಟ್ಟಿ ನಗರಗಳಿಗೆ ನೀರು ಪೂರೈಕೆ ಘಟಕದಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರು ಲಕ್ಷಕ್ಕೂ ಜನತೆಗೆ ದಿನಂಪ್ರತಿ ನೀರು ಪೂರೈಕೆಯಲ್ಲಿ ತೊಡಗಿದ್ದಾರೆ. ಜಾಕವೆಲ್‌ಗೆ ತೆರಳುವ ರಸ್ತೆ ಸುಮಾರು ೧ ಕಿ.ಮೀ.ನಷ್ಟು ದೂರ ನೀರಿನಿಂದ ಮುಳುಗಿದೆ. ೮-೧೦ ಅಡಿಯಷ್ಟು ನೀರು ಇದ್ದು, ಎತ್ತರದಲ್ಲಿ ನಿರ್ಮಾಣವಾಗಿರುವ ಜಾಕವೆಲ್ ಮೇಲೆಯೇ ಎಲ್ಲರೂ ಇದ್ದು, ಮೋಟಾರ್ ಸೇರಿದಂತೆ ನದಿಯಿಂದ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಣೆ ನಡೆಸುತ್ತಿರುವ ಮೆಹಬೂಬ್ ಮುಲ್ಲಾ, ಇಸ್ಮಾಯಿಲ್ ಜರ್ಮನ್, ರವಿ ಭಜಂತ್ರಿ, ಈರಪ್ಪ ಕೋಷ್ಠಿಯವರಿಗೆ ಸಹಾಯಕ ಅಭಿಯಂತರೆ ವೈಶಾಲಿ ಹಿಪ್ಪರಗಿ, ಪ್ರಕಾಶ ಪೂಜಾರಿ, ಗೋಸೇವಾ ಸಂಘದ ಸಂತೋಷ ಆಲಗೂರ ಇವರ ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆಯುತ್ತ ನಿರಂತರ ಸೇವೆಯಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಗಾವಹಿಸಿದ್ದಾರೆ. ಮೀನುಗಾರರ ಮೂಲಕ ಇವರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ.
---೧೮ ದಿನಗಳಿಂದ ಮನೆ ಬಿಟ್ಟು ನೀರಿನ ಮಧ್ಯಭಾಗದ ಜಾಕ್‌ವೆಲ್‌ನಲ್ಲಿದ್ದೇವೆ. ನಿರಂತರ ನೀರು ಪೂರೈಕೆಯಲ್ಲಿ ತೊಂದರೆಯಾಗದ ರೀತಿಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ನಮಗೆ ಯಾವುದೇ ತೊಂದರೆಯಿಲ್ಲ.
-ಮೆಹಬೂಬ್ ಮುಲ್ಲಾ, ನೀರು ಪೂರೈಕೆ ಕಾರ್ಮಿಕ.---
ದಿನಂಪ್ರತಿ ಇಲ್ಲಿರುವ ಕಾರ್ಮಿಕರಿಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ತಲುಪಿಸುತ್ತಿದ್ದೇನೆ. ನನಗೂ ಇದೊಂದು ಸೇವೆಯನ್ನಾಗಿಸಿಕೊಂಡು ನೀರು ಪೂರೈಕೆಗೆ ತೊಂದರೆಯಾಗದಂತೆ ನನ್ನ ಸಹಾಯವೂ ಇರಲೆಂದು ಕೆಲಸ ಮಾಡುತ್ತಿದ್ದೇನೆ.’-ಫಯಾಜ್ ಜಾನ್ವೇಕರ್, ಮೀನುಗಾರ, ಬನಹಟ್ಟಿ.