ಎಸ್.ಜಿ. ತೆಗ್ಗಿನಮನಿ

ನರಗುಂದ: ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಒಳಚರಂಡಿ ಇಲ್ಲದಿರುವುದರಿಂದ ಪಟ್ಟಣದ ಚೆನ್ನಮ್ಮ ಬಡಾವಣೆಯಲ್ಲಿ ಉದ್ಯಾನವನ ಕೆರೆಯಂತಾಗಿ, ನೆರೆಹೊರೆಯ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಚೆನ್ನಮ್ಮ ನಗರದಲ್ಲಿ ಕೆಲವು ವರ್ಷಗಳ ಹಿಂದೆ ಹಲವಾರು ಜನರು ಜಾಗ ಖರೀದಿಸಿ ಲಕ್ಷಾಂತರ ಹಣ ಖರ್ಚು ಮಾಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ನೆಮ್ಮದಿಯಾಗಿ ಜೀವನ ಮಾಡಬೇಕೆಂದರೆ ಈ ನಗರಕ್ಕೆ ಪುರಸಭೆಯವರು ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ನಿವಾಸಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಪ್ರತಿಷ್ಠಿತ ರಾಣಿ ಚೆನ್ನಮ್ಮ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಒಳಚರಂಡಿ ಬಂದ್ ಆಗಿದೆ. ಮಳೆ ಬಂದರೆ ಬಡಾವಣೆಯಿಂದ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ಮಳೆನೀರು ಬಡಾವಣೆಯಲ್ಲಿಯೇ ನಿಲ್ಲುತ್ತದೆ.

ಮಳೆನೀರು ಉದ್ಯಾನದಲ್ಲಿ ಸಂಗ್ರಹವಾಗಿ ಸೊಳ್ಳೆ ಮತ್ತು ವಿಷಜಂತುಗಳಿಂದ ತುಂಬಿದ್ದು, ಇಲ್ಲಿಯ ನಿವಾಸಿಗಳು ಅನಾರೋಗ್ಯಕರ ವಾತಾವರಣದಲ್ಲಿ ಸಿಲುಕಿ ನರಳುವಂತಾಗಿದೆ.


ಇಲ್ಲಿನ ಬಹುತೇಕ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿ ಜನರು ನಡೆದಾಡಲೂ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಿಸಿದ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಾಕಷ್ಟು ಬಾರಿ ಸಾರ್ವಜನಿಕರು ಮೌಖಿಕವಾಗಿ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಸ್ತೆ ಹೊಂಡಗಳಾಗಿ ಪರಿವರ್ತನೆಗೊಂಡಿದ್ದರಿಂದ ಮಕ್ಕಳು, ಮಹಿಳೆಯರು ನಡೆದಾಡಲು ಕಷ್ಟಪಡುವಂತಾಗಿದೆ. ಬಡಾವಣೆಯಲ್ಲಿ ಹಲವಾರು ಸಮಸ್ಯೆಗಳಿದ್ದರೂ ಪುರಸಭೆ ಅಧಿಕಾರಿಗಳು ಲಕ್ಷ್ಯ ವಹಿಸದೆ ಮೌನವಾಗಿರುವುದಕ್ಕೆ ಕಾರಣ ತಿಳಿಯುತ್ತಿಲ್ಲವೆಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ಧರಣಿ ಎಚ್ಚರಿಕೆ: ಪುರಸಭೆ ಅಧಿಕಾರಿಗಳು ಒಂದು ವಾರದಲ್ಲಿ ಒಳಚರಂಡಿ ಮತ್ತು ರಸ್ತೆ ದುರಸ್ತಿ ಮಾಡದಿದ್ದರೆ ಪುರಸಭೆ ಮುಂದೆ ನಿವಾಸಿಗಳು ಪುರಸಭೆ ಮುಂದೆ ಧರಣಿ ಮಾಡುತ್ತೇವೆ ಎಂದು ಚೆನ್ನಮ್ಮ ನಗರದ ನಿವಾಸಿ ನಂದೀಶ ಮಠದ ತಿಳಿಸಿದರು.

ದುರಸ್ತಿ ಕೆಲಸ: ಚೆನ್ನಮ್ಮ ನಗರದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಒಂದು ತಿಂಗಳಲ್ಲಿ ರಾಣಿ ಚೆನ್ನಮ್ಮ ನಗರದ ದುರಸ್ತಿ ಕೆಲಸ ಪ್ರಾರಂಭಿಸಲಾಗುವುದು ಎಂದು ಪುರಸಭೆ ಅಧಿಕಾರಿ ಸುಭಾಸ ಖುದಾಮಪುರ ತಿಳಿಸಿದರು.