ನಗರದ ಅನಿಲ್ ಕುಂಬ್ಳೆ ವೃತ್ತದಲ್ಲಿ ಲ್ಯಾಬೋರ್ಗಿನಿ ಕಾರನ್ನು ಅತಿವೇಗವಾಗಿ ಗಿರಗಿಟ್ಲೆಯಂತೆ ತಿರುಗಿಸಿ ಹುಚ್ಚಾಟ ನಡೆಸಿದ ಚಾಲಕನ ವಿರುದ್ಧ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಅನಿಲ್ ಕುಂಬ್ಳೆ ವೃತ್ತದಲ್ಲಿ ಲ್ಯಾಬೋರ್ಗಿನಿ ಕಾರನ್ನು ಅತಿವೇಗವಾಗಿ ಗಿರಗಿಟ್ಲೆಯಂತೆ ತಿರುಗಿಸಿ ಹುಚ್ಚಾಟ ನಡೆಸಿದ ಚಾಲಕನ ವಿರುದ್ಧ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಅನಿಲ್ ಕುಂಬ್ಳೆ ವೃತ್ತದಲ್ಲಿ ನಸುಕಿನ 3 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದ್ದು, ಆರೋಪಿ ಚಾಲಕನ ಬಗ್ಗೆ ಮಾಹಿತಿ ಕೋರಿ ಸಾರಿಗೆ ಇಲಾಖೆಗೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಈ ಕೃತ್ಯದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಾಜಿನಗರ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತಕ್ಕೆ ಅತಿವೇಗವಾಗಿ ಲ್ಯಾಬೋರ್ಗಿನಿ ಕಾರ (ಕೆಎ-05ಎನ್‌ಆರ್‌0009) ನ್ನು ಚಾಲಕ ಓಡಿಸಿಕೊಂಡು ಬಂದಿದ್ದಾನೆ. ಬಳಿಕ ಅನಿಲ್ ಕುಂಬ್ಳೆ ವೃತ್ತದಲ್ಲಿ ಎರಡು ಸುತ್ತು ಅತಿವೇಗವಾಗಿ ತಿರುಗಿಸಿ ಮತ್ತೆ ಶಿವಾಜಿನಗರ ಕಡೆಗೆ ಅಷ್ಟೇ ಶರವೇಗದಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅಪಾಯಕಾರಿ ಸಾಹಸದ ಪ್ರದರ್ಶನಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.