ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿದ ಜಮೀನನ್ನು ಅಡಮಾನ ಮಾಡಿ ಅಮರಾವತಿ ಡೆವಲಪರ್ಸ್ ಸಂಸ್ಥೆಯವರು ೧೬.೦೫ ಕೋಟಿ ರು. ಸಾಲ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಸಂಸ್ಥೆಯವರ ಈ ಕ್ರಮದ ವಿರುದ್ಧ ಸಂಘದವರು ಪೊಲೀಸ್ ಠಾಣೆ ಮೆಟ್ಟಿಲೇರುವುದೂ ಬಹಿರಂಗವಾಗಿದೆ.ಸಂಘದವರು ಪೊಲೀಸ್ ಠಾಣೆಗೆ ಅಮರಾವತಿ ಡೆವಲಪರ್ಸ್ ವಿರುದ್ಧ ದೂರು ಸಲ್ಲಿಸಿದರೂ ಎಫ್‌ಐಆರ್ ದಾಖಲಿಸದಿರುವ ವಿಚಾರ ತಿಳಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಅಮರಾವತಿ ಡೆವಲಪರ್ಸ್ ಸಂಸ್ಥೆಯ ಪಾಲುದಾರರನ್ನು ಕರೆದು ಸಂಘದವರ ಮಾತುಕತೆ ನಡೆಸಿದ್ದಾರೆ. ಕೆಲವು ದಾಖಲೆ ಸಲ್ಲಿಸುವುದಕ್ಕೆ ಸಂಸ್ಥೆಯವರು ಸಮಯಾವಕಾಶ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಗೆ ನಿವೇಶನ ಅಭಿವೃದ್ಧಿಪಡಿಸಿಕೊಡುವ ಉದ್ದೇಶದಿಂದ ಅಮರಾವತಿ ಸಂಸ್ಥೆಯವರೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ೧೮.೮೨ ಕೋಟಿ ರು. ಹಣವನ್ನು ಹಂತ ಹಂತವಾಗಿ ಚೆಕ್ ಮೂಲಕ ಪಾವತಿಸಲಾಗಿದೆ. ಡೆವಲಪರ್ಸ್‌ನವರು ಈವರೆಗೆ ಮಾಡಿಕೊಂಡ ಎಲ್ಲಾ ಒಪ್ಪಂದಗಳನ್ನು ಉಲ್ಲಂಘಿಸಿ ೧೪ ವರ್ಷ ಕಳೆದರೂ ನಿವೇಶನಗಳನ್ನು ರಚಿಸಿ ಸಂಘದ ವಶಕ್ಕೆ ಹಸ್ತಾಂತರಿಸಿರುವುದಿಲ್ಲ ಎಂದು ಸಂಘದ ಆಡಳಿತ ಮಂಡಳಿ ಆರೋಪಿಸಿದೆ.ಒಪ್ಪಂದದಂತೆ ಅಮರಾವತಿ ಡೆವಲಪರ್ಸ್‌ನವರು ಚದರಡಿಗೆ ೩೫೦ ರು.ನಂತೆ ಗುತ್ತಲು ಮತ್ತು ಬೂದನೂರು ಗ್ರಾಮ ವ್ಯಾಪ್ತಿಗೆ ಸೇರಿದ ೨೭ ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಸಂಘಕ್ಕೆ ನೀಡಬೇಕಿತ್ತು. ೨೦೧೪-೨೦೧೯ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಡಳಿತ ಮಂಡಳಿಯವರಿಗೆ ಡೆವಲಪರ್ಸ್ ಮೇಲೆ ಅಪನಂಬಿಕೆ ಉಂಟಾಗಿ ೨೦೧೪ ಜು.೮ರಂದು ಸಂಘದ ಕಾರ್ಯದರ್ಶಿ ಎಚ್.ಶಂಕರೇಗೌಡರ ಹೆಸರಿಗೆ ೨೭ ಎಕರೆ ಜಮೀನಿನಲ್ಲಿ ೧೭ ಎಕರೆ ೨೫ ಗುಂಟೆ ಅನ್ಯಕ್ರಾಂತ ಜಮೀನನ್ನು ಶುದ್ಧ ಕ್ರಯ ಮಾಡಿಕೊಳ್ಳಲಾಗಿದೆ. ಈ ರೀತಿ ನೋಂದಣಿಯಾದ ೧೭.೨೪ ಎಕರೆ ಅನ್ಯಕ್ರಾಂತ ಮಂಜೂರಾದ ಜಮೀನು ಜಿಲ್ಲಾ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಆಸ್ತಿಯಾಗಿರುವುದಾಗಿ ತಿಳಿಸಿದೆ.
ಅಮರಾವತಿ ಡೆವಲಪರ್ಸ್‌ನ ಪಾಲುದಾರರಾದ ಸಿ.ಅನಂತಕುಮಾರ್‌ರವರು ಸಂಘದ ಹೆಸರಿಗೆ ಶುದ್ಧ ಕ್ರಯ ಮಾಡಿಕೊಟ್ಟಿರುವ ಬೂದನೂರು ಗ್ರಾಮದ ಸರ್ವೇ ನಂ.೩೪೦/೫ರಲ್ಲಿರುವ ೩೪ ಗುಂಟೆ ಮತ್ತು ಸರ್ವೇ ನಂ.೩೮೦ರಲ್ಲಿರುವ ೫ ಗುಂಟೆ ಸೇರಿ ೩೯ ಗುಂಟೆ ಜಮೀನಿನ ಮೇಲೆ ಉಮ್ಮಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಡಮಾನವಿಟ್ಟು ೫ ಲಕ್ಷ ರು. ಸಾಲ ಪಡೆದಿದ್ದಾರೆ. ಅದೇ ರೀತಿ ಬೆಂಗಳೂರಿನ ಇಂಡಿಯನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿರವರಿಗೆ ಮೆಮೊರ್ಯಾಡಂಮ್ ಆಫ್ ಡೆಪಾಜಿಟ್ ಆಫ್ ಟೈಟಲ್ ಡೀಡ್ಸ್ ಮಾಡಿಕೊಟ್ಟು ಇದೇ ಜಮೀನುಗಳ ಮೇಲೆ ೧೬ ಕೋಟಿ ರು. ಸಾಲ ಪಡೆದುಕೊಂಡಿರುತ್ತಾರೆ ಎಂದು ದೂರಲಾಗಿದೆ.ಅಮರಾವತಿ ಡೆವಲಪರ್ಸ್ ಪಾಲುದಾರರಾದ ಸಿ.ಅಶ್ವಥ್, ಸಿ.ಅನಂತಕುಮಾರ್, ಚಂದ್ರಶೇಖರ್, ಉಮ್ಮಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಂಡ್ಯ ತಾಲೂಕು ಉಪನೋಂದಣಾಧಿಕಾರಿ, ಹಾಗೂ ಇಂಡಿಯನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಅವರು ಶಾಮೀಲಾಗಿ ಸಂಘದ ಆಸ್ತಿಯನ್ನು ಸಂಘ ಮತ್ತು ಸೊಸೈಟಿಗಳಲ್ಲಿ ಅಡಮಾನವಿಟ್ಟು ವಂಚನೆ ಎಸಗಿರುವುದಾಗಿ ಆರೋಪಿಸಲಾಗಿದೆ.
ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅಮರಾವತಿ ಡೆವಲಪರ್ಸ್‌ನವರು ಕಾನೂನುಬದ್ಧವಾಗಿ ೨೭ ಎಕರೆ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲಿ. ಅವರಿಗೆ ಕೊಡಬೇಕಾದ ಬಾಕಿ ೩.೨೫ ಕೋಟಿ ರು. ಕೊಡುವುದಕ್ಕೆ ಸಿದ್ಧರಿದ್ದೇವೆ. ಇಲ್ಲವೇ, ಸಂಘದ ಹೆಸರಿನಲ್ಲಿ ೧೭ ಎಕರೆ ೨೫ ಗುಂಟೆ ಜಮೀನಿದ್ದು, ಉಳಿಕೆ ಜಮೀನನ್ನು ಸಂಘದ ಹೆಸರಿಗೆ ಬರೆದುಕೊಡಲಿ. ಅದಕ್ಕಾಗುವ ಹಣವನ್ನೂ ನಾವು ಕೊಟ್ಟು ಬೇರೆಯವರಿಂದ ಅಭಿವೃದ್ಧಿಪಡಿಸಿಕೊಳ್ಳುತ್ತೇವೆ.- ಆಡಳಿತ ಮಂಡಳಿ, ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘ
ಅಮರಾವತಿ ಡೆವಲಪರ್ಸ್ ಮತ್ತು ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದವರೊಂದಿಗೆ ಮಾತುಕತೆ ನಡೆಸಿದ್ದೇವೆ. ಡೆವಲಪರ್ಸ್‌ನವರು ಕೆಲವೊಂದು ದಾಖಲೆಗಳನ್ನು ಒದಗಿಸುವುದಕ್ಕೆ ಸಮಯಾವಕಾಶ ಕೇಳಿದ್ದಾರೆ. ನಾವೂ ಕೊಟ್ಟಿದ್ದೇವೆ. ಮೂರ್ನಾಲ್ಕು ದಿನಗಳ ಬಳಿಕ ಸಭೆ ಕರೆದು ಮತ್ತೆ ಚರ್ಚಿಸಲಾಗುವುದು. ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.
- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಅಧೀಕ್ಷಕ