ಬೀಳಗಿ ತಾಲೂಕಿನ ನಾಗರಾಳ ಗ್ರಾಮದ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಧಾತ್ರಿ ಪ್ರಕಾಶನ ನಾಗರಾಳದ ಸಾಹಿತಿ ಚಿದಾನಂದ ಜಡಿಮಠ ಅವರ ಹೆಂಗೂಸು ಕವನ ಸಂಕಲನವನ್ನು ಡಾ.ಶ್ರೀರಾಮ ಇಟ್ಟನ್ನವರ ಲೋಕಾರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಸಾಹಿತ್ಯವೆಂದರೆ ಕೇವಲ ಬುದ್ಧಿ ಪ್ರಧಾನ ಅಭಿವ್ಯಕ್ತಿಯಲ್ಲ, ಅದು ಭಾವನೆಗಳ ಅನಾವರಣ. ಸಮಾಜದ ನೋವು, ಶೋಷಿತರ ಸಂಕಟ, ರೈತರ ಬದುಕು ಹಾಗೂ ಮಾನವೀಯ ಸಂಬಂಧಗಳಿಗೆ ಸ್ಪಂದಿಸುವ ಹೃದಯದ ಭಾಷೆಯೇ ನಿಜವಾದ ಸಾಹಿತ್ಯ ಎಂದು ಜಾನಪದ ವಿದ್ವಾಂಸ ಡಾ.ಶ್ರೀರಾಮ ಇಟ್ಟನ್ನವರ ಹೇಳಿದರು.ತಾಲೂಕಿನ ನಾಗರಾಳ ಗ್ರಾಮದ ಶ್ರೀ ಬನಶಂಕರಿ ದೇವಿ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ತು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಶ್ರೀ ದಿಗಂಬರೇಶ್ವರ ಯುವಕ ಮಂಡಳ, ಧಾತ್ರಿ ಪ್ರಕಾಶನ ನಾಗರಾಳ ಇವರ ಸಹಯೋಗದಲ್ಲಿ ಸಾಹಿತಿ ಆದರ್ಶ ಶಿಕ್ಷಕ ಚಿದಾನಂದ ಜಡಿಮಠ ಅವರು ರಚಿಸಿದ ಹೆಂಗೂಸು ಕವನ ಸಂಕಲನ ಲೋಕಾರ್ಪಣೆ ಹಾಗೂ ನಮ್ಮೂರ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಸಮಾಜದ ಕನ್ನಡಿಯಾಗಬೇಕು. ಕವಿಗಳು ಕಾವ್ಯದ ಮೂಲಕ ಬಡವರು, ಶೋಷಿತರು, ರೈತರು ಹಾಗೂ ದುಡಿಯುವ ವರ್ಗದ ಬದುಕಿನ ನೋವು-ನಲಿವುಗಳಿಗೆ ಧ್ವನಿಯಾಗಬೇಕು. ಬಸವಣ್ಣ, ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಸಮಾಜ ಸುಧಾರಕರು ಪ್ರತಿಪಾದಿಸಿದ ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳು ಸಾಹಿತ್ಯದಲ್ಲಿಯೂ ಪ್ರತಿಫಲಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.ಸಾಹಿತಿ ಚಿದಾನಂದ ಜಡಿಮಠ ಅವರ ಸಾಹಿತ್ಯಿಕ ಅಭಿವ್ಯಕ್ತಿಯನ್ನು ಉಲ್ಲೇಖಿಸಿದ ಅವರು, ಕಾವ್ಯದಲ್ಲಿ ಭಾವನೆಗಳ ಆಳ, ಬದುಕಿನ ಅನುಭವ ಹಾಗೂ ಸಾಮಾಜಿಕ ಕಳಕಳಿ ಮುಖ್ಯವಾಗುತ್ತವೆ. ಮಕ್ಕಳಲ್ಲಿ ದೇವರನ್ನು ಕಾಣುವ ಪವಿತ್ರ ಮನೋಭಾವದಂತೆ, ಬದುಕನ್ನು ಪ್ರೀತಿಯಿಂದ ನೋಡುವ ದೃಷ್ಟಿ ಸಾಹಿತ್ಯಕ್ಕೆ ಅಗತ್ಯವಾಗಿದೆ ಎಂದರು.ನನ್ನ ಶಾಲೆ ಮತ್ತು ಧಾತ್ರಿ ಕವಿತೆಯ ಆಶಯವನ್ನು ವಿವರಿಸಿದ ಅವರು, ಶಾಲೆ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ, ಅದು ಬದುಕಿನ ದಾರಿ ತೋರಿಸುವ ತಾಯಿಯ ಮಡಿಲು, ಸೋಲು-ಗೆಲುವು ಎದುರಿಸುವ ಶಕ್ತಿ ನೀಡುವ ಜ್ಞಾನಮಂದಿರವಾಗಿದೆ. ಈ ಸಂದೇಶ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಶಿಕ್ಷಕರಿಗೂ ಅನ್ವಯಿಸುತ್ತದೆ ಎಂದು ಹೇಳಿದರು.
ಬೀಳಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುರಾಜ ಲೂತಿ ಆಶಯ ನುಡಿಗಳನ್ನಾಡಿದರು. ಬಸವನ ಬಾಗೇವಾಡಿಯ ತಹಸೀಲ್ದಾರ್ ವೈ.ಎಸ್. ಸೋಮನಕಟ್ಟಿ ಕೃತಿ ಪರಿಚಯ ಮಾಡಿದರು.ನಾಗರಾಳ ದಿಗಂಬರೇಶ್ವರ ಮಠದ ನಿಂಗಪ್ಪಯ್ಯ ಶೇಷಪ್ಪಯ್ಯ ದಿಗಂಬರಿಮಠ ಸ್ವಾಮೀಜಿ ಸಾನ್ನಿಧ್ಯ, ಬೀಳಗಿ ತಾಲೂಕು ಅಭಾಶ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮಹದೇವ ಬಸರಕೋಡ, ನಾಗರಾಳ ಜಂಗಮ ಸಮಾಜ ಅಧ್ಯಕ್ಷ ಸಿದ್ದಲಿಂಗಯ್ಯ ಲಂಗಟದ, ವಿಜಯಪುರ ಗಾನಬಣದ ಪಂಡಿತ ತೋಂಟದಾರ್ಯ ಕವಿ ಗವಾಯಿಗಳು, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಈರಯ್ಯ ಗೋಠೆ ಹಾಗೂ ಕಜಾಪ ಜಿಲ್ಲಾ ಅಧ್ಯಕ್ಷ ಡಿ.ಎಂ. ಸಾಹುಕಾರ, ಕಾಶಿನಾಥ ಸೋಮನಕಟ್ಟಿ, ಶೇಖರ ಗೊಳಸಂಗಿ, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಐವರಿಗೆ ಪ್ರಶಸ್ತಿ ಗೌರವ: ಪರಿಸರ ಕ್ಷೇತ್ರದಲ್ಲಿ ಶಿವಪುತ್ರಪ್ಪ ಇಮದೇಗೌಡ ಅವರಿಗೆ ನಮ್ಮೂರ ಪರಿಸರ ಸಿರಿ, ಶಿಕ್ಷಣ ಕ್ಷೇತ್ರದಲ್ಲಿ ಶಿವಾನಂದ ಸಂಕಣ್ಣನವರ ಅವರಿಗೆ ನಮ್ಮೂರ ಶಿಕ್ಷಣ ಸಿರಿ, ಕೃಷಿ ಕ್ಷೇತ್ರದಲ್ಲಿ ಮುರಳಿಗೌಡ ಕೊಪ್ಪಳ ಅವರಿಗೆ ನಮ್ಮೂರ ಕೃಷಿ ಸಿರಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಶೇಖರ ಗೊಳಸಂಗಿ ಅವರಿಗೆ ನಮ್ಮೂರ ಸಾಹಿತ್ಯ ಸಿರಿ ಹಾಗೂ ಉಚಿತ ವೈದ್ಯಕೀಯ ಸೇವೆಗಾಗಿ ಡಾ.ಮಹಾದೇವ ಕೊಟ್ನಳ್ಳಿ ಅವರಿಗೆ ನಮ್ಮೂರ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ನೇಹಿತರು, ಸಾಹಿತ್ಯ ಅಭಿಮಾನಿಗಳು, ಲೇಖಕ ಚಿದಾನಂದ ಜಡಿಮಠ ಅವರಿಗೆ ಸನ್ಮಾನಿಸಿ ಗೌರವಿಸಿದರು.