ಜೇವರ್ಗಿಯಿಂದ ಕಾಂಗ್ರೆಸ್‌ಗೆ ಲೀಡ್‌ ನಿಶ್ಚಿತ: ಡಾ. ಅಜಯ್‌ ಸಿಂಗ್‌

| Published : May 01 2024, 01:20 AM IST

ಜೇವರ್ಗಿಯಿಂದ ಕಾಂಗ್ರೆಸ್‌ಗೆ ಲೀಡ್‌ ನಿಶ್ಚಿತ: ಡಾ. ಅಜಯ್‌ ಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೀಡ್ ವಿಚಾರದಲ್ಲಿ ಯಾರು ಏನೇ ಹೇಳಿದರೂ ತಾವು ಗಮನ ಕೊಡೋದಿಲ್ಲ, ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜೇವರ್ಗಿ ವ್ಯಾಪ್ತಿಯಲ್ಲಿಯೂ ಜನ ಕಾಂಗ್ರೆಸ್ ಪರ ವಾಲಿದ್ದಾರೆ. ಶೇ.85ಕ್ಕೂ ಹೆಚ್ಚು ಹೆಮ್ಮಕ್ಕಳು ತಾವೇ ಕೈ ಬಲಪಡಿಸುವ ಉತ್ಸಾಹದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೇವರ್ಗಿ ಮತಕ್ಷೇತ್ರದಿಂದ 10 ಸಾವಿರಕ್ಕೂ ಹೆಚ್ಚಿನ ಲೀಡ್‌ ನಿಶ್ಚಿತ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್‌ ಹೇಳಿದ್ದಾರೆ.

ಕಲಬುರಗಿ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೀಡ್ ವಿಚಾರದಲ್ಲಿ ಯಾರು ಏನೇ ಹೇಳಿದರೂ ತಾವು ಗಮನ ಕೊಡೋದಿಲ್ಲ, ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜೇವರ್ಗಿ ವ್ಯಾಪ್ತಿಯಲ್ಲಿಯೂ ಜನ ಕಾಂಗ್ರೆಸ್ ಪರ ವಾಲಿದ್ದಾರೆ. ಶೇ.85ಕ್ಕೂ ಹೆಚ್ಚು ಹೆಮ್ಮಕ್ಕಳು ತಾವೇ ಕೈ ಬಲಪಡಿಸುವ ಉತ್ಸಾಹದಲ್ಲಿದ್ದಾರೆಂದು ಹೇಳಿದರು.

ವಿರೋಧ ಪಕ್ಷದವರು ಲೀಡ್ ವಿಚಾರದಲ್ಲಿ ಏನೇ ಹೇಳಲಿ, ತಾವು ಅದಕ್ಕೆಲ್ಲ ಪ್ರತಿಕ್ರಿಯಿಸುವ ಗೋಜಿಗೆ ಹೋಗೋದಿಲ್ಲ. ನಮ್ಮ ಕೆಲಸಕ್ಕೆ ಜನ ಸ್ಪಂದಿಸುತ್ತಿದ್ದಾರೆ, ನಾವು ಹಳ್ಳಿಗಾಡಿಗೆ ಹೋದಾಗೆಲ್ಲಾ ಜನ ಕೈ ಹಿಡಿಯುವ ಭರವಸೆ ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದು ಏನು ಬೇಕು ಹೇಳಿ ಎಂದು ಸಿಂಗ್‌ ಪ್ರಶ್ನಿಸಿದರು.

ಗೃಹಲಕ್ಷ್ಮೀ ಯೋಜನೆಯ ಹಣ ಹಳ್ಳಿ ಹೆಣ್ಮಕ್ಕಳಿಗೆ ಸಂಸಾರಕ್ಕೆ ಅನುಕೂಲವಾಗಿದೆ. ಕರೆಂಟ್‌ ಫ್ರೀ, ಅಕ್ಕಿ ಬದಲು ನೀಡುತ್ತಿರುವ ಹಣ, ಬಸ್‌ನಲ್ಲಿ ಉಚಿತ ಪ್ರಯಾಣದಿಂದಾಗಿ ಗ್ರಾಮೀಣ ಮಹಿಳೆಯರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ. ನಾವು ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲಾ ಮಹಿಳೆಯರ ಸಮೂಹದಲ್ಲಿನ ಈ ಒಲವು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಬಿಜೆಪಿ ಮೌನ ಯಾಕೆ: ಹಾಸನದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ಬಗ್ಗೆ ಮಾತನಾಡಿದ ಡಾ. ಅಜಯ್‌ ಸಿಂಗ್‌ ದೇಶದ ಮಹಿಳೆಯರ ಮಾನಹಾನಿಯ ಪ್ರಕರಣ ಇದಾಗಿದೆ. ಇದನ್ನು ಯಾರೂ ಸಹಿಸೋದಿಲ್ಲ. ಇದೀಗ ಜೆಡಿಎಸ್‌ ಬಿಜೆಪಿ ಮಿತ್ರಪಕ್ಷ. ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ, ಪ್ರಧಾನಿ ಮೋದಿಯವರು ಹಾಸನಕ್ಕೆ ಬಂದು ಪ್ರಜ್ವಲ್‌ಗೆ ಮತ ಹಾಕಲು ಹೇಳಿ ಹೋಗಿದ್ದಾರೆ. ಮಹಿಳೆಯರ ಮಾನಭಂಗ ಮಾಡಿದವರ ಪರ ಮೋದಿಯವರೇ ಮತ ಯಾಚಿಸಿದರೆ ಮುಂದೇನು? ಈ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪತ್ರ ಮುಖೇನ ಸ್ಥಳೀಯ ಬಿಜೆಪಿಗರು ನೀಡಿದ್ದರೂ ಬಿಜೆಪಿ ಇದನ್ನೆಲ್ಲ ಬದಿಗಿಟ್ಟು ಮೈತ್ರಿಗೆ ಮುಂದಾಗಿರೋದು ನೋಡಿದರೆ ಇ‍ರಿಗೆ ಮಹಿಳೆಯರ ಬಗ್ಗೆ ಕಾಳಜಿಯೇ ಇಲ್ಲ ಎಂಬಂಶ ಎತ್ತಿ ತೋರಿಸುತ್ತದೆ ಎಂದರು. ತಮ್ಮ ಸರಕಾರ ಎಸ್‌ಐಟಿ ರಚಿಸಿ ಪ್ರಕರಣದ ತನಿಖೆಗೆ ಮುಂದಾಗಿದೆ, ನಾವು ಈ ವಿಚಾರದಲ್ಲಿ ಗಂಭೀರರಾಗಿದ್ದೇವೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದರು.

ಇಂದು ಜೇವರ್ಗಿಯಲ್ಲಿ ಬಹಿರಂಗ ಸಭೆ: ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪರ ಮತ ಯಾಚನೆಗೆ ಈಗಾಗಲೇ ಅಫಜಲ್ಪುರ, ಚಿತ್ತಾಪುರ, ಸೇಡಂ ಸೇರಿದಂತೆ ಹಲವೆಡೆ ಬಹಿರಂಗ ಸಮವೇಶಗಳಾದಂತೆ ಮೇ 1ರಂದು ಸಂಜೆ 5 ಗಂಟೆಗೆ ಜೇವರ್ಗಿ ಪಟ್ಟಣದಲ್ಲಿಯೂ ಕಾಂಗ್ರೆಸ್‌ ಪರ ಮತ ಯಾಚನೆಯ ಐತಿಹಾಸಿಕ ಸಮಾವೇಶ ನಡೆಯಲಿದೆ.

ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ ಮಲ್ಲಿಕಾರ್ಜುನ್ ಖರ್ಗೆ, ನಾಡಿನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿಯ ಸಚಿವರು, ಶಾಸಕರು, ಹಿರಿಯ ಮುಖಂಡರು ಅನೇಕರು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ಪಟ್ಟಣದ ಅಂಬೇಡ್ಕರ್‌ ಭವನದಲ ಹಂಭಾಗದಲ್ಲಿರುವ ಬಯಲು ಮೈದಾನದಲ್ಲಿ ಸಮಾವೇಶ ನಡೆಯುತ್ತಿದೆ. ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಮಹಿಳಾ ಘಟಕದ ಸದಸ್ಯರು ಸೇರಿದಂತೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಡಾ. ಅಜಯ್‌ ಸಿಂಗ್‌ ಮನವಿ ಮಾಡಿದರು.