ಸಾರಾಂಶ
ಮಾಜಿ ಸಿಎಂ ಡಿ.ದೇವರಾಜ ಅರಸು ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆಡಳಿತದಲ್ಲಿ ಮೌನಕ್ರಾಂತಿಯ ಮೂಲಕ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ರೈತರನ್ನು ಋಣಮುಕ್ತ ಮಾಡಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆಂದು ತಾಪಂ ಇಒ ಜಿ.ಪರಮೇಶ್ವರಪ್ಪ ಹೇಳಿದರು.
ಇಲ್ಲಿನ ತಾಪಂನ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಧೀಮಂತ ನಾಯಕರಾಗಿದ್ದ ಹಿನ್ನೆಲೆ ಹಲವಾರು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಅವರ ದಿಟ್ಟತನದ ಹೋರಾಟದ ಫಲವಾಗಿಯೇ ಗಟ್ಟಿ ನಿರ್ಧಾರ ಕೈಗೊಂಡು, ದೇಶದಲ್ಲೇ ಮೊದಲ ಬಾರಿಗೆ ಉಳ್ಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣೆ ಕಾಯ್ಕೆ ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದಾರೆ. ವಿವಿಧ ಇಲಾಖೆಗಳನ್ನು ರಚನೆ ಮಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲು ಹಾಸ್ಟೆಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಹಳ್ಳಿಗಳಲ್ಲಿ ಜೀವಂತವಿದ್ದ ಜೀತ ಪದ್ದತಿಯನ್ನು ನಿರ್ಮೂಲನೆ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಉಪನ್ಯಾಸಕ ಬಿ.ಎಚ್.ಎಂ. ಗುರುಬಸವರಾಜ ಮಾತನಾಡಿ, ಅರಸು ಅವರ ಜೀವನದ ಮೌಲ್ಯಗಳು ನಮಗೆಲ್ಲಾ ದಾರಿ ದೀಪವಾಗಿದ್ದು, ಅವುಗಳನ್ನು ಅಳವಡಿಸಿಕೊಂಡಾಗ ಮನುಷ್ಯ ಪರಿವರ್ತನೆಯಾಗಲು ಸಾಧ್ಯ ಎಂದರು.ಅರಸು ಶಿಕ್ಷಣ, ಸಾಮಾಜಿಕ ನ್ಯಾಯ, ರಾಜಕೀಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಬಹುದೊಡ್ಡ ಕ್ರಾಂತಿ ಮಾಡಿದ ಅರಸು ಅವರಿಗೆ ಸಾಕಷ್ಟು ವಿರೋಧಿಗಳ ಗುಂಪು ಹುಟ್ಟಿಕೊಂಡಿತ್ತು. ಇಂತಹ ಘಟನೆಗಳಿಗೆ ಎದೆಗುಂದದೇ ತಮ್ಮ ಆಡಳಿತ ಮತ್ತು ಅಭಿವೃದ್ಧಿಯನ್ನು ಮುಂದುವರಿಸಿ, 2 ಬಾರಿ ಮುಖ್ಯಮಂತ್ರಿ ಗಾದೆ ಅಲಂಕರಿಸಿದ್ದಾರೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಜಿ.ಸಂತೋಷಕುಮಾರ ಮಾತನಾಡಿ, ಇಂತಹ ಮಹನೀಯರ ಜೀವನ ಕ್ರಮ, ಮೌಲ್ಯಗಳು ಮತ್ತು ಆದರ್ಶಗಳನ್ನು ಎಲ್ಲರೂ ಅರಿತು ನಡೆಯಬೇಕಿದೆ ಎಂದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತಾರಣಾಧಿಕಾರಿ ರಮೇಶ ಪ್ರಾಸ್ತಾವಿಕ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಎ.ಕೊಟ್ರಗೌಡ, ಬಿಇಒ ಮಹೇಶ ಪೂಜಾರ್, ಸಿಡಿಪಿಒ ರಾಮನಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿವೃತ್ತಿ ಹೊಂದಿರುವ ನೌಕರರಿಗೆ ಹಾಗೂ ನೌಕರರ ಪ್ರತಿಭಾವಂತ ಮಕ್ಕಳಿಗೆ ಗೌರವಿಸಲಾಯಿತು.