ಮತಗಳಿಕೆ ಲೆಕ್ಕಾಚಾರದಲ್ಲಿ ತೊಡಗಿದ್ದ ಮುಖಂಡರು

| Published : Apr 28 2024, 01:28 AM IST

ಸಾರಾಂಶ

ಚನ್ನಪಟ್ಟಣ: ಬೆಂಗಳೂರು ಲೋಕಸಭಾ ಚುನಾವಣೆ ಶುಕ್ರವಾರ ಮುಗಿದಿದ್ದು, ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಕಾಂಗ್ರೆಸ್ ಹಾಗೂ ಎನ್‌ಡಿಎ ಮೈತ್ರಿ ಕೂಟದ ನಾಯಕರು ರಿಲ್ಯಾಕ್ಸ್ ಮೂಡಿಗೆ ಜಾರಿದ್ದರೆ, ಇನ್ನು ಕೆಲವರು ಮತಗಳಿಕೆಯ ಲೆಕ್ಕಾಚಾರದಲ್ಲಿ ತೊಡಗಿದ್ದರು.

ಚನ್ನಪಟ್ಟಣ: ಬೆಂಗಳೂರು ಲೋಕಸಭಾ ಚುನಾವಣೆ ಶುಕ್ರವಾರ ಮುಗಿದಿದ್ದು, ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಕಾಂಗ್ರೆಸ್ ಹಾಗೂ ಎನ್‌ಡಿಎ ಮೈತ್ರಿ ಕೂಟದ ನಾಯಕರು ರಿಲ್ಯಾಕ್ಸ್ ಮೂಡಿಗೆ ಜಾರಿದ್ದರೆ, ಇನ್ನು ಕೆಲವರು ಮತಗಳಿಕೆಯ ಲೆಕ್ಕಾಚಾರದಲ್ಲಿ ತೊಡಗಿದ್ದರು.

ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್, ಪುಟ್ಟಣ, ಮಾಜಿ ಶಾಸಕರಾದ ಎಂ.ಸಿ.ಅಶ್ವತ್ಥ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಸೇರಿದಂತೆ ಪ್ರಮುಖ ನಾಯಕರು ಬೆಂಗಳೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆದರು. ಇನ್ನು ತಾಲೂಕಿನಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ನಾಯಕರು ತಮ್ಮ ಮನೆಗಳಲ್ಲಿ ವಿಶ್ರಾಂತಿ ಪಡೆದರು.

ಇನ್ನು ಎರಡನೇ ಸ್ತರದ ನಾಯಕರು ಹಾಗೂ ಗ್ರಾಮಗಳ ಮುಖಂಡರು ಸಹ ರಿಲ್ಯಾಕ್ಸ್ ಮೂಡಿನಲ್ಲಿದ್ದರೆ, ಅಲ್ಲಲ್ಲಿ ಸೇರಿದ್ದ ಕೆಲ ಮುಖಂಡರು ಚುನಾವಣೆಯಲ್ಲಿ ತಮ್ಮ ಬೂತ್ ವ್ಯಾಪ್ತಿಯಲ್ಲಿ ತಾವು ಪಡೆದಿರುವ ಮತಗಳು ಹಾಗೂ ಎದುರಾಳಿ ಪಕ್ಷದ ಅಭ್ಯರ್ಥಿ ಪಡೆದಿರಬಹುದಾದ ಮತಗಳ ಕುರಿತು ಲೆಕ್ಕಾಚಾರದಲ್ಲಿ ತೊಡಗಿದ್ದರು.

ರಿಂಗಣಿಸುತ್ತಿದ್ದ ಮೊಬೈಲ್‌ಗಳು: ಲೋಕಸಭಾ ಚುನಾವಣೆ ಮುಗಿದಿದ್ದರೂ ಸಹ ಇನ್ನು ತಾಲೂಕಿನ ಜನ ಹಾಗೂ ನಾಯಕರು ಚುನಾವಣೆಯ ಗುಂಗಿನಿಂದ ಹೊರಬಂದಂತೆ ಕಾಣಲಿಲ್ಲ. ಹೋಟೆಲ್‌ಗಳು, ತೋಟದ ಮನೆ ಸೇರಿದಂತೆ ಇತರೆ ಸ್ಥಳಗಳಲ್ಲಿ ಜಮಾಯಿಸಿದ ಮುಖಂಡರು ತಮ್ಮ ಪಂಚಾಯಿತಿ, ಬೂತ್ ವ್ಯಾಪ್ತಿಯಲ್ಲಿ ಆಗಿರುವ ಮತದಾನ ಪ್ರಮಾಣ, ಪಡೆದಿರಬಹುದಾದ ಮತಗಳ ಕುರಿತು ಚರ್ಚೆ ನಡೆಸುತ್ತಿದ್ದ ದೃಶ್ಯ ಸಾಮಾನ್ಯವೆನಿಸಿತ್ತು. ಇದರೊಂದಿಗೆ ಗ್ರಾಮಗಳಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ಮಾಡಿ ಮತದಾನದ ವಿವರವನ್ನು ಕಲೆ ಹಾಕುತ್ತಿರುವುದು ಕಂಡುಬಂತು.

ಮತದಾರರ ವಿವರ:

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೩೧೨೬೩ ಮತದಾರರಿದ್ದು, ಈ ಬಾರಿಯ ಚುನಾವಣೆಯಲ್ಲಿ ೯೫,೭೭೦ ಪುರುಷ ಮತದಾರರು, ೯೯,೮೯೮ ಮಹಿಳಾ ಮತದಾರರು ಹಾಗೂ ಇತರೆ ಮತದಾರರು ಸೇರಿದಂತೆ ೧,೯೫,೬೭೦ ಮತದಾರರು ಮತ ಚಲಾಯಿಸಿದ್ದು, ಶೇ.೮೪.೬೧ ರಷ್ಟು ಮತದಾನವಾಗಿದೆ. ಈ ಮತಗಳು ಹಾಗೂ ಬೂತ್ ವ್ಯಾಪ್ತಿಯಲ್ಲಿ ಆಗಿರುವ ಮತದಾನದ ವಿವರನ್ನು ಹಿಡಿದು ಈ ಮತಗಳ ಅಂದಾಜಿನ ಮೇಲೆ ಮುಖಂಡರು ಯಾರಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದಲ್ಲಿ ತಲೀನರಾಗಿದ್ದರು.

ಒಟ್ಟಾರೆಯಾಗಿ ಶುಕ್ರವಾರ ಚುನಾವಣೆ ಮುಗಿದ ಮೇಲು ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್‌ನ ನಾಯಕರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಇತ್ತ ಜನಸಾಮಾನ್ಯರು ಸಹ ಯಾವ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದಿರಬಹುದು ಎಂದು ಚರ್ಚೆಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವೆನಿಸಿತ್ತು.

ಪೋಟೊ೨೭ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಹೊರವಲಯದ ತೋಟದಮನೆಯಲ್ಲಿ ಜೆಡಿಎಸ್ ಮುಖಂಡರು ಲೆಕ್ಕಾಚಾರದಲ್ಲಿ ತೊಡಗಿದ್ದರು.