ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕರ್ನಾಟಕ ಜಾನಪದ ಪರಿಷತ್‌ ತಾಲೂಕು ಘಟಕ ಚನ್ನರಾಯಪಟ್ಟಣ ಹಾಗೂ ಶ್ರೀ ಆದಿಗದ್ದಿಗೆ ಮುನಿಮಠ ಗುರುಭಕ್ತ ಮಂಡಳಿ ಟ್ರಸ್ಟ್ ತೂಬಿನಕೆರೆ ಇವರ ಸಹಯೋಗದಲ್ಲಿ ಶ್ರೀ ಆದಿ ಗದ್ದಿಗೆ ಮುನಿ ಮಠದ ಉದ್ಘಾಟನಾ ಸಮಾರಂಭದ ಅಂಗವಾಗಿ ಜಾನಪದದಲ್ಲಿ ತತ್ವಪದಗಳ ಪರಂಪರೆ ಹಾಗೂ ತತ್ವಪದಗಳ ಗಾಯನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಆಡಿದಂತಹ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸಂತೋಷ ದಿಂಡಗೂರು ಅವರು ಮಾತನಾಡಿ, ತತ್ವಪದದ ಪರಂಪರೆ ಜಾನಪದಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದು, ಇಂತಹ ಕಾರ್ಯಕ್ರಮದ ಮೂಲಕ ನಾವು ಅವುಗಳನ್ನು ಗುರುತಿಸುವ ಮತ್ತು ದಾಖಲಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಮಠದ ಹಾಗೂ ತತ್ವಪದದ ಹಾದಿಯಲ್ಲಿ ನಡೆಯುವ ಅನೇಕ ಸಾಂಸ್ಕೃತಿಕ ಗುರುತುಗಳನ್ನು ಹಳ್ಳಿಹಳ್ಳಿಯಲ್ಲಿಯೂ ಕಟ್ಟುವ, ಗುರುತಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಪರಮಶಿವಪ್ಪ ನಡುಬೆಟ್ಟ ಇವರು ಮಾತನಾಡಿ ಮೂರು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಗುರುಪೀಠ ಸಾವಿರಾರು ಭಕ್ತರನ್ನು ಒಳಗೊಂಡು ಬಸವಣ್ಣನವರ ಬುದ್ಧನ ಹಾಗೂ ಮಂಟೇಸ್ವಾಮಿಯವರಂತಹ ಆಶಯವನ್ನು ನಿರೂಪಿಸುತ್ತಾ ಬಂದಿದೆ. ಹಾಗೇ ಉರಿಲಿಂಗ ಪೆದ್ದಿ ಮಠದ ಪರಂಪರೆಯಂತೆ ಈ ಮಠದ ಆದಿಗುರು ಗುರುನಂಜೇಶ್ವರರು ಶೂದ್ರ ಜಾತಿಯಲ್ಲಿ ಹುಟ್ಟಿದವರಾಗಿ ಆಧ್ಯಾತ್ಮಕ್ಕೆ ಮನ ಸೋತು ಶೂದ್ರರಿಗೆ ಗುರು ದೀಕ್ಷೆಯನ್ನು ನೀಡಿದಂತಹ ಕಾಲದಲ್ಲಿ ಗುರು ರಂಗಾಚಾರ್ಯರ ಬಳಿ ದೀಕ್ಷೆ ಪಡೆದು ಈ ಪೀಠಕ್ಕೆ ಆದಿಗುರುಗಳಾಗಿರುತ್ತಾರೆ. ನಂತರದಲ್ಲಿ ಗುರುಲಿಂಗ ಸ್ವಾಮಿಗಳು ೪೮ ದಿನಗಳ ಕಾಲ ಅನ್ನ, ಆಹಾರವನ್ನು ಸೇವಿಸದೆ ಯಾಗ (ತಪಸ್ಸು) ಮಾಡಿ ಪೀಠಕ್ಕೆ ಬಂದು ಸಾವಿರಾರು ಭಕ್ತರಿಗೆ ದೀಕ್ಷೆ ನೀಡಿ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಾರೆ. ಅವರ ನಂತರದಲ್ಲಿ ಬಂದಂತಹ ಗುರುಬಸವಪ್ಪ ಸ್ವಾಮಿಗಳು ಅನೇಕ ಶಾಖಾ ಮಠಗಳನ್ನು ಸ್ಥಾಪಿಸಿ ಭಕ್ತರಿಗೆ ದೀಕ್ಷೆ ಕೊಡುವ ಮೂಲಕ ಶೂದ್ರ ಪರಂಪರೆಯಲ್ಲಿ ಬಸವ ತತ್ವಗಳ ಅನುಸಂಧಾನವನ್ನು ಮಾಡಿ ಆ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನ ನೀಡಿದ್ದಾರೆ. ಇಂತಹ ದಾರ್ಶನಿಕರ ಆಧ್ಯಾತ್ಮದ ಪರಿಕಲ್ಪನೆಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಈ ಮೂರು ಮಹನೀಯರ ಪರಂಪರೆಯನ್ನ ತಿಳಿಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾಹಿತಿ ಮೇಟಿಕೆರೆ ಹಿರಿಯಣ್ಣ ಮಾತನಾಡಿ ಇಂದಿನ ಕಾಲದಲ್ಲಿ ಇಂತಹ ಮಹನೀಯರ ಬದುಕು ಮತ್ತು ಅವರು ನಡೆದು ಬಂದ ಹಾದಿ ನಮಗೆಲ್ಲರಿಗೂ ದಾರಿದೀಪವಾಗಬೇಕು. ಅವರ ತತ್ವ, ಆದರ್ಶಗಳನ್ನ ಮೈಗೂಡಿಸಿಕೊಂಡು ಸಮಾಜದಲ್ಲಿ ನಾವು ಉತ್ತಮ ಮನುಷ್ಯರಾಗಿ ರೂಪುಗೊಳ್ಳಬೇಕು ಎಂದರು.


ಕಾಂಗ್ರೆಸ್ ಮುಖಂಡರಾದ ಗೀತಾ ಗೋಪಾಲಸ್ವಾಮಿ ಮಾತನಾಡಿ ಇಂತಹ ದಾರ್ಶನಿಕರ ಕಾರ್ಯಕ್ರಮಕ್ಕೆ ನಮ್ಮ ಹಾಗೂ ನಮ್ಮ ಕುಟುಂಬದ ಬೆಂಬಲ, ಸಹಕಾರ ಸದಾ ಇರುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುರುಷೋತ್ತಮ ಅವರ ತಂದೆ ತಾಯಿಗಳಾದ ರಾಮಯ್ಯ ಮತ್ತು ಲಕ್ಷ್ಮಮ್ಮ ನವರು ನೆರವೇರಿಸಿಕೊಟ್ಟುರು. ಗುರು ಭಕ್ತ ಮಂಡಳಿ ಟ್ರಸ್ಟ್‌ನ ಅಧ್ಯಕ್ಷರಾದ ನಿರ್ಮಲ ಜೈ ರಾಜ್ ಅವರು ಎಲ್ಲರನ್ನು ಸ್ವಾಗತಿಸಿದರು. ಮಂಜುಳಾ ಅವರು ನಿರೂಪಣೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಬಸವಣ್ಣ ನರಸಿಂಹರಾಜಪುರ, ಜಾನಪದ ಪರಿಷತ್ತಿನ ಹೋಬಳಿ ಅಧ್ಯಕ್ಷರಾದ ರಂಗಪ್ಪ ಹಾಗೂ ಪರಮೇಶ್ ರಾಗಿಬೊಮ್ಮನಹಳ್ಳಿ ಮತ್ತು ಊರಿನ ಮುಖಂಡರಾದ ಕಾಳೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಗುರು ಭಕ್ತ ಮಂಡಳಿ ತಂಡದ ತತ್ವ ಪದ ಗಾಯನ ಇಡೀ ಕಾರ್ಯಕ್ರಮಕ್ಕೆ ಮೆರುಗು ನೀಡಿತು.