ಸಾರಾಂಶ
ಮಹದೇವಪುರ- ಚಿನ್ನಹಳ್ಳಿ ಇತರೆಡೆ ಜಮೀನು, ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಂಡ ಹುಲಿ, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ, ಹುಲಿ ಕಾಣಿಸಿಕೊಂಡು ಓಡಾಟ ನಡೆಸಿರುವುದಾಗಿ ಖಚಿತತೆ ಪಡೆಸಿದ ಅರಣ್ಯ ಇಲಾಖೆ. ಡ್ರೋಣ್ ಮೂಲಕ ಪತ್ತೆ ಹಚ್ಚಲು ಕ್ರಮ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮಹದೇವಪುರ, ಚಿನ್ನಹಳ್ಳಿ ಸೇರಿದಂತೆ ಇತರೆಡೆ ಜಮೀನು ಹಾಗೂ ನಿರ್ಜನ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡು ಗ್ರಾಮಸ್ಥರು ಭಯದ ವಾತಾವರಣ ನಿರ್ಮಾಣ ಮಾಡಿದೆ.ಚನ್ನಹಳ್ಳಿ-ಮಹದೇವಪುರ ಸಂಪರ್ಕ ರಸ್ತೆ, ಮಹದೇವಪುರ ಗ್ರಾಮದ ಹೊರವಲಯದ ಚಿಕ್ಕಮ್ಮನ ದೇವಸ್ಥಾನಗಳ ಹಾಸುಪಾಸಿನ ಸ್ಥಳಗಳಲ್ಲಿ ಹುಲಿ ಅಡ್ಡಾಡುತ್ತಿರುವ ದೃಶ್ಯವನ್ನು ಹಲವರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಲ್ಲಿ ಹರಿ ಬಿಟ್ಟಿದ್ದಾರೆ. ಇದರಿಂದ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಆತಂಕಗೊಂಡಿದ್ದಾರೆ.
ಚನ್ನಹಳ್ಳಿಯಲ್ಲಿ ಕಳೆದೊಂದು ವಾರದ ಹಿಂದೆ ಮೂರ್‍ನಾಲ್ಕು ಬಾರಿ ಹುಲಿ ಕಾಣಿಸಿಕೊಂಡಿದೆ. ಪುಟ್ಟಯ್ಯರಿಗೆ ಸೇರಿದ್ದ ಮೇಕೆಗಳನ್ನು ತಿಂದು ಹಾಕಿರುವ ವಿಷಯ ಚರ್ಚೆಯಲ್ಲಿರುವಾಗಲೇ ಹುಲಿ ಗ್ರಾಮದ ಆಸುಪಾಸಿನಲ್ಲಿ ಓಡಾಡುತ್ತಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.ಜಿಲ್ಲಾ ಉಪವಲಯ ಸಂರಕ್ಷಣಾಧಿಕಾರಿ ರಾಜೇಶ್ ಪ್ರತಿಕ್ರಿಯಿಸಿ, ಹುಲಿ ಕಾಣಿಸಿಕೊಂಡು ಓಡಾಟ ನಡೆಸಿರುವುದು ಖಚಿತವಾಗಿದೆ. ಗ್ರಾಮಸ್ಥರು ಮನೆಯಿಂದ ಹೊರಗೆ ಬಾರದಂತೆ ಅರಕೆರೆ ಪೊಲೀಸರು ಹಾಗೂ ಅರಣ್ಯ ಇಲಾಖೆಯಿಂದ ಟಾಮ್ ಟಾಮ್ ಮಾಡಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ಜೊತೆಗೆ 30 ರಿಂದ 35 ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹುಲಿ ಹಿಡಿಯುವ ಕೆಲಸ ನಡೆಯುತ್ತಿದೆ. ಹುಲಿ ಒಂದೆಡೆಯಿಂದ ಮತ್ತೊಂದೆಡೆ ಓಡಾಟ ನಡೆಸುತ್ತಿರುವುದರಿಂದ ಬೋನ್ ಇಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಹಾಗೂ ನಿರ್ಜನ ಪ್ರದೇಶಗಳಲ್ಲಿ ಹುಲಿ ಓಡಾಟ ನಡೆಸುತ್ತಿರುವ ಕಾರಣ ಡ್ರೋಣ್ ಮೂಲಕ ಪತ್ತೆ ಹಚ್ಚಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಶ್ರೀರಂಗಪಟ್ಟಣ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ, ಸಹಾಯಕ ಅರಣ್ಯಾಧಿಕಾರಿ ಆನಂದೇಗೌಡ, ಮೈಸೂರಿನ ಎಲ್‌ಟಿಎಫ್ ಸಿಬ್ಬಂದಿ ಸೇರಿದಂತೆ ೩೫ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಹಾಜರಿದ್ದರು.