ಸಾರಾಂಶ
- ಎಸ್‌ಎಸ್‌ಎಲ್‌ಸಿ ಅಂಕವೀರರಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಮಕ್ಕಳು ಮೊಬೈಲ್‌ಗಳಿಂದ ದೂರವಿರಬೇಕು. ಮೊಬೈಲ್ ಸಂಸ್ಕೃತಿ ಸಮಾಜಕ್ಕೆ ಬಹಳಷ್ಟು ಕಂಟಕವಾಗುತ್ತಿದೆ. ಪುಸ್ತಕಗಳನ್ನು ಓದಿ. ಇಡೀ ಭಾರತದಲ್ಲಿ ಅತ್ಯಂತ ಸರ್ವಶ್ರೇಷ್ಠ ಸಾಹಿತ್ಯದ ಭಂಡಾರವನ್ನು ಹೊಂದಿರುವಂತಹ ಅಗ್ರಮಾನ್ಯ ಭಾಷೆ ಅಂದರೆ ನಮ್ಮ ಕನ್ನಡ ಭಾಷೆ ಎಂದು ಬೆಂಗಳೂರಿನ ಜನನಿ ಫೌಂಡೇಷನ್ ಸಂಸ್ಥಾಪಕ, ಸಾಹಿತಿ ನಾಗಲೇಖ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ನಡೆದ 2023-2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ, ಕನ್ನಡದ ಪುಸ್ತಕಗಳಿಗೆ ವಿಶೇಷ ತಾಕತ್ತು ಇದೆ. ನಮ್ಮ ಬದುಕನ್ನು ಬದಲಾಯಿಸುವುದು ಮೊಬೈಲ್ ಅಲ್ಲ, ಕನ್ನಡ ಸಾಹಿತ್ಯದ ಪುಸ್ತಕಗಳು ಎಂದರು.ಭಾರತದಲ್ಲಿ 29 ರಾಜ್ಯಗಳನ್ನು ಕಾಣುತ್ತೇವೆ, ಇವುಗಳ ಪೈಕಿ 28 ರಾಜ್ಯಗಳು ತಿರುಗಿ ನೋಡುವಂತಹ ಗತ್ತು ಗಮ್ಮತ್ತು, ತಾಕತ್ತು, ಸಂಸ್ಕೃತಿ, ಸಭ್ಯತೆಯನ್ನು ಹೊಂದಿರುವಂತಹ ಸರ್ವಶ್ರೇಷ್ಠವಾದ ರಾಜ್ಯ ಅಂದರೆ ನಮ್ಮ ಹೆಮ್ಮೆಯ ಕರ್ನಾಟಕ. ಇಂತಹ ರಾಜ್ಯದಲ್ಲಿ 31 ಜಿಲ್ಲೆಗಳನ್ನು ಕಾಣುತ್ತೇವೆ. ಇವುಗಳ ಪೈಕಿ 30 ಜಿಲ್ಲೆಗಳು ತಿರುಗಿ ನೋಡುವಂತಹ ಸಂಸ್ಕೃತಿ, ಸಭ್ಯತೆ, ಸಾಂಸ್ಕೃತಿಕ ಲೋಕವನ್ನು ಹೊಂದಿರುವಂತಹ ಜಿಲ್ಲೆ ಅಂದರೆ ಅದು ದಾವಣಗೆರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ 108 ವರ್ಷಗಳಾಗಿವೆ. ಇಂತಹ ಜಿಲ್ಲಾ, ರಾಜ್ಯಮಟ್ಟದ ಪುರಸ್ಕಾರಗಳನ್ನು ಸಾಹಿತ್ಯ ಪರಿಷತ್ತು ಮಾಡಬೇಕು, ಅಂಥದರಲ್ಲಿ ಕಲಾಕುಂಚ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಇಂದಿನ ದಿನಗಳಲ್ಲಿ ಯಾವುದೇ ವೈದ್ಯಕೀಯ, ಎಂಜಿನಿಯರಿಂಗ್, ಐಎಎಸ್, ಯಾವುದೇ ಪದವಿ ಇರಲಿ ಅವು ಸಹಾ ಕನ್ನಡ ಮಾಧ್ಯಮದಲ್ಲಿವೆ. ಬಡತನ ಶಿಕ್ಷಣಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಾಕುಂಚ ಸಂಸ್ಥೆ ಅಧ್ಯಕ್ಷ ಕೆ.ಎಚ್. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ ಶೆಣೈ, ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಕೇರಳ ಗಡಿನಾಡ ಶಾಖೆ ಅಧ್ಯಕ್ಷೆ ಜಯಲಕ್ಷ್ಮಿ ರಾಮಚಂದ್ರ ಹೊಳ್ಳ, ವಸಂತಿ ಮಂಜುನಾಥ, ರಾಜ್ಯದ ಶೈಕ್ಷಣಿಕ ಸಾಧಕಿ ಟಿ.ಎಸ್.ಭಾವನ ಸೇರಿದಂತೆ ಇತರರು ಇದ್ದರು.- - -
ಬಾಕ್ಸ್ ಶರಣ ಸಂಸ್ಕೃತಿ ಪಾಲನೆ ಮುಖ್ಯಶರಣ ಸಂಸ್ಕೃತಿ, ಶರಣ ಪರಂಪರೆ, ಜವಾಬ್ದಾರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಜ್ಜನರಾಗಿ ಬಾಳಬೇಕೆಂದರೆ ತುಮಕೂರು ಶಿವಕುಮಾರ ಸ್ವಾಮೀಜಿ, ಸಿದ್ದೇಶ್ವರ ಶ್ರೀ, ಗದುಗಿನ ಪುಟ್ಟರಾಜ ಗವಾಯಿಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ಯಾವುದೂ ಶಾಶ್ವತ ಅಲ್ಲ, ಇಲ್ಲಿ ಒಂದೇ ಪ್ರೀತಿ, ವಿಶ್ವಾಸ, ಬಾಂಧವ್ಯ. ಗುರು ಹಿರಿಯರನ್ನು ಕಂಡಾಗ ನೀವು ಕೊಡುವ ಗೌರವ ಅದು ನಿಮ್ಮ ವ್ಯಕ್ತಿತ್ವದ ಸಂಪತ್ತನ್ನು ತೋರಿಸುತ್ತದೆ. ಅಂಕಗಳು ಒಂದು ಅಂಕ ಕಡಿಮೆ ಆದರೂ ಪರವಾಗಿಲ್ಲ, ನಡೆ ನುಡಿ, ಗುಣಗಳನ್ನು ಯಾವತ್ತೂ ಕಡಿಮೆ ಮಾಡಿಕೊಳ್ಳಬೇಡಿ ಎಂದು ಸಾಹಿತಿ ನಾಗಲೇಖ ಹೇಳಿದರು.- - - -28ಕೆಡಿವಿಜಿ38ಃ:
ಕಾರ್ಯಕ್ರಮವನ್ನು ಸಾಹಿತಿ ನಾಗಲೇಖ ಉದ್ಘಾಟಿಸಿದರು.