ಶರಣರ ಜೀವನ ಗಂಧದಂತೆ: ನ್ಯಾ.ಬಿಲ್ಲಪ್ಪ

| Published : Jul 15 2024, 01:51 AM IST

ಸಾರಾಂಶ

ಹೊಸದುರ್ಗದ ಶ್ರೀ ತೋಟದ ರಾಮಯ್ಯ ಗೌರಮ್ಮ ಬಾಲಿಕಾ ಪ್ರೌಢಶಾಲೆಯಲ್ಲಿ ಫ.ಗು. ಹಳಕಟ್ಟಿ ಮತ್ತು ಡಾ. ಕಮಲ ಹಂಪನಾ ಅವರ ಸ್ಮರಣೆಯ ಕಾರ್ಯಕ್ರಮ ನಡಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಶರಣರ ಜೀವನ ಗಂಧದಂತೆ ಇದ್ದು, ಕಾಯಕ ದಾಸೋಹ ಎನ್ನುವ ಅಮೂಲ್ಯ ತತ್ವವನ್ನು ಸಾರಿದ್ದಾರೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.

ಹೊಸದುರ್ಗದ ಶ್ರೀ ತೋಟದ ರಾಮಯ್ಯ ಗೌರಮ್ಮ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಫ.ಗು.ಹಳಕಟ್ಟಿ ಮತ್ತು ಡಾ.ಕಮಲ ಹಂಪನಾ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಹಳಕಟ್ಟಿಯವರು ಬಡತನವಿದ್ದರೂ ಸಹ ತಮ್ಮ ಮನೆ ಮಾರಿ ವಚನ ಸಾಹಿತ್ಯವನ್ನು ಪ್ರಕಟಗೊಳಿಸಲು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅಂದಿನ ಅವರ ಪ್ರಯತ್ನದ ಫಲವಾಗಿ ನಾವು ಇಂದು ಸಾವಿರಾರು ವಚನಗಳನ್ನು ಓದುವಂತಾಗಿದೆ ಎಂದರು.

ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಮಂಜುನಾಥ ಅವರು ಡಾ.ಕಮಲಾ ಹಂಪನಾ ಕುರಿತು ಮಾತನಾಡಿ, ಕಮಲಾ ಹಂಪನಾ ಅವರು ಸ್ತ್ರೀ ಸಂವೇದಿ ಲೇಖಕಿಯಾಗಿ ಗುರುತಿಸಿಕೊಂಡವರು. ಅವರು ನಿಧನದ ನಂತರವೂ ಅವರು ನೇತ್ರದಾನ ಮಾಡುವ ಮೂಲಕ ಆದರ್ಶರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಬಿ.ಪಿ.ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವಚನಗೀತೆ ಸ್ಪರ್ಧೆಯಲ್ಲಿ ವಿಜೇತರಾದ ರುಷ್ಮಿತ ಕುವರ್, ರಕ್ಷಿತ ಎಸ್, ರಕ್ಷಿತ ಎಲ್, ಸಾನಿಕಾ, ಪ್ರಾರ್ಥನ ಇವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ನಿವೃತ್ತ ಶಿಕ್ಷಕ ರಾಜಪ್ಪ, ನಳಿನ ಮೇಡಂ, ಮುಖ್ಯ ಶಿಕ್ಷಕರಾದ ಎ.ಎನ್.ಕಿರಣ್‌ಕುಮಾರ್ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.