ಕಲಬುರಗಿ ಶರಣಬಸವೇಶ್ವರರ ಬದುಕು ಮಾದರಿ: ಮಹಾದೇವ ಸ್ವಾಮೀಜಿ

| Published : Nov 25 2024, 01:03 AM IST

ಸಾರಾಂಶ

ಕಲಬುರಗಿ ಶರಣಬಸವೇಶ್ವರರ ಬದುಕು ಮಾದರಿಯಾಗಿದೆ.

ಅನ್ನದಾನೀಶ್ವರ ಶಾಖಾಮಠದ ಜಾತ್ರೆ ಅಂಗವಾಗಿ 11 ದಿನಗಳ ಕಾಲ‌ ನಡೆದ ಕಲಬುರಗಿ ಶರಣಬಸವೇಶ್ವರರ ಪುರಾಣ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಕನೂರು

ಕಲಬುರಗಿ ಶರಣಬಸವೇಶ್ವರರ ಬದುಕು ಮಾದರಿಯಾಗಿದೆ. ಅವರು ವಿಭೂತಿ ರುದ್ರಾಕ್ಷಿ, ಪಂಚಾಕ್ಷರಿ ಮಂತ್ರ, ಪಾದೋದಕ ಮತ್ತು ಪ್ರಸಾದವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡವರು ಎಂದು ಕುಕನೂರಿನ ಶಾಖಾಮಠದ ಮಹಾದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಜಾತ್ರೆ ಅಂಗವಾಗಿ 11 ದಿನಗಳ ಕಾಲ‌ ನಡೆಯುವ ಕಲಬುರಗಿ ಶರಣಬಸವೇಶ್ವರರ ಪುರಾಣ ಉದ್ಘಾಟಿಸಿ ಮಾತನಾಡಿದರು.ಶರಣರ ಪುರಾಣ ರೈತರ ಪುರಾಣವಾಗಿದೆ. ಕೃಷಿಯನ್ನು ಕಾಯಕವನ್ನಾಗಿಸಿಕೊಂಡ ಶರಣರು ಕೃಷಿಯಲ್ಲಿ ಪಕ್ಷಿಗಳ ಸಹಭಾಗಿತ್ವ ತಿಳಿಸಿದರು. ಪಕ್ಷಿಗಳನ್ನು ಓಡಿಸುವುದರಿಂದ ಬೆಳೆಗಳು ರೋಗಗ್ರಸ್ತವಾಗಿ ಇಳುವರಿ ಕಡಿಮೆ ಆಗುತ್ತದೆ ಎಂದರಿತು ಹೊಲಕ್ಕೆ ಬರುವ ಪಶುಪಕ್ಷಿಗಳಿಗೆ ಮತ್ತು ಹೊಲದ ಬದಿಯಲ್ಲಿ ಹಾದು ಹೋಗುವ ಜನರಿಗಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಿದವರು. ಇಂತಹ ಶರಣರ ಪುರಾಣ ಕೇಳುವುದರಿಂದ ರೈತರ ಬದುಕು ಸುಂದರವಾಗುತ್ತದೆ ಎಂದರು.

ಪುರಾಣ ಪ್ರವಚನಕಾರ ಸೊರಟೂರ ಗ್ರಾಮದ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಹಳ್ಳಿಗಳಲ್ಲಿ ಶರಣಬಸವೇಶ್ವರರ ಬಗ್ಗೆ ಅಪಾರವಾದ ಅಭಿಮಾನ ಭಕ್ತಿ ಇದೆ. ಶರಣರು ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಭೂಮಿಗೆ ಅವತರಿಸಿ ಬಂದವರು. ಈ ನಾಡಿನಲ್ಲಿ ಅತಿ ಹೆಚ್ಚು ಜಾತ್ರೆಗಳನ್ನು ಶರಣರ‌ ಹೆಸರಿನಲ್ಲಿ ಭಕ್ತರು ಮಾಡುತ್ತಾರೆ ಎಂದರು.

ಸಂಗೀತ ಸೇವೆಯನ್ನು ಈಶ್ವರಯ್ಯ ಹಲಸಿನಮಠದ, ಮಲ್ಲಿಕಾರ್ಜುನ ಕರ್ಜಗಿ ಮಾಡಿದರು.

ಪ್ರಮುಖರಾದ ಶರಣಯ್ಯ ಹಿರೇಮಠ, ಶಿವಕಲ್ಲಯ್ಯ ವಸ್ತ್ರದ, ಬಸಯ್ಯ ಚಂಡೂರು, ಪಕ್ಕಪ್ಪ, ಮುದಿಯಪ್ಪ ಯಗ್ಗಮನವರ, ಹನುಮಂತ ಬಂಗಾರಿ, ಬಸವರಾಜ ಬ್ಯಾಳಿ, ಹಂಚ್ಯಾಲಪ್ಪ ಅಳವಂಡಿ, ರಂಗಪ್ಪ, ತಿರುಗುಣೇಶ ಮೂಗನೂರು, ಶರಣಪ್ಪ, ಮಂಜುನಾಥ, ಮಲ್ಲಯ್ಯಜ್ಜ ಮತ್ತು ಇತರರು ಇದ್ದರು.