ಅಲೆಮಾರಿಗಳ ಬದುಕು ಅತಂತ್ರ

| Published : Aug 18 2025, 12:00 AM IST

ಸಾರಾಂಶ

ಪಟ್ಟಣದ ಕಾಯಕ ನಗರದಲ್ಲಿ ತಾತ್ಕಾಲಿಕ ಶೆಡ್‌ ಹಾಕಿಕೊಂಡು ಬದುಕಿನ ಬಂಡಿ ನೂಕುತ್ತಿರುವ ಅಲೆಮಾರಿ ಜನಾಂಗಕ್ಕೆ ನೆಲೆ ಇಲ್ಲದೇ ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸೂಕ್ತ ನೆಲೆ ಇಲ್ಲ । ವಿಷ ಜಂತುಗಳ ಮಧ್ಯೆ ನಿತ್ಯ ಬದುಕಿನ ಸೆಣಸಾಟ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಪಟ್ಟಣದ ಕಾಯಕ ನಗರದಲ್ಲಿ ತಾತ್ಕಾಲಿಕ ಶೆಡ್‌ ಹಾಕಿಕೊಂಡು ಬದುಕಿನ ಬಂಡಿ ನೂಕುತ್ತಿರುವ ಅಲೆಮಾರಿ ಜನಾಂಗಕ್ಕೆ ನೆಲೆ ಇಲ್ಲದೇ ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೌದು, ಪಟ್ಟಣದ ಹಳೆ ಸಂತೆ ಮಾರುಕಟ್ಟೆ ಪ್ರದೇಶದಲ್ಲಿಬುಡ್ಗ ಜಂಗಮ, ಸಿಂಧೋಳಿ, ಕುಂಚಿ ಕೊರವರು, ಚನ್ನದಾಸ ಸೇರಿದಂತೆ 44 ಕುಟುಂಬಗಳು ತಾತ್ಕಾಲಿಕ ಶೆಡ್‌ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಸಂತೆ ಮಾರುಕಟ್ಟೆ ಜಾಗದಲ್ಲಿ ನೆಮ್ಮದಿ ಊರು ಎಂಬ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಬೇಕಿದೆ ಎಂದು ಈ ಅಲೆಮಾರಿ ಜನಾಂಗದವರ ತಾತ್ಕಾಲಿಕ ಶೆಡ್‌ ತೆರವು ಮಾಡಿಸಿದ್ದರು. ಆಗ ಕಾಯಕ ನಗರದಲ್ಲಿದ್ದ ಖಾಲಿ ನಿವೇಶನಗಳಿಗೆ ಸ್ಥಳಾಂತರ ಮಾಡಲಾಗಿತ್ತು.

ಕಾಯಕ ನಗರದಲ್ಲಿ ಕೈಗಾರಿಕೆ ಇಲಾಖೆಯಿಂದ ರಸ್ತೆ, ಚರಂಡಿ, ವಿದ್ಯುತ್‌ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕೆಲ ಭಾಗಗಳಲ್ಲಿ ಮಾತ್ರ ಮಾಡಿದ್ದಾರೆ. ಸುತ್ತಲೂ ಗಿಡ ಗಂಟೆಗಳ ಪಕ್ಕದಲ್ಲಿ ಬಟ್ಟೆ ಮತ್ತು ತಗಡುಗಳಿಂದ ಅಲೆಮಾರಿಗಳು ಟೆಂಟ್‌ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ನಿತ್ಯ ವಿಷ ಜಂತುಗಳ ಮಧ್ಯೆಯೇ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಗೇಣು ಜಾಗದಲ್ಲಿ ವಾಸವಾಗಿದ್ದಾರೆ. ಅನೇಕ ಸಲ ವಿಷಗಳನ್ನು ಕಚ್ಚಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ ಕಾಯಕ ನಗರದಲ್ಲಿರುವ ನಿವೇಶನಗಳು ಬೇರೆ ಜನಾಂಗಕ್ಕೆ ಹಂಚಿಕೆಯಾಗಿ ತಾವು ನಿವೇಶನ ಖಾಲಿ ಮಾಡಬೇಕೆಂದು ಅನೇಕ ಸಲ ಅಧಿಕಾರಿಗಳು ಎಚ್ಚರಿಕೆ ನೀಡುತ್ತಾ ಬಂದಿರುವ ಹಿನ್ನೆಲೆ ಅಲೆಮಾರಿಗಳ ಬದುಕು ಅತಂತ್ರವಾಗಿದೆ.

ಕಾಯಕ ನಗರದಲ್ಲಿರುವ ಖಾಲಿ ನಿವೇಶನಗಳು ಈಗಾಗಲೇ ಪರಿಶಿಷ್ಟ ಪಂಗಡದ 100 ಫಲಾನುಭವಿಗಳಿಗೆ ವಾಲ್ಮೀಕಿ ನಿಗಮದಿಂದ ಹಂಚಿಕೆ ಮಾಡಲಾಗಿದೆ. ಈ ಅಲೆಮಾರಿ ಜನಾಂಗದವರು ತಾತ್ಕಾಲಿಕ ಶೆಡ್‌ಗಳನ್ನು ಅದರ ಪಕ್ಕದಲ್ಲೆ ಹಾಕಿಕೊಂಡಿದ್ದಾರೆ. ಈ ಹಿಂದೆ ಇವರಿಗೆ ಕೈಗಾರಿಕೆ ಇಲಾಖೆಯಿಂದ ನಿವೇಶನ ತೆರವು ಮಾಡುವಂತೆ ನೋಟಿಸ್‌ ಕೂಡ ನೀಡಿದ್ದರು. ಈ ಜಾಗ ಬಿಟ್ಟರೇ ಅಲೆಮಾರಿಗಳು ವಾಸವಾಗಿರಲು ಈವರೆಗೂ ಸರ್ಕಾರ ಇವರಿಗೆ ನಿವೇಶನ ನೀಡಿಲ್ಲ, ಪ.ಜಾ, ಪ.ಪಂ, ಅಲೆಮಾರಿ, ಅರೆ ಅಲೆಮಾರಿ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಇವರಿಗೆ ಇದ್ದು ಇಲ್ಲದಂತಾಗಿದೆ. ಇವರ ಕಷ್ಟಗಳನ್ನು ಕೇಳುವವರಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಪ.ಜಾ, ಪ.ಪಂ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಸೋಮವಾರ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಇವರ ಅಹವಾಲು ಸ್ವೀಕರಿಸಿ, ಇವರಿಗೆ ಸೂಕ್ತ ಸೂರು ನೀಡುತ್ತಾರೆಂಬ ನಿರೀಕ್ಷೆಯಲ್ಲಿ ಅಲೆಮಾರಿಗಳಿದ್ದಾರೆ.