ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ಮನುಕುಲದ ಸಾರ್ಥಕ ಬದುಕಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಶಿವಕುಮಾರ ಸ್ವಾಮೀಜಿ ಅವರು ದುಡಿದು ತಿನ್ನಬೇಕೆಂಬ ತತ್ವವನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದ್ದರು ಎಂದು ಮೇಘಾಲಯ ರಾಜ್ಯಪಾಲ ವಿಜಯಶಂಕರ್ ಅಭಿಪ್ರಾಯಪಟ್ಟರು.ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಶ್ರೀಗಳ 6ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅನ್ನ ಪ್ರಸಾದ, ಅಕ್ಷರ ಪ್ರಸಾದ ಇಲ್ಲವೆಂದು ಯಾವೊಬ್ಬ ವ್ಯಕ್ತಿಯೂ ಮಠದಿಂದ ಹಿಂದಿರುಗಿದವರಿಲ್ಲ. ಮಠದ ಆಶ್ರಯ ಪಡೆದು ಉನ್ನತ ಸ್ಥಾನಕ್ಕೆ ತಲುಪಿ ಜಗತ್ತಿನ ಎಲ್ಲಾ ಭಾಗದಲ್ಲಿ ನೆಲೆಸಿರುವವರು ಮಠವನ್ನು ಸ್ಮರಿಸದ ದಿನಗಳಿಲ್ಲ. ಶುದ್ಧ ಬದುಕನ್ನು ಬದುಕಿ ಸಿದ್ಧ ಪುರುಷರಾಗಿ ಸಾರ್ಥಕ ಜೀವನವನ್ನು ನಡೆಸಿದ ಶ್ರೀಗಳ ವ್ಯಕ್ತಿತ್ವಕ್ಕೆ ಯಾರೂ ಸಾಟಿಯಿಲ್ಲವೆಂದು ಬಣ್ಣಿಸಿದರು. ತಾವು ರಾಜ್ಯದ ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಮಗುವಿಗೊಂದು ಮರ-ಶಾಲೆಗೊಂದು ವನ ಎಂಬ ವಿನೂತನ ಕಾರ್ಯಕ್ರಮವನ್ನು ಶ್ರೀಗಳ ಆಶೀರ್ವಾದದಿಂದ ಈ ಮಠದಿಂದಲೇ ಚಾಲನೆ ನೀಡಿ ರಾಜ್ಯದ ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಹಾಡಲಾಗಿತ್ತು ಎಂದು ಸ್ಮರಿಸಿದರು. ಬಳಿಕ ಶ್ರೀಗಳ ಕುರಿತು ಕವನ ವಾಚಿಸಿದರು.ನೇತೃತ್ವ ವಹಿಸಿದ್ದ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಶ್ರೀ ಮಠದ ಸಾಧನೆಯ ಹಿಂದೆ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದದ ಶ್ರಮವಿದೆ. ಗಂಧದಂತೆ ತಮ್ಮ ಜೀವನವನ್ನು ಇತರರಿಗಾಗಿ ತೇಯ್ದು ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ನಾಡಿನ ಜನರ ಮನ ಗೆದ್ದಿದ್ದರು. ಜಂಗಮರಾಗಿ ನಾಡನ್ನು ಸುತ್ತಿ, ಪೀಠಾಧ್ಯಕ್ಷರಾಗಿ ಇಡೀ ರಾಷ್ಟ್ರದ ಮಣ್ಣಿನ ಸ್ಪರ್ಶ ಮಾಡಿದ ಶ್ರೀಗಳು ಗ್ರಾಮೀಣ ಭಾಗದ ಮಕ್ಕಳಿಗಾಗಿ ಶಾಲೆ-ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ದಾಸೋಹಿ ಎನಿಸಿಕೊಂಡಿದ್ದರು ಎಂದು ತಿಳಿಸಿದರು.
ಸಾನಿಧ್ಯವಹಿಸಿದ್ದ ಮೈಸೂರಿನ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳು ಅವತರಿಸಿದ ಈ ಸಿದ್ಧಗಂಗಾ ಕ್ಷೇತ್ರವು ಅವರ ದೂರದೃಷ್ಟಿತ್ವ ಸೇವೆಗಳಿಂದ ಪುನೀತವಾಗಿದೆ. ಶ್ರೀ ಉದ್ದಾನ ಶಿವಯೋಗಿ ಸ್ವಾಮೀಜಿ ಅವರ ಅಪೇಕ್ಷೆಯಿಂದ ಮಠದ ಅಧಿಕಾರವನ್ನು ವಹಿಸಿಕೊಂಡು ಮುನ್ನಡೆಸಿದ ಮಹಾನ್ ಶಿವಯೋಗಿಯಾಗಿದ್ದರು ಎಂದರು.ಶ್ರವಣಬೆಳಗೊಳ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಮಾತನಾಡಿ, ಜನಸೇವೆಯಿಂದ ಶಿವಕುಮಾರ ಸ್ವಾಮೀಜಿ ಅವರು ಭಾರತದ ಶ್ರೇಷ್ಠ ಸಂತರಲ್ಲೊಬ್ಬರಾಗಿದ್ದಾರೆ. ತಮ್ಮ ಪಂಚೇಂದ್ರಿಯಗಳ ಬಯಕೆಗಳನ್ನು ನಿಗ್ರಹಿಸುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಂಡಿದ್ದರು. ಇವರ ತತ್ವಾದರ್ಶಗಳು ತುಮಕೂರನ್ನು ಸಮೃದ್ಧಿಗೊಳಿಸುವ ಮೂಲಕ ಇಂದಿನ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿವೆ ಎಂದು ತಿಳಿಸಿದರು.ಸಿದ್ಧಗಂಗಾ ಮಠದ ಉತ್ತಾಧಿಕಾರಿ ಶಿವಸಿದ್ಧೇಶ್ವರಸ್ವಾಮಿ ತಮ್ಮ ನುಡಿ ನಮನದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಸಾಧನೆ ಬಗ್ಗೆ ವಿವರಿಸಿದರು. ಬಸವತತ್ವದ ಆಧಾರದ ಮೇಲೆ ಮಠವನ್ನು ಕಟ್ಟಿ ಬೆಳೆಸಿದ ಶ್ರೀಗಳು ಬಡವರು, ನಿರ್ಗತಿಕರ ಪಾಲಿಕೆ ಅಭಯ ಹಸ್ತವಾಗಿದ್ದರು. ತಮ್ಮ ಮಾನವೀಯ ಸೇವೆಗಳ ಮೂಲಕ ಸಾವಿಲ್ಲದ ಡಾ. ಶಿವಕುಮಾರ ಸ್ವಾಮೀಜಿ ಅವರು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದಾರೆ ಎಂದು ನುಡಿದರು. ಈ ಸಂದರ್ಭದಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಸೇವೆ ಸಲ್ಲಿಸಿರುವ ಜಾನಪದ ಜಂಗಮ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪುಣ್ಯ ಸ್ಮರಣೆ ನಿಮಿತ್ತ ಏರ್ಪಡಿಸಿದ್ದ ವಚನಗಾಯನ ಕಾರ್ಯಕ್ರಮದಲ್ಲಿ ಮರವಿದ್ದು ಫಲವೇನು? ನೆಳಲಿಲ್ಲದೆನ್ನಕ್ಕ-ಧನವಿದ್ದು ಫಲವೇನು? ದಯವಿಲ್ಲದೆನ್ನಕ್ಕ, ಶಿವಭಕ್ತಿಯುಳ್ಳವನಿಗೆ ಇಂತೀ ಷಡ್ಗುಣವಿರಬೇಕು’ ಎಂಬ ವಚನಗಳು ನೆರೆದ ಶರಣರಿಗೆ ವಚನಾಮೃತವನ್ನು ಉಣಬಡಿಸಿದವು.