ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಿರಿಯರ ಜೀವನವು ಕಿರಿಯರಿಗೆ ಮಾರ್ಗದರ್ಶನವಾಗಿರಬೇಕು ಹಾಗೂ ಹಿರಿಯರು ಕಿರಿಯರಿಗೆ ದಾರಿ ದೀಪವಾಗ ಬೇಕು. ಆಗಲೇ ನಮ್ಮ ಸಮಾಜ ಸ್ವಾಸ್ಥ್ಯ ಸಮಾಜವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯಪಟ್ಟರು.ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕ್ರೀಡೆ ಇಲಾಖೆ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಹಿರಿಯ ನಾಗರೀಕರ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ವೃದ್ಧರು ಅಮೂಲ್ಯ ಆಸ್ತಿ
ವೃದ್ಧರು ನಿರುಪಯುಕ್ತರಲ್ಲ, ನಮ್ಮ ಅಮೂಲ್ಯ ಆಸ್ತಿ. ವಿಶ್ವ ಹಿರಿಯ ನಾಗರಿಕರ ದಿನವಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಹಿರಿಯ ನಾಗರಿಕರು ಒಂದು ತಲೆಮಾರಿನ ಹಿಂದಿನವರೆಗೂ ನಮ್ಮ ಕುಟುಂಬಗಳ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ನೊಗ ಹೊತ್ತವರು. ದುಡಿಯುವ ಶಕ್ತಿ ಕುಂಠಿತಗೊಂಡರೂ ಅವರು ಯಾವತ್ತಿದ್ದರೂ ದೇಶದ ಆಸ್ತಿ. ಅವರಿಗಾಗಿ ಒಂದು ದಿನವನ್ನು ಮುಡಿಪಾಗಿಟ್ಟು ಆಚರಿಸುವುದು ಹೊಸ ತಲೆಮಾರಿನವರ ಕರ್ತವ್ಯ ಎಂದರು.ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ಹೋಗುವ ಅಥವಾ ಸಂಗಾತಿಯ ಮಾತಿಗೆ ಕಟ್ಟುಬಿದ್ದು ಕುಟುಂಬ ತೊರೆದು ಹೋಗುವ ಪ್ರವೃತ್ತಿ ,ಪರಿಸ್ಥಿತಿ, ಅಥವಾ ವೃದ್ದರನ್ನು ಅನಾಥಾಶ್ರಮಗಳಿಗೆ ಸೇರಿಸುವುದು ಹೆಚ್ಚುತ್ತಿದೆ. ಇದರಿಂದ ಬಾಧಿತವಾಗಿರುವ ವೃದ್ಧರ ಗೋಳನ್ನು ವಿವರಿಸುವುದು ಕಷ್ಟಸಾಧ್ಯ. ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ ಎಂದರು.2050ಕ್ಕೆ 150 ಕೋಟಿ ಹಿರಿಯರು
ವಿಶ್ವಸಂಸ್ಥೆ ವರದಿಯೊಂದರ ಪ್ರಕಾರ 2050ರಷ್ಟರಲ್ಲಿ ವಿಶ್ವಾದ್ಯಂತ ಹಿರಿಯ ನಾಗರಿಕ ಸಂಖ್ಯೆ 150 ಕೋಟಿ ಆಗಬಹುದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೃದ್ಧರು ಇರುವುದರಿಂದ ಅವರ ಮೂಲಭೂತ ಅಗತ್ಯಗಳಿಗೆ ಅನುಕೂಲ ಮಾಡಿಕೊಡುವಂಥ ವ್ಯವಸ್ಥೆಯನ್ನು ನಿರ್ಮಿಸುವುದು ಅತ್ಯಗತ್ಯ. ಯಾಕೆಂದರೆ ಎಲ್ಲಾ ವೃದ್ಧರೂ ಕೂಡ ತಮ್ಮ ಕೊನೆಗಾಲದಲ್ಲಿ ನೆಮ್ಮದಿಯಿಂದ ಇರುತ್ತಾರೆಂದು ಹೇಳಲು ಸಾಧ್ಯವಿಲ್ಲ. ತಮ್ಮ ಮಕ್ಕಳಿಗಾಗಿ ಇಡೀ ಜೀವಮಾನ ದುಡಿದು, ಉಳಿತಾಯದ ಹಣ ಇಲ್ಲದೇ ವೃದ್ಧಾಪ್ಯಕ್ಕೆ ಕಾಲಿಟ್ಟವರೇ ಹೆಚ್ಚಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಜೀವಗಳಿಗೆ ಭದ್ರತೆ ಒದಗಿಸುವ ಬಲಿಷ್ಠ ವ್ಯವಸ್ಥೆ ನಿರ್ಮಾಣವಾಗಬೇಕು ಎಂದರು.ನೀವು ವರ್ಷದ 365 ದಿನವೂ ನಿಮ್ಮ ಕುಟುಂಬದ ಹಿರಿಯ ಜೀವಗಳ ಜೊತೆ ಒಡನಾಡುತ್ತಿದ್ದೀರೆಂದರೆ ಅದು ನಿಮ್ಮ ಸೌಭಾಗ್ಯ. ಈಗಿನ ಜಾಗತೀಕತೆಯ ದಿನಗಳಲ್ಲಿ ಅದು ಕಷ್ಟ. ಈ ಒಂದು ದಿನವನ್ನು ಇಡಿಯಾಗಿ ನಿಮ್ಮ ಅಜ್ಜ ಅಜ್ಜಿ, ಅಪ್ಪ ಅಮ್ಮನ ಜೊತೆ ಕಳೆಯಿರಿ. ಅವರಿಗೆ ಖುಷಿ ಕೊಡುವ, ನೆಮ್ಮದಿ ತರುವ ಕೆಲಸವನ್ನು ಮಾಡಿಕೊಡಿ. ವೃದ್ಧಾಶ್ರಮಗಳಿಗೆ ದೇಣಿಗೆ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ನಮ್ಮ ಸರ್ಕಾರಗಳು ವೃದ್ಧರಿಗೆಂದು ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಅನೇಕ ಹಿರಿಯ ನಾಗರಿಕರಿಗೆ ಈ ಯೋಜನೆಗಳು ಬೇರೆ ಬೇರೆ ಕಾರಣಕ್ಕೆ ತಲುಪದೇ ಹೋಗಿರಬಹುದು. ನಿಮಗೆ ಇಂಥ ಪ್ರಕರಣಗಳು ಗಮನಕ್ಕೆ ಬಂದರೆ ಅವರಿಗೆ ನೆರವಾಗುವ ಪ್ರಯತ್ನ ಮಾಡಿ. ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಡುವುದು, ಪಿಂಚಣಿ ಮಾಡಿಸಿಕೊಡುವುದು ಇತ್ಯಾದಿ ಕಾರ್ಯಗಳಲ್ಲಿ ನೆರವಾಗಿ. ನಿಮ್ಮ ಇಂಥ ಈ ಸಹಾಯವು ಆ ವೃದ್ಧರಿಗೆ ದೊಡ್ಡ ಉಪಕಾರವಾಗಬಹುದು ಎಂದರು.ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ಧೇಶಕ ವೆಂಕಟೇಶರೆಡ್ಡಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಾಯಕ ನಿರ್ಧೇಶಕ ಜಗದೀಶ, ಶ್ರೀ ಸಾಯಿ ಇಂಟರ್ ನ್ಯಾಷನಲ್ ಟ್ರಸ್ಟ್ ನ ನಾರಾಯಣಮೂರ್ತಿ, ಹಿರಿಯ ನಾಗರೀಕರ ವೇದಿಕೆಯ ಸುಬ್ಬರಾಯಪ್ಪ, ಶ್ರೀನಿವಾಸರೆಡ್ಡಿ, ಜಯರಾಮರೆಡ್ಡಿ,ಅಶ್ವತ್ತನಾರಾಯಣ್ ಮತ್ತಿತರರು ಇದ್ದರು.