ಸಾಹಿತ್ಯಕಾರರ ಮೇರು ಲೇಖಕ ನಿರಂಜನರು: ಸಾಹಿತಿ ಡಾ. ಸಿ. ವೀರಣ್ಣ

| Published : Feb 10 2025, 01:51 AM IST

ಸಾರಾಂಶ

ಕನ್ನಡದಲ್ಲಿ ನಿರಂಜನ ಮತ್ತು ಕಟ್ಟಿಮನಿ ಅವರು ಪ್ರಗತಿಶೀಲ ಬರಹಗಾರರಾಗಿದ್ದರು. ಸೃಜನಶೀಲ ಮನಸ್ಸು ಸತ್ಯವನ್ನು ಹೇಳುತ್ತದೆ‌. ಆ ಸಾಲಿನಲ್ಲಿ ನಿರಂಜನರು ನಿಲ್ಲುತ್ತಾರೆ.

ಧಾರವಾಡ:

ನಿರಂಜನ ಅವರು ಕನ್ನಡ ಸಾಹಿತ್ಯಕಾರರ ಮೇರು ಲೇಖಕರಾಗಿದ್ದು ಅವರ ಬರವಣಿಗೆಯಲ್ಲಿ ಪ್ರಗತಿಶೀಲ ಸಾಮಾಜಿಕ ಹಿತವನ್ನು ಅವರ ಬರಹದಲ್ಲಿ ‌ಕಾಣಬಹುದು ಎಂದು ಸಾಹಿತಿ ಡಾ. ಸಿ. ವೀರಣ್ಣ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ನಿರಂಜನ ವಿಚಾರ ವೇದಿಕೆ ಸಹಯೋಗದಲ್ಲಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಿದ ನಿರಂಜನರ ಜನ್ಮ ಶತಮಾನೋತ್ಸವ ‌ನೆನಪಿನಲ್ಲಿ ನಿರಂಜನ ಬದುಕು-ಸಾಹಿತ್ಯ ಉದ್ಘಾಟಿಸಿ ಮಾತನಾಡಿದರು. ಕನ್ನಡದಲ್ಲಿ ನಿರಂಜನ ಮತ್ತು ಕಟ್ಟಿಮನಿ ಅವರು ಪ್ರಗತಿಶೀಲ ಬರಹಗಾರರಾಗಿದ್ದರು. ಸೃಜನಶೀಲ ಮನಸ್ಸು ಸತ್ಯವನ್ನು ಹೇಳುತ್ತದೆ‌. ಆ ಸಾಲಿನಲ್ಲಿ ನಿರಂಜನರು ನಿಲ್ಲುತ್ತಾರೆ ಎಂದರು.

ನಿರಂಜನರು ಕನ್ನಡ ಬರಗಾರರಲ್ಲಿ ಶ್ರೇಷ್ಠ ಬರಹಗಾರರು. ಅವರ ಅನೇಕ ಕೃತಿಗಳು ಸಾಮಾಜಿಕ ಪ್ರಗತಿಶೀಲವನ್ನು ಕಾಣಬಹುದು. ಇಂದಿನ ಬರಹಗಾರರು ಜನರಲ್ಲಿ ಪ್ರಗತಿಶೀಲ ಬೌದ್ಧಿಕ ಚಿಂತನೆ ಒಳಪಡಿಸುವ ಕಾರ್ಯ ಆಗಬೇಕಾಗಿದೆ. ನಿರಂಜನ ಅವರ ಗಾರ್ಕಿ ಕಾದಂಬರಿ ನಾಟಕವಾಗಿ ಬಹಳ ಜನಪ್ರಿಯವಾಯಿತು. ನಿರಂಜನ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಇಂದಿನ ಬರಹಗಾರರು ನಿರಂಜನ ಅವರ ತತ್ವಾದರ್ಶಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಹೇಳಿದರು.

ಹಿರಿಯ ವಿಮರ್ಶಕರಾದ ಡಾ. ರಾಜೇಂದ್ರ ಚನ್ನಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಚಾಲಕ ಶಕ್ತಿಯಾಗಿ ನಿರಂಜನ ಅವರು ಕನ್ನಡ ಸಾಹಿತ್ಯವನ್ನು ಬೆಳೆಸಿದರು. ಅವರು ಬದುಕಿನಲ್ಲಿ ಅನೇಕ ಸವಾಲು ಎದುರಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ‌ನೀಡಿದ್ದಾರೆ. ಕನ್ನಡ ಪ್ರಗತಿಶೀಲ ಬರವಣಿಗೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ನೋಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್. ಮುಕುಂದರಾಜ, ಪ್ರಸ್ತುತ ಕಾಲವನ್ನು ಸರಿಯಾಗಿ ಗ್ರಹಿಸಿದಾಗ ಸಂವಿಧಾನ ಅರ್ಥ ಮಾಡಿಕೊಳ್ಳಲು ಸಾಧ್ಯ. ಸಾಹಿತ್ಯ ಅಕಾಡೆಮಿ ವಿವಿಧ ಮಹನೀಯರ ಜೀವನ ದರ್ಶನವನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸುವ ಕಾರ್ಯವನ್ನು ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಅನೇಕ ಮಹಿಳಾ ಬರಹಗಾರರ ಮುಖಾಂತರ ವಿವಿಧ ವಿಷಯಗಳ ಮೇಲೆ ಕೃತಿಗಳನ್ನು ರಚಿಸಲಾಗುತ್ತದೆ ಎಂದು ಹೇಳಿದರು.

ನಂತರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಚಿಂತಕ ಡಾ‌. ಬಿ.ಆರ್. ಮಂಜುನಾಥ, ಪ್ರಾಧ್ಯಾಪಕ ಡಾ. ರಂಗನಾಥ ಕಂಟನಕುಂಟೆ ಪ್ರಗತಿಪರ ಚಳವಳಿಗಳ ಒಡನಾಟ ವಿಷಯ ಕುರಿತು, ಹಿರಿಯ ಪತ್ರಕರ್ತ ಡಿ‌. ಉಮಾಪತಿ ಪತ್ರಿಕೆ ಮತ್ತು ಇತರ ಬರಹಗಳು ಕುರಿತು ಮಾತನಾಡಿದರು.

ಕವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಅನುಸಯಾ ಕಾಂಬಳೆ ನಿರಂಜನರ ಕಥೆಗಳು ಕುರಿತು ಮಾತನಾಡಿದರು. ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಅರ್ಜುನ ಗೊಳಸಂಗಿ, ನಿರಂಜನ ವಿಚಾರ ವೇದಿಕೆಯ ಸಂಚಾಲಕ ಎಚ್.ಜಿ. ದೇಸಾಯಿ, ಕೆ. ರಾಮರೆಡ್ಡಿ, ಡಾ. ಮಾಲತಿ ಪಟ್ಟಣಶೆಟ್ಟಿ, ಪತ್ರಕರ್ತೆ ಡಾ. ಆರ್. ಪೂರ್ಣಿಮಾ, ರಂಜಾನ ದರ್ಗಾ ಇದ್ದರು.