ಮಕ್ಕಳಲ್ಲಿ ಇಂತಹ ಚಟುವಟಿಕೆಗಳು ಕಲಿಕಾ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅಲ್ಲದೇ ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಚಟುವಟಿಕೆ ಮೂಲಕ ಪರಿಚಯಿಸಿದಂತಾಗುತ್ತದೆ. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಹೊರತರಲು ಈ ಮಕ್ಕಳ ಸಂತೆ ಸಹಕಾರಿಯಾಗಲಿದೆ .

ದೊಡ್ಡಬಳ್ಳಾಪುರ: ನಗರದ ರಾಜೀವ್ ಗಾಂಧಿ ಬಡಾವಣೆಯ 1ನೇ ಹಂತದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮಕ್ಕಳ ಸಂತೆ ನಡೆಯಿತು. ವಿವಿಧ ಮಾರಾಟ ಚಟುವಟಿಕೆಗಳನ್ನು ಪ್ರತಿನಿಧಿಸುವ ಮೂಲಕ ಮಕ್ಕಳು ಪೋಷಕರು, ಅತಿಥಿಗಳನ್ನು ಆಕರ್ಷಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಮೇಶ್ ಮಾತನಾಡಿ, ಮಕ್ಕಳಲ್ಲಿ ಇಂತಹ ಚಟುವಟಿಕೆಗಳು ಕಲಿಕಾ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅಲ್ಲದೇ ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಚಟುವಟಿಕೆ ಮೂಲಕ ಪರಿಚಯಿಸಿದಂತಾಗುತ್ತದೆ. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಹೊರತರಲು ಈ ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್ ರಾಜ್ ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸ್ಥಳೀಯ ಅಂಗನವಾಡಿ ಶಿಕ್ಷಕರಾದ ನಂದಿನಿ ಹಾಗೂ ಸಹಾಯಕರ ಶ್ರಮ ಅಪಾರವಾದದ್ದು, ಪುಟಾಣಿ ಮಕ್ಕಳಿಂದ ಸಂತೆಯಂತಹ ಕಾರ್ಯಕ್ರಮ ರೂಪಿಸಿ ಯಶಸ್ವಿಗೊಳಿಸುವುದು ಅಷ್ಟು ಸುಲಭವಲ್ಲ, ಇಂತಹ ಕಾರ್ಯಕ್ರಮಗಳಿಂದ ಅಂಗನವಾಡಿಗಳ ಬಗ್ಗೆ ಪೋಷಕರಿಗೆ ಉತ್ತಮ ಭಾವನೆ ಮೂಡುವುದಲ್ಲದೆ ಮಕ್ಕಳ ಕಲಿಕಾ ಮಟ್ಟವು ಉತ್ತಮಗೊಳ್ಳುತ್ತದೆ ಎಂದರು.

ಮಕ್ಕಳ ಸಂತೆಯಲ್ಲಿ ಪುಟಾಣಿ ಮಕ್ಕಳು ದಿನಸಿ ವ್ಯಾಪಾರಿಯಾಗಿ, ಹೂ ವ್ಯಾಪಾರಿಯಾಗಿ, ಕುಂಬಾರರಾಗಿ, ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಾಗಿ, ಎಲೆ ಅಡಿಕೆ ವ್ಯಾಪಾರಿಯಾಗಿ, ಆಟಿಕೆ ಮಾರಾಟಗಾರರಾಗಿ, ಹೈನುಗಾರಿಕೆ ಪ್ರತಿನಿಧಿಸುವ ಮೇಕೆ- ಕುರಿ ಸಾಕಾಣಿಕೆದಾರರಾಗಿ ಅಧಿಕಾರಿಗಳನ್ನು, ಪೋಷಕರನ್ನು ಗಮನ ಸೆಳೆದರು.

ಮಹಿಳಾ ಕಲ್ಯಾಣ ಅಧಿಕಾರಿ ಜಗದೀಶ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್, ರೂಪ, ವೃತ್ತ ಮೇಲ್ವಿಚಾರಕಿ ಚೇತನಾ ಆರ್. ಹಾಗೂ ಹಿರಿಯ ಮೇಲ್ವಿಚಾರಕಿ ಲಕ್ಷ್ಮೀ, ನಿರ್ಮಲ, ಅಂಗನವಾಡಿ ಕಾರ್ಯಕರ್ತೆ ನಂದಿನಿ ಹಾಗೂ ಅಂಗನವಾಡಿ ಸಹಾಯಕಿ ಆಶಾ ಸೇರಿದಂತೆ ಪೋಷಕರು ಹಾಜರಿದ್ದರು.