ಸಾರಾಂಶ
ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ: ತ್ರಿವರ್ಣ ಧ್ವಜ ಭಾರತದ ಸ್ವಾತಂತ್ರ್ಯ, ಏಕತೆ ಮತ್ತು ಸಾರ್ವಭೌಮತ್ವದ ಸಂಕೇತ. ತಿರಂಗಾ ನೋಡಿದ ಪ್ರತಿಯೊಬ್ಬರೂ ತಲೆ ಎತ್ತಿ ಸೆಲ್ಯೂಟ್ ಹೊಡೆಯುತ್ತಾರೆ. ಆದರೆ, ಅಂತಹ ಧ್ವಜ ತಯಾರಿಸುವ ದೇಶದ ಏಕೈಕ ಖಾದಿ ಗ್ರಾಮೋದ್ಯೋಗ ಕೇಂದ್ರದ ಧ್ವಜವನ್ನು ಕೇಳುವವರು ಯಾರಿಲ್ಲದಂತಾಗಿದೆ.ಸ್ವಾತಂತ್ರ್ಯ ಅಮೃತ ಮಹೋತ್ಸವ ವೇಳೆ ಧ್ವಜಸಂಹಿತೆಗೆ ತಿದ್ದುಪಡಿ ಮಾಡಲಾಗಿದೆ. ಹರ ಘರ ತಿರಂಗಾ ಅಭಿಯಾನ ವೇಳೆ ಎಲ್ಲರಿಗೂ ಧ್ವಜ ಸಿಗುವಂತಾಗಲಿ ಎಂದು ರಾಷ್ಟ್ರಧ್ವಜ ಸಂಹಿತೆಯಲ್ಲಿ ಮಶಿನ್ ಮೇಡ್ ಪಾಲಿವಸ್ತ್ರ ಧ್ವಜಗಳನ್ನು ತಯಾರಿಸಲು ಅನುಮತಿ ಕೊಡಲಾಗಿದೆ. ಈ ತಿದ್ದುಪಡಿಯಿಂದಾಗಿ ದಶಕಗಳಿಂದ ರಾಷ್ಟ್ರಧ್ವಜ ತಯಾರಿಕೆಯ ಅಧಿಕೃತ ಹುಬ್ಬಳ್ಳಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರದ ಧ್ವಜಗಳಿಗೆ ಬೇಡಿಕೆ ತೀರಾ ಕುಸಿದಿದೆ.
ಜನವರಿಯಲ್ಲಿ ಗಣರಾಜ್ಯೋತ್ಸವಕ್ಕೆ ಬೇಡಿಕೆ ಬರಬಹುದು ಎಂದ ತಯಾರಿಸಿದ್ದ ಧ್ವಜಗಳು ಮಾರಾಟವಾಗದೇ ಉಳಿದಿವೆ. ಇನ್ನು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಬರುತ್ತಿದ್ದ ಸುಮಾರು ₹3 ಕೋಟಿ ತಿರಂಗಾ ಬೇಡಿಕೆ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು ₹2.5 ಕೋಟಿಯ ಧ್ವಜ ತಯಾರಿಸಿಡಲಾಗಿದೆ. ಆದರೆ, ಬೇಡಿಕೆ ತೀರಾ ಕಮ್ಮಿ ಇದ್ದು, ಇಲ್ಲಿ ವರೆಗೆ ಕೇವಲ ₹49 ಲಕ್ಷದ ಧ್ವಜಗಳ ಮಾರಾಟವಾಗಿದೆ. ಈ ಬಾರಿ ಬೇರೆ ರಾಜ್ಯದಿಂದ ₹8 ಲಕ್ಷ ಮೌಲ್ಯದ ಒಂದೇ ದೊಡ್ಡ ಆರ್ಡರ್ ಬಂದಿದ್ದು ಬಿಟ್ಟರೆ ಉಳಿದೆಲ್ಲ ಸಣ್ಣ ಪ್ರಮಾಣದ ಬೇಡಿಕೆ ಬಂದಿದೆ.ರಾಷ್ಟ್ರಧ್ವಜದ ನೂಲು ಬಟ್ಟೆ, ಹೊಲಿಗೆ, ಅಶೋಕ ಚಕ್ರ ಮುದ್ರಣ ಸೇರಿ ಮುಂತಾದ ಕೆಲಸವನ್ನು ಸುಮಾರು 2000 ಸಾವಿರ ಜನ ನಿರ್ವಹಿಸುತ್ತಾರೆ. ಇದೀಗ ಬೇಡಿಕೆ ಕುಸಿದಿರುವುದರಿಂದ ಇವರಿಗೆಲ್ಲ ಕೆಲಸವೇ ಇಲ್ಲದಂತಾಗಿದೆ. ಇದರಿಂದಾಗಿ, ಹ್ಯಾಂಡ್ ಬ್ಯಾಗ್ ಮತ್ತು ಇತರ ಬಟ್ಟೆ ಕೆಲಸದಲ್ಲಿ ತೊಡಗಿದ್ದಾರೆ.
ತಿಂಗಳ ವೇತನ ಬಾಕಿ: ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಬಾದಾಮಿ ಮತ್ತು ಬೀಳಗಿ ತಾಲೂಕಿನಲ್ಲಿ ಹೆಚ್ಚಿನ ಜನ ಧ್ವಜದ ನೂಲು, ಬಟ್ಟೆ ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಾರಾಟವಾಗದ ಹಿನ್ನೆಲೆಯಲ್ಲಿ ಅವರಿಗೆ ಖಾದಿ ಗ್ರಾಮೋದ್ಯೋಗ ಕೇಂದ್ರ ಒಂದು ತಿಂಗಳ ವೇತನ ಬಾಕಿ ಉಳಿಸಿಕೊಂಡಿದೆ. ವೇತನವಿಲ್ಲದೆ ನೌಕರರು ಪರದಾಡುವಂತಾಗಿದೆ.3:2 ಅಳತೆಯ ಬಿಐಎಸ್ ಮಾರ್ಕ್ ಹೊಂದಿರುವ ಖಾದಿ ಧ್ವಜಕ್ಕೆ ₹1080 ದರವಿದೆ. ಆದರೆ, ಪಾಲಿಸ್ಟರ್‌ನ ಧ್ವಜಗಳು ₹400ರಿಂದ ₹500ರ ವರೆಗೆ ಸಿಗುತ್ತಿದ್ದು, ಎಲ್ಲರೂ ಅವುಗಳನ್ನೇ ಖರೀದಿಸುತ್ತಿದ್ದಾರೆ. ಇದರಿಂದಾಗಿ, ಸಂಸ್ಥೆಗೆ ದೊಡ್ಡ ಪೆಟ್ಟುಬಿದ್ದಿದೆ.
ಸಿಎಂಗೆ ಪತ್ರ: ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜುಲೈ ತಿಂಗಳಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರದ ಇಲಾಖೆಗಳು ಬಿಐಎಸ್ ಮಾರ್ಕ್ ಹೊಂದಿದ ಧ್ವಜಗಳನ್ನೇ ಖರೀದಿಸುವಂತೆ ಮನವಿ ಮಾಡಿದೆ. ಆದರೆ, ಈ ಪತ್ರಕ್ಕೆ ಇದುವರೆಗೂ ಸಚಿವರು ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿಯಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ.ನಮ್ಮ ಬೆಂಗೇರಿಯ ಸಂಸ್ಥೆಯಲ್ಲಿ 22 ಜನ ಕೆಲಸ ಮಾಡುತ್ತಿದ್ದು, ಪ್ರತಿದಿನ ಒಬ್ಬೊಬ್ಬರು ಸುಮಾರು 20 ಧ್ವಜ ತಯಾರಿಸುತ್ತಿದ್ದೆವು. ಆದರೆ, ಈ ಬಾರಿ ಏಪ್ರಿಲ್‌ನಲ್ಲೇ ಧ್ವಜ ತಯಾರಿಕೆ ನಿಲ್ಲಿಸಲಾಗಿದೆ. ಇದರಿಂದ ಕೆಲಸವೇ ಇಲ್ಲದಂತಾಗಿದ್ದು, ಇತರ ಕೆಲಸ ಮಾಡುತ್ತಿದ್ದೇವೆ. ಪಾಲಿಸ್ಟರ್ ಧ್ವಜದಿಂದಾಗಿ ನಮ್ಮ ತಿರಂಗಾಕ್ಕೆ ಬೇಡಿಕೆ ಕುಸಿದಿದೆ ಎಂದು ಸಂಸ್ಥೆಯ ಮ್ಯಾನೇಜರ್ ಅನ್ನಪೂರ್ಣಾ ದೊಡ್ಡಮನಿ ಹೇಳಿದರು.ಧ್ವಜ ಸಂಹಿತೆ ತಿದ್ದುಪಡಿಯಿಂದಾಗಿ ನಮ್ಮ ಧ್ವಜಗಳಿಗೆ ಬೇಡಿಕೆ ಕುಸಿದಿದೆ. ಸರ್ಕಾರ ಈ ತಿದ್ದುಪಡಿಯನ್ನು ವಾಪಸ್ ಪಡೆದು ನೇಕಾರರ ಜೀವನಕ್ಕೆ ಆಧಾರವಾಗಬೇಕು. ಸರ್ಕಾರಕ್ಕೆ ಈ ಕುರಿತು ಪತ್ರ ಬರೆದಿದ್ದು, ಅವರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇವೆ. ಮುಂದಿನ ಜನವರಿ 26 ಮತ್ತು ಆಗಸ್ಟ್ 15ಕ್ಕೆ ನಮ್ಮ ಸಂಘದ ಧ್ವಜಗಳಿಗೆ ಬೇಡಿಕೆ ಬರುವಂತಾಗಲಿ ಎಂದು ಖಾದಿ ಗ್ರಾಮೋದ್ಯೋಗ ಕೇಂದ್ರದ ಕಾರ್ಯದರ್ಶಿ ಶಿವಾನಂದ ಮಠಪತಿ ಹೇಳಿದರು.