ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಅನಾದಿಕಾಲದಿಂದಲೂ ಬರದನಾಡು, ಹಿಂದುಳಿದ ಜಿಲ್ಲೆ ಎನಿಸಿಕೊಂಡಿರುವ ವಿಜಯಪುರ ಜಿಲ್ಲೆಗೆ ಪ್ರತಿ ಬಜೆಟ್‌ನಲ್ಲೂ ಘೋಷಣೆಯಾಗುವ ಬಹುತೇಕ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಲೇ ಇಲ್ಲ. ಅದರಂತೆ ನೀರಾವರಿ ಯೋಜನೆಗಳು, ವಿಮಾನ ನಿಲ್ದಾಣ ಸೇರಿದಂತೆ ಕಳೆದಬಾರಿ ಘೋಷಣೆಯಾಗಿದ್ದ ಹಲವು ಘೋಷಣೆಗಳು ಇನ್ನೂ ಘೋಷಣೆಗಳಾಗಿಯೇ ಉಳಿದಿದ್ದು, ಈ ಬಾರಿಯ ಬಜೆಟ್‌ನಲ್ಲೂ ಸಹ ಬಸವ ನಾಡಿನ ಜನರು ನಿರೀಕ್ಷೆಯನ್ನಿಟ್ಟಿದ್ದಾರೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬುವುದು ಜಿಲ್ಲೆಯ ಜನರ ಆಶಯವಾಗಿದೆ.

ಅನುಷ್ಠಾನವಾಗದ ಕಾರ್ಯಕ್ರಮಗಳು:


ಕಳೆದ ಬಜೆಟ್‌ನಲ್ಲಿ ಜಿಲ್ಲೆಯ ಜೀವನಾಡಿ ಹಾಗೂ ಉತ್ತರ ಕರ್ನಾಟಕದ ಜನರ ಜೀವಾಳವಾಗಿರುವ ಆಲಮಟ್ಟಿ ಅಣೆಕಟ್ಟನ್ನು ಎತ್ತರಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು. ಅದಕ್ಕಾಗಿ ರಾಜ್ಯ ಸರ್ಕಾರ ಭೂಸ್ವಾಧೀನ, ರೈತರಿಗೆ ಪರಿಹಾರ, ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡಲು ಹಲವು ಬಾರಿ ಸಭೆ ಕರೆದಿತ್ತು. ಆದರೆ, ಅದ್ಯಾವುದು ಫಲಿಸಲಿಲ್ಲ, ಇನ್ನು ಸರ್ಕಾರವೂ ಸಹ ಅದಕ್ಕಾಗಿ ಯಾವುದೇ ವಿಶೇಷ ಪ್ಯಾಕೇಜ್ ಹಣವನ್ನೂ ಸಹ ಮೀಸಲಿರಿಸಲಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಜನರ ಕನಸಾಗಿರುವ ಆಲಮಟ್ಟಿ ಅಣೆಕಟ್ಟು 524.256 ಮೀಟರ್‌ ಎತ್ತರಕ್ಕೇರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಇನ್ನು ₹348 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಆರಂಭವಾಗಿ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೇನು ಲೋಕಾರ್ಪಣೆಗೊಳ್ಳಬೇಕು ಎನ್ನುವಷ್ಟರಲ್ಲಿ ಪರಿಸರ ಇಲಾಖೆಯ ಅಡ್ಡಗಾಲಿನಿಂದ ಅದು ಅಲ್ಲಿಯೇ ನಿಂತಂತಾಗಿದೆ. ಇನ್ನುಳಿದಂತೆ ತಿಡಗುಂಡಿಯಲ್ಲಿ ಪ್ಲಗ್-ಆ್ಯಂಡ್-ಪ್ಲೇ ಸೌಲಭ್ಯವಿರುವ ಫ್ಲಾಟ್ ಫ್ಯಾಕ್ಟರಿ ಸ್ಥಾಪನೆ ಆಗಬೇಕಿತ್ತು. ಆದರೆ, ಅಲ್ಲಿನ ಜನರು ತಮ್ಮ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅದು ಕೂಡ ಅಲ್ಲಿಗೆ ನಿಂತಿದೆ. ತೊಗರಿ ಪರಿಹಾರ ಬಿಡುಗಡೆಯಾಗಿದ್ದು, ಹಾಸ್ಟೆಲ್‌ಗಳು ಅನುಷ್ಠಾನಗೊಂಡಿವೆ. ಕೆಲ ಸಣ್ಣಪುಟ್ಟ ಯೋಜನೆಗಳು ಹಾಗೂ ಕಾಮಗಾರಿಗಳು ಆಗಿದ್ದು ಬಿಟ್ಟರೇ ಹೇಳಿಕೊಳ್ಳುವಂತಹ ಮಹತ್ವದ ಯಾವುದೇ ಘೋಷಣೆಗಳು ಇದುವರೆಗೂ ಇಡೇರಿಲ್ಲ.ಕಳೆದ ಬಾರಿ ಜಿಲ್ಲೆಗೆ ಘೋಷಣೆಯಾಗಿದ್ದ ಯೋಜನೆಗಳು:

ಕಳೆದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಈ ಕೆಳಗಿನ ಯೋಜನೆಗಳನ್ನು ಘೋಷಣೆ ಮಾಡಿತ್ತು. ಪ.ಜಾತಿ, ಪ.ಪಂಗಡ, ಒಬಿಸಿ ಹಾಸ್ಟೆಲ್ ಪಿಯು ಕಾಲೇಜನ್ನಾಗಿ ಉನ್ನತೀಕರಣ, ಮೆಟ್ರಿಕ್ ನಂತರದ ವಸತಿ ನಿಲಯ ನಿರ್ಮಾಣ, ₹348 ಕೋಟಿ ವೆಚ್ಚದ ವಿಮಾನ ನಿಲ್ದಾಣ ಆರಂಭ, ಆಲಮಟ್ಟಿ ಅಣೆಕಟ್ಟು ಗೇಟ್‌ನ್ನು 524.256 ಮೀಟರ್ ಎತ್ತರಕ್ಕೇರಿಸಲು ಕ್ರಮ, ತೊಗರಿ ಖರೀದಿ ಪ್ರೋತ್ಸಾಹಧನಕ್ಕೆ ₹138 ಕೋಟಿ, 3000 ಹೆಕ್ಟೇರ್‌ನಲ್ಲಿ ಮಣ್ಣು-ನೀರು, ತ್ಯಾಜ್ಯ ನಿರ್ವಹಣೆ, ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಶುರು, ತಿಡಗುಂಡಿಯಲ್ಲಿ ಪ್ಲಗ್-ಆ್ಯಂಡ್-ಪ್ಲೇ ಸೌಲಭ್ಯವಿರುವ ಫ್ಲಾಟ್ ಫ್ಯಾಕ್ಟರಿ ಸ್ಥಾಪನೆ.

ಈ ಬಾರಿಯೂ ಸಹ ಹಲವು ಆಶಯಗಳು:

ಪ್ರಮುಖವಾಗಿ ಜಿಲ್ಲೆಯ ಜನರಿಗೆ ನೀರಾವರಿ ಆಗಬೇಕಿರುವುದರಿಂದ ಆಲಮಟ್ಟಿ ಡ್ಯಾಂ 524 ಮೀಟರ್‌ ಎತ್ತರಕ್ಕೆ ಏರಿಸಿದರೇ ಅನುಕೂಲವಾಗಲಿದೆ. ಇದಕ್ಕಾಗಿ 15 ಲಕ್ಷ ನೀರಾವರಿ ಆಗಬೇಕೆಂದರೇ ₹1 ಲಕ್ಷ ಕೋಟಿ ಬಜೆಟ್ ಬೇಕಿದೆ. ಇದಕ್ಕಾಗಿ ವರ್ಷಕ್ಕೆ ₹20 ಸಾವಿರ ಕೋಟಿ ಹಣವನ್ನು ಮೀಸಲಿರಿಸುವ ಕೆಲಸ ಆಗಬೇಕಿದೆ. ಮುಳವಾಡ, ಗುತ್ತಿ ಬಸವಣ್ಣ, ರೇವಣಸಿದ್ಧೇಶ್ವರ ಸೇರಿದಂತೆ ಜಿಲ್ಲಾದ್ಯಂತ ಈಗಾಗಲೇ ನೀರು ಹರಿಯುವ ಅನೇಕ ಕಾಲುವೆಗಳಿಗೆ ನಿರ್ವಹಣೆಯೇ ಆಗಿಲ್ಲ. ಈ ಎಲ್ಲ ಕಾಲುವೆಗಳು ಅವಾಸನದ ಹಂತಕ್ಕೆ ತಲುಪಿದ್ದು, ಸೂಕ್ತ ನಿರ್ವಹಣೆಗೆ ಹಣ ಬೇಕಿದೆ. ರಾಜ್ಯದ ಏಕೈಕ ಮಹಿಳಾ ವಿವಿ ಎನಿಸಿಕೊಂಡಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಬೇಕಾದ ಹಲವು ಮೂಲ ಸೌಕರ್ಯಗಳಿಗೆ ವಿಶೇಷ ಪ್ಯಾಕೇಜ್ ಕೊಡಬೇಕಿದೆ. ಇಲ್ಲಿನ ಗ್ರಂಥಾಲಯ, ವಸ್ತುಸಂಗ್ರಹಾಲಯ, ಖಾಯಂ ಹುದ್ದೆಗಳ ನೇಮಕಾತಿಗಳು ಆಗಬೇಕಿದೆ. ರೈತರಿಗೆ ಅನುಕೂಲಕ್ಕಾಗಿ ಕೋಲ್ಡ್ ಸ್ಟೋರೇಜ್‌, ಫುಡಪಾರ್ಕ್‌ಗಳು ಆಗಬೇಕು. ಯುವಕರಲ್ಲಿ ನಿರುದ್ಯೋಗತನ ಹೋಗಿಸಲು ಈ ಭಾಗದಲ್ಲಿ ಹಲವು ಕಾರ್ಖಾನೆಗಳು, ಉತ್ಪಾದನಾ ಫ್ಯಾಕ್ಟರಿಗಳು ಆಗಬೇಕಿದೆ. ಕಳೆದ ವರ್ಷ ಘೋಷಣೆಯಾಗಿದ್ದ ಮೈಸೂರ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸಹ ಆದಷ್ಟು ಬೇಗ ಆರಂಭಗೊಂಡರೆ ಅನುಕೂಲವಾಗಲಿದೆ.ಇಡೇರುತ್ತವೆಯಾ ಬೇಡಿಕೆಗಳು?

ನುಡಿದಂತೆ ನಡೆಯುತ್ತೇವೆ ಎನ್ನುವ ರಾಜ್ಯ ಸರ್ಕಾರ ಗ್ಯಾರಂಟಿ ಹಾಗೂ ಸಿಎಂ ಸೀಟುಗಳ ಫೈಟಿಂಗ್‌ನಲ್ಲಿಯೇ ಅರ್ಧ ಸಮಯ ಕಳೆದಿದೆ. ಇದರ ಮದ್ಯೆ ಉತ್ತರದ ಭಾಗದಲ್ಲಿ ಅಭಿವೃದ್ಧಿಗಾಗಿ ಈ ಬಾರಿಯಾದರೂ ಕೇವಲ ಘೋಷಣೆ ಮಾಡದೆ ಅನುದಾನ ಬಿಡುಗಡೆ ಮಾಡುತ್ತದೆಯೋ ಅಥವಾ ಕೇವಲ ಪೇಪರ್‌ನಲ್ಲಿ ಘೋಷಿಸಿ ಕೈಬಿಡುತ್ತದೆಯೋ ಕಾದು ನೋಡಬೇಕಿದೆ.