ಭಕ್ತಸಮೂಹದ ಪ್ರೀತಿಯೇ ಮಠ ಎತ್ತರಕ್ಕೆ ಬೆಳೆಯಲು ಕಾರಣ: ಪಟ್ಟದ್ದೇವರು

| Published : Jul 19 2025, 01:00 AM IST

ಭಕ್ತಸಮೂಹದ ಪ್ರೀತಿಯೇ ಮಠ ಎತ್ತರಕ್ಕೆ ಬೆಳೆಯಲು ಕಾರಣ: ಪಟ್ಟದ್ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ 75ನೇ ವರ್ಷದ ಅಮೃತ ಮಹೋತ್ಸವವು ಬಸವ ಯುಗದ ಅಮೃತ ಮಹೋತ್ಸವವಾಗಲಿದೆ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ 75ನೇ ವರ್ಷದ ಅಮೃತ ಮಹೋತ್ಸವವು ಬಸವ ಯುಗದ ಅಮೃತ ಮಹೋತ್ಸವವಾಗಲಿದೆ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ್ ಮಹೋತ್ಸವ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಭಕ್ತ ಸಮೂಹದ ಪ್ರೀತಿಯೇ ಮಠವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಮಠದ ವ್ಯವಸ್ಥೆ ಕಷ್ಟದಲ್ಲಿರುವಾಗ ಭಕ್ತರೆಲ್ಲರೂ ಸೇರಿ 1924ರಲ್ಲಿ ಹಿರಿಯ ಸ್ವಾಮೀಜಿ, ಶತಾಯುಷಿ ಡಾ.ಚನ್ನಬಸವ ಪಟ್ಟದ್ದೇವರಿಗೆ ಹಾನಗಲ್ಲ ಕುಮಾರೇಶ್ವರ ಶಿವಯೋಗ ಮಂದಿರದಲ್ಲಿ ತರಬೇತಿ ನೀಡಿ ಈ ಮಠಕ್ಕೆ ಪೀಠಾಧಿಪತಿಗಳನ್ನಾಗಿ ಮಾಡಿದ್ದರು.

ನಂತರ 1985 ರಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಠದ ಪೀಠಾಧ್ಯಕ್ಷತೆ ವಹಿಸಿಕೊಂಡು ಹಗಲಿರುಳೆನ್ನದೇ ಎಲ್ಲರನ್ನೂ ಪ್ರೀತಿಸುತ್ತಾ ಮಠದ ಏಳ್ಗೆಯೊಂದಿಗೆ ಕನ್ನಡ ಮತ್ತು ಬಸವ ತತ್ವವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಅವರ 75ನೇ ಹುಟ್ಟುಹಬ್ಬವನ್ನು (ಅಮೃತ ಮಹೋತ್ಸವ) ವಿಜೃಂಭಣೆಯಿಂದ ಮಾಡಲು ಭಕ್ತರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಚಿರಂತೇಶ್ವರ ವಿರಕ್ತಮಠ ಬಸವಬೆಳಗಿಯ ಶರಣಬಸವ ಮಹಾಸ್ವಾಮಿ ಸಮ್ಮುಖ ವಹಿಸಿ ಮಾತನಾಡಿ, ಈ ಭಾಗದಲ್ಲಿ ಕನ್ನಡಿಗರು ಇಷ್ಟೊಂದು ಸುಸಂಸ್ಕೃತವಾಗಿರಲು ಬಸವಾದಿ ಶರಣರೇ ಕಾರಣ. ವಿಶ್ವಕ್ಕೆ ಕನ್ನಡವನ್ನು ನೀಡಿದ ಕಲ್ಯಾಣನಾಡು, ನಿಜಾಮನ ಆಡಳಿತದಲ್ಲಿ, ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಮತ್ತೊಮ್ಮೆ ಕನ್ನಡವನ್ನು ಬೆಳೆಸಿದ ಶ್ರೇಯ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅವರ ಸಂಜಾತರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಜಗತ್ತಿನಾದ್ಯಂತ ಬಸವತತ್ವ ಪ್ರಚಾರ, ಪ್ರಸಾರ ಮಾಡುತ್ತ, ಬಸವ ತತ್ವ ಮಠಗಳ ಮಾತೆಯಾಗಿ ಮುನ್ನಡೆಯುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬರುವ ಮೇ 2026 ರ ಒಳಗಾಗಿ 740 ಕೋಟಿ ರು.ಗಳ ಅನುಭವ ಮಂಟಪ ಲೋಕಾರ್ಪಣೆಗೊಳಿಸಲಾಗುವುದು. ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಹಿರೇಮಠ ಸಂಸ್ಥಾನಕ್ಕೂ ನಮ್ಮ ಮನೆತನಕ್ಕೂ ಅವಿನಾನುಭಾವ ಸಂಬಂಧವಿದೆ ಎಂದು ಹೇಳಿದರು.

ನಾರಂಜಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ.ಸಿದ್ರಾಮ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಹಾರಾಷ್ಟ್ರದ ಶಿವಾನಂದ ಹೈಬತಪೂರೆ ಮಾತನಾಡಿದರು.

ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ ಮಾತನಾಡಿ, ಓದುವುದಕ್ಕೆ ಮಾತ್ರ ಸೀಮಿತವಾದ ನಾನು ಇಲ್ಲಿಯವರೆಗೆ ಸುಮಾರು 40 ಕೃತಿಗಳನ್ನು ರಚಿಸಿದ್ದೇನೆ. ಇದಕ್ಕೆ ನಮ್ಮ ಕಿರಿಯ ಸ್ವಾಮೀಜಿ ಗುರುಬಸವ ಪಟ್ಟದ್ದೇವರ ಪ್ರೋತ್ಸಾಹವೇ ಕಾರಣ.

ಈ ಭಾಗದಲ್ಲಿ ನಿರಂತರ ದಾಸೋಹ ನಡೆಸಬೇಕೆನ್ನುವುದು ನನ್ನ ಆಸೆ. ಹೀಗಾಗಿ ಸುಮಾರು 365 ಭಕ್ತರು ಒಂದೊಂದು ಲಕ್ಷ ರು. ದೇಣಿಗೆ ನೀಡಿದರೆ ವರ್ಷಪೂರ್ತಿ ಅವರ ಹೆಸರಿನಲ್ಲಿ ನಿರಂತರ ದಾಸೋಹ ನಡೆಸಲಾಗುವುದು. ಇದರಿಂದ ಸುದೈವಿ ಮಕ್ಕಳ ಅಮೃತ ಮಹೋತ್ಸವ ಮಾಡಿದಕ್ಕೂ ಸಾರ್ಥಕವಾಗುವುದು ಎಂದು ಹೇಳಿದರು.

ಇದೇ ವೇಳೆ ಭಕ್ತರಾದ ಬಸವರಾಜ ಧನ್ನೂರ, ಪಾರ್ವತಿ ಸೋನಾರೆ, ಸುರೇಶ ಚನಶೆಟ್ಟಿ, ಶಕುಂತಲಾ ಬೆಲ್ದಾಳೆ, ಬಸವರಾಜ ಬುಳ್ಳಾ, ಡಾ. ದೇವಕಿ ನಾಗೂರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಶೋಕ ಚಂದ್ರೆ, ಶಶಿಕಲಾ ಅಶೋಕ, ಬಾಬು ವಾಲಿ, ವಿಜಯಕುಮಾರ ರಾಜಭವನ ಉಪಸ್ಥಿತರಿದ್ದರು.