ಕನ್ನಡಪ್ರಭ ವಾರ್ತೆ ಶಿರಸಿ

ಹಣ-ಪ್ರತಿಷ್ಠೆಯ ಬಲದಿಂದ ಮಠಗಳ ಪರಂಪರೆ ಉಳಿದಿಲ್ಲ, ಬದಲಿಗೆ ಶಿಷ್ಯ ಭಕ್ತರ ಅಚಲ ನಿಷ್ಠೆ, ಧರ್ಮಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಈ ಪರಂಪರೆ ಉಳಿದು ಬೆಳೆದಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ವಿಜಯದಶಮಿಯ ಅಂಗವಾಗಿ ಆಶೀರ್ವಚನ ನೀಡಿದ ಅವರು, ಮಠದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಭಕ್ತರ ನಿಷ್ಠೆಯೇ ಪ್ರಮುಖ ಶಕ್ತಿಯಾಗಿದೆ. ಹಿಂದಿನಿಂದಲೂ ಭಕ್ತರು ಶ್ರದ್ಧಾಭಕ್ತಿಯಿಂದ ಉತ್ಸವಗಳನ್ನು ನಡೆಸಿಕೊಂಡು ಬಂದಿದ್ದು, ಶ್ರೀಮಠದಲ್ಲೂ ವೈದಿಕರು ಹಾಗೂ ಹತ್ತಿರ-ದೂರದ ಊರುಗಳಿಂದ ಆಗಮಿಸಿದ ಭಕ್ತರು ಸಮರ್ಪಣಾ ಭಾವದಿಂದ ಶ್ರಮಿಸಿದ್ದಾರೆ ಎಂದರು.

ಶರನ್ನವರಾತ್ರಿಯ ಒಂಬತ್ತು ದಿನಗಳ ಉತ್ಸವದಲ್ಲಿ ಚಂಡಿಕಾ ಸಪ್ತಶತಿ ಹಾಗೂ ದೇವಿ ಮಹಾತ್ಮೆಯ ಪಾರಾಯಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿತ್ತು. ವೈದಿಕ ಧರ್ಮವು ಯಜ್ಞಮಯವಾದ ಧರ್ಮವಾಗಿದ್ದು, ಯಜ್ಞಗಳಿಗೆ ವಿಘ್ನ ಉಂಟಾದಾಗ ಧರ್ಮರಕ್ಷಣೆಗಾಗಿ ದೈವಿಕ ಶಕ್ತಿ ಅವತರಿಸಿ ಅಧರ್ಮದ ಶಕ್ತಿಗಳನ್ನು ಸಂಹರಿಸುವ ಸಂದೇಶವನ್ನು ದೇವಿ ಮಹಾತ್ಮೆ ಸಾರುತ್ತದೆ ಎಂದರು.

ಮಹಿಷಾಸುರ, ಶುಂಭ-ನಿಶುಂಭ ಮೊದಲಾದವರು ಯಜ್ಞಗಳಿಗೆ ವಿಘ್ನ ಉಂಟುಮಾಡಿ ದೇವತೆಗಳನ್ನು ಪದಚ್ಯುತಗೊಳಿಸಿ ಅವರ ಸ್ಥಾನವನ್ನು ಆಕ್ರಮಿಸಿದ್ದರು. ಜಗತ್ತಿನ ರಕ್ಷಣೆಯ ಶಕ್ತಿಗಳಾದ ದೇವತೆಗಳೇ ಅಸಹಾಯಕರಾದ ಸಂದರ್ಭದಲ್ಲಿ, ವೈದಿಕ ಧರ್ಮಕ್ಕೆ ಎದುರಾದ ಸಂಕಷ್ಟವನ್ನು ನಿವಾರಿಸಲು ಭಗವತಿಯು ಅವತರಿಸಿ ವಿಘ್ನಕಾರಕ ಶಕ್ತಿಗಳನ್ನು ಸಂಹರಿಸಿದ ಚರಿತ್ರೆಯೇ ಚಂಡಿಕಾ ಸಪ್ತಶತಿಯ ಪ್ರಧಾನ ಆಶಯವಾಗಿದೆ ಎಂದು ವಿವರಿಸಿದರು.

ಒಂಬತ್ತು ದಿನಗಳ ಕಾಲ ಮಠದ ಪರಿಸರದಲ್ಲಿ ಭಕ್ತಿಯ ವಾತಾವರಣ ನೆಲೆಸಿತ್ತು. ನಾಡಿನಾದ್ಯಂತದ ಭಕ್ತರು ಜಗನ್ಮಾತೆಯ ಸ್ಮರಣೆ ಹಾಗೂ ಆರಾಧನೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಉತ್ಸವದ ಯಶಸ್ಸಿಗೆ ಕೈಜೋಡಿಸಿದ ಎಲ್ಲ ಭಕ್ತರಿಗೂ ಶ್ರೀ ಜಗನ್ಮಾತೆಯು ಹೆಚ್ಚಿನ ಧರ್ಮಶ್ರದ್ಧೆ, ಆಯುರಾರೋಗ್ಯ, ಕ್ಷೇಮ ಮತ್ತು ಅಭಿವೃದ್ಧಿಯನ್ನು ಕರುಣಿಸಲಿ ಎಂದು ಶ್ರೀಗಳು ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಮಠದ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಠದ ಕಾರ್ಯಾಧ್ಯಕ್ಷ ಸತೀಶ ಗಜಾನನ ಹೆಗಡೆ ಹುಳಗೋಳ, ಮಠದ ನಿಕಟಪೂರ್ವ ಅಧ್ಯಕ್ಷ ವಿಘ್ನೇಶ್ವರ ಎನ್. ಹೆಗಡೆ ಬೊಮ್ಮನಳ್ಳಿ, ಸೀತಾರಾಮ ನೀರ್ನಳ್ಳಿ, ಮಹಾದೇವ ಹೆಗಡೆ ಗಡೀಕೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಬೇಡ್ತಿ ವರದಾ, ಅಘನಾಶಿನಿ:

ನದಿ ಜೋಡಣೆಯಿಂದ ಶಿಷ್ಯ ಭಕ್ತರು ಆತಂಕದಲ್ಲಿ ಇದ್ದಾರೆ. ಈ ಯೋಜನೆಗೆ ಶಾಶ್ವತ ಪರಿಹಾರ ಆಗುವಂತೆ ದೇವಿ ರಕ್ಷಿಸಿ ಈ ಭಾಗದ ಜನರಿಗೆ ಪದೇ ಪದೇ ಕಾಡುವ ಈ ಯೋಜನೆಗಳ ಭೀತಿಯಿಂದ ಮುಕ್ತಿಗೊಳಿಸಿಕೊಡು ಎಂದು ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಪ್ರಾರ್ಥನಾ ಶ್ಲೋಕಗಳನ್ನು ರಚಿಸಿ ಶ್ರೀದೇವಿಯಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು.