ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಾಜಿ ಶಾಸಕ ದಿ. ಎಂ.ಸಿ. ಬಸಪ್ಪ ನೇರ ದಿಟ್ಟ ನುಡಿಯ ದಿಟ್ಟ ನುಡಿಯ ಧೀಮಂತ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು ಎಂದು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹೇಳಿದರು.ನಗರದ ಡಾ. ರಾಜ್‌ಕುಮಾರ್ ಕಲಾಮಂದಿರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಚಾಮರಾಜನಗರ ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ದಿ. ಎಂ.ಸಿ.ಬಸಪ್ಪ ಜನ್ಮಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರವವನ್ನು ಉದ್ಘಾಟಿಸಿ ಹಾಗೂ ಬಸಪ್ಪನವರನ್ನು ಕುರಿತ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬಸಪ್ಪನವರು ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ. ಸಚಿವರಾಗುವ ಅವಕಾಶವಿದ್ದರೂ ಅದನ್ನು ಬೆನ್ನತ್ತಿ ಹೋಗಲಿಲ್ಲ. ಕೊಟ್ಟರೆ ಕೊಡಿ, ಇಲ್ಲದಿದ್ದರೆ ಇಲ್ಲ ಎನ್ನುವುದು ಅವರ ಧೀಮಂತ ವ್ಯಕ್ತಿತ್ವ. ಎರಡು ಬಾರಿ ಶಾಸಕರಾಗಿ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸದಾ ಜನಸೇವೆ ಬಗ್ಗೆ ಚಿಂತಿಸುತ್ತಿದ್ದ ವ್ಯಕ್ತಿತ್ವ, ಸ್ವಾತಂತ್ರ್ಯ ಹೋರಾಟಗಾರರಾದ ಮಲೆಯೂರು ಚಿಕ್ಕಲಿಂಗಪ್ಪರ ಸುಸಂಸ್ಕೃತ ಕುಟುಂಬದಿಂದ ಬೆಳೆದು ಬಂದ ಎಂ.ಸಿ. ಬಸಪ್ಪ ಜನರ ನಿರೀಕ್ಷೆಯನ್ನು ಹುಸಿ ಮಾಡದೇ ಪ್ರಾಮಾಣಿಕ ಕೆಲಸ ಮಾಡಿ, ವಿಶಾಲವಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು ಎಂದರು.ರಾಜೇಂದ್ರ ಮಹಾಸ್ವಾಮಿಗಳೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿದ್ದ ಬಸಪ್ಪರ ಆದರ್ಶ ಗುಣಗಳು ಇಂದಿನ ಯುವ ರಾಜಕಾರಣಿಗಳಿಗೆ ಸ್ಫೂರ್ತಿಧಾಯಕವಾಗಿವೆ. ಅವರು ನಮ್ಮನ್ನು ಅಗಲಿ ೪೩ ವರ್ಷವಾದರೂ ಅವರನ್ನು ಸ್ಮರಿಸುತ್ತಿರುವುದು ಅವರು ಮಾಡಿದ ಒಳ್ಳೆಯ ಕಾರ್ಯಗಳಿಂದ ಎಂದರು.ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಎಂ.ಸಿ.ಬಸಪ್ಪ ಉತ್ತಮ ವಾಗ್ಮೀ ಹಾಗೂ ಮಾನವತಾವಾದಿಯಾಗಿದ್ದರು. ಗ್ರಾಮೀಣ ಬಡ ಜನತೆಯ ಬಗ್ಗೆ ಚಿಂತಿಸುತ್ತಿದ್ದ ಬಸಪ್ಪ ಸದನದಲ್ಲಿ ಕೃಷಿಯ ಬಗ್ಗೆ ಅದರಲ್ಲೂ ರೇಷ್ಮೆ ಕೃಷಿಯ ಬಗ್ಗೆ ಏಳು ಗಂಟೆಗಳ ಕಾಲ ಸತತವಾಗಿ ಮಾತನಾಡಿದ್ದರು. ಇದು ಅವರು ಜನಪರ ಕಾಳಜಿಯ ಬಗ್ಗೆ ಅವರಿಗಿದ್ದ ಪ್ರಾಮಾಣಿಕತೆಯನ್ನು ತೋರಿಸುತ್ತಿದೆ ಎಂದರು.
೧೨ನೇ ಶತಮಾನದ ಶಿವಶರಣರ ಹಾದಿಯಲ್ಲಿ ನಡೆದವರು ಬಸಪ್ಪ. ನಿಜಲಿಂಗಪ್ಪ ಮತ್ತು ವಿರೇಂದ್ರ ಪಾಟೀಲರಿಗೆ ಆಪ್ತರಾಗಿದ್ದ ಇಬ್ಬರಲ್ಲಿ ಎಸ್. ಆರ್. ಬೊಮ್ಮಾಯಿಯವರಿಗೆ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬೇಕಾದ ವಿಷಯ ಬಗ್ಗೆ ಹೇಳಿಕೊಡುತ್ತಿದ್ದವರೇ ಎಂ.ಸಿ. ಬಸಪ್ಪನವರು ಎಂದರು.ಜಾತ್ಯಾತೀತತೆ ಮತ್ತು ಪ್ರಜಾಪ್ರಭುತ್ವದಲ್ಲಿ ಪೂರ್ಣ ನಂಬಿಕೆ ಇದ್ದ ಇವರು ಕರ್ನಾಟಕ ಕಂಡ ಅತ್ಯುತ್ತಮ ವಿಧಾನಸಭಾ ಸದಸ್ಯರು. ಗೆದ್ದಾಗ, ಸೋತಾಗಲೂ ಪ್ರಭಾವಿ ರಾಜಕಾರಣೆಯಾಗಿ ಇದ್ದುದು ಇವರ ವ್ಯಕ್ತಿತ್ವದ ವೈಶಿಷ್ಟ, ಸ್ನೇಹ ಜೀವಿಯಾಗಿದ್ದರು. ಇಂತಹ ಕುಟುಂಬದವರು ಸಾರ್ವಜನಿಕ ಜೀವನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಅವರು ಕುಟುಂಬದವರು ಕುಳಿತು ಅದರಲ್ಲೂ ಗಂಗಾಂಭಿಕೆಯವರು ಚಿಂತನೆ ನಡೆಸಬೇಕು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ. ಸೋಮಶೇಖರ ಮಾತನಾಡಿ, ಎಂ.ಸಿ. ಬಸಪ್ಪನವರು ರಾಜಕೀಯದ ಜೊತೆಗೆ ಜನಸೇವಾ ಕ್ಷೇತ್ರದಲ್ಲೂ ಅತ್ಯುತ್ತಮ ಕೆಲಸ ಮಾಡಿದವರು ಎಂದರು.ನಿವೃತ್ತ ಮುಖ್ಯ ಅಭಿಯಂತರ ಶಂಕರ್ ದೆವನೂರು ಮಾತನಾಡಿ, ಬಸಪ್ಪನವರ ಜೀವನ ಪ್ರದರ್ಶನವಾಗದೇ ಮುಂದಿನ ಯುವ ಪೀಳಿಗೆಗೆ ನಿದರ್ಶನವಾಗಿದೆ. ಬಸಪ್ಪರ ಸ್ಮರಣೀಯದ ಈ ಕಾರ್ಯಕ್ರಮ ಮಾನವೀಯ ಪ್ರತೀಕದ ಮೌಖಿಕ ಕಾರ್ಯಕ್ರಮವಾಗಿದೆ. ಒಂದು ನೆಲೆಗಟ್ಟಿನಲ್ಲಿ ನಿಂತು ಬೆಳೆದ ಪುಷ್ಟ ಸುತ್ತಮುತ್ತಲು ಸುಮಧುರ ಬೀರುವಂತೆ, ಒಂದು ರಾಜಕೀಯ ನೆಲೆಯಲ್ಲಿ ನಿಂತು ರಾಜಕೀಯದಲ್ಲಿ ಸುಮಧುರ ಬೀರಿ ಸ್ಮರಣೀಯರಾಗಿದ್ದಾರೆ ಎಂದರು.
ರಾಜೇಂದ್ರಸ್ವಾಮಿಗಳು ಸ್ಥಾಪಿಸಿದ ಶರಣ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯತ್ತಿರುವುದು ಸಮಂಜಸವಾಗಿದೆ. ಕಾಲ ಕೆಟ್ಟಿಲ್ಲ ಆದರೆ ಮನಸ್ಥಿತಿ ಕೆಟ್ಟಿದೆ, ಇದಕ್ಕೆಲ್ಲಾ ಪರಿಹಾರವಿದ ಎಂದರೆ ಅದು ವಚನ ಸಾಹಿತ್ಯದಿಂದ ಮಾತ್ರ, ಬಸವಾದಿ ಶರಣರ ತತ್ವಗಳನ್ನು ತಮ್ಮ ಜೀವಿತಾವಧಿಯಲ್ಲಿ ಅಳವಡಿಸಿಕೊಂಡು ನಡೆದಿದ್ದರಿಂದಲೇ ಬಸಪ್ಪನವರು ಇಂದು ಸ್ಮರಣೀಯರಾಗಿದ್ದಾರೆ ಎಂದರು.ಸಾಹಿತಿ ಕೆ.ವೆಂಕಟರಾಜು ಮಾತನಾಡಿ, ಎಂ.ಸಿ.ಬಸಪ್ಪನವರು ನಮ್ಮ ಭಾಗದ ಧೀಮಂತ ರಾಜಕಾರಿಣಿಗಳಲ್ಲಿ ಒಬ್ಬರು, ಅವರು ಸೋತಿರಲಿ, ಗೆದ್ದಿರಲಿ ಕರ್ನಾಟಕದ ಮತ್ತು ಚಾಮರಾಜನಗರದ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಸುಮಾರು ಮೂರು ದಶಕಗಳ ಕಾಲ ವ್ಯಾಪಿಸಿದ್ದರು. ಅವರು ತೀರಿಕೊಂಡು ಸುಮಾರು ೪೩ ವರ್ಷ ಆದರೂ ಇಂದಿಗೂ ಅವರನ್ನು ನೆನಸುವ ಅಭಿಮಾನಿಗಳಿದ್ದಾರೆ ಆದ್ದರಿಂದಲೇ ಈ ಕಿರು ಪುಸ್ತಕ ಬರೆಯಲು ಸಾಧ್ಯವಾಯಿತು ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಎಂ.ಸಿ.ಬಸಪ್ಪನವರ ಸ್ಮರಣಾರ್ಥ ₹೫ ಲಕ್ಷ ದತ್ತಿ ನೀಡಲಿದ್ದಾರೆ. ಮುಂದಿನ ವರ್ಷದಿಂದ ವಿಚಾರ ಸಂಕಿರಣ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.ಪಡಗೂರು ಅಡವಿ ಮಠದ ಶಿವಲಿಂಗೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್, ನಗರಸಭಾ ಅಧ್ಯಕ್ಷ ಸುರೇಶ್, ಗಂಗಾಂಬಿಕೆ ಬಸಪ್ಪ, ಎಂ.ಬಿ. ಸೋಮಶೇಖರ್, ಬಿ.ಎಸ್. ವಿನಯ್, ಮಲ್ಲಿಕಾರ್ಜುನಸ್ವಾಮಿ ದುಗ್ಗಟ್ಟಿ, ಬಿ.ಕೆ. ರವಿಕುಮಾರ್, ಎಂ.ಬಿ. ರೇವಣ್ಣ, ಬಸಪ್ಪನವರ ಕುಟುಂಬಸ್ಥರು ಅಭಿಮಾನಿಗಳು ಇದ್ದರು.