ಸಮಸ್ಯೆ ಮೆಟ್ಟಿ ನಿಲ್ಲುವುದು ಜೀವನದ ಮುಖ್ಯ ಗುರಿ: ಸಿದ್ರಾಮೇಶ್ವರ

| Published : Dec 05 2024, 12:33 AM IST

ಸಮಸ್ಯೆ ಮೆಟ್ಟಿ ನಿಲ್ಲುವುದು ಜೀವನದ ಮುಖ್ಯ ಗುರಿ: ಸಿದ್ರಾಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಅಡೆತಡೆ ಮತ್ತು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಜೀವನದ ಮುಖ್ಯ ಗುರಿಯಾಗಿದೆ.

ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿಕನ್ನಡಪ್ರಭ ವಾರ್ತೆ ಕೊಪ್ಪಳ

ಅಡೆತಡೆ ಮತ್ತು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಜೀವನದ ಮುಖ್ಯ ಗುರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳು ಮತ್ತು ವಿಕಲಚೇತನರ ಒಕ್ಕೂಟ ಹಾಗೂ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ನಡೆಸಲಾಗುವ ವಿವಿಧ ಕಾರ್ಯಕ್ರಮ ಮತ್ತು ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವ ಮೂಲಕ ಮುನ್ನಲೆಗೆ ಬರಬೇಕು. ಸಾಮಾನ್ಯರಲ್ಲಿ ಇಲ್ಲದಂತಹ ಚೇತನ ಅಂದರೆ ಶಕ್ತಿ, ಸಾಮರ್ಥ್ಯ ವಿಶೇಷಚೇತನರಲ್ಲಿದೆ. ಎಲ್ಲರ ಜೀವನದಲ್ಲಿ ಅಡೆತಡೆಗಳು, ಮಾನಸಿಕತೆ ಸಹಜವಾಗಿರುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವುದು ಜೀವನದ ಉದ್ದೇಶವಾಗಿದ್ದು, ಎಲ್ಲರೂ ಜೀವನದಲ್ಲಿ ನಿಶ್ಚಿತ ಗುರಿ ಹೊಂದಿರಬೇಕು. ಸತತವಾಗಿ ಸಮಯ ನೀಡುವುದು ಹಾಗೂ ಶ್ರದ್ಧೆ, ನಿರಂತರ ಪ್ರಯತ್ನದಿಂದ ಅಂತಿಮ ಗುರಿಯನ್ನು ತಲುಪಬಹುದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಒಂದೊಂದು ಸಮ್ಯಸೆ ಇರುತ್ತದೆ. ವಿಶೇಷ ಚೇತನರು ಎದೆಗುಂದದೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ನಗರ ಸಭೆಯಲ್ಲಿ ವಿಶೇಷಚೇತನರಿಗಾಗಿ ಮೀಸಲಿಟ್ಟ ಅನುದಾನವನ್ನು ವಿವಿಧ ಯೋಜನೆಗಳ ಮೂಲಕ ನೀಡಲಾಗುತ್ತಿದ್ದು, ತಾವುಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್.ದರಗದ ಉಪನ್ಯಾಸ ನೀಡಿ, ಅಂಗವಿಕಲರಿಗೆ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಂದುವರಿಯಲು ಸಹಾನುಭೂತಿಯಿಂದ ಅವಕಾಶಗಳನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂಗವಿಕಲತೆಯಿಂದ ಅಣಕಿಸುವ ಪದಗಳಿಂದ ಕರೆಯುವುದು ಅಥವಾ ಮಾನಸಿಕವಾಗಿ ಕುಗ್ಗಿಸುವಂತಹ ವರ್ತನೆ ತೋರಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಶಾಸನೀಯ ಅಧಿಕಾರವಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಿಕಲಚೇತನರಿಗೆ ಕಾನೂನು ಬದ್ಧವಾಗಿ ಸರ್ಕಾರಿ ಯೋಜನೆಗಳು ಮತ್ತು ಹಕ್ಕುಗಳು ಪ್ರಸ್ತಾಪಿಸಲು ಹಾಗೂ ನ್ಯಾಯಾಲಯಗಳಲ್ಲಿ ದಾವೆ ಹೂಡಲು ನಮ್ಮ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ವಕೀಲರನ್ನು ನೀಡವುದು ನಮ್ಮ ಜವಾಬ್ದಾರಿಯಾಗಿದೆ. ಸರ್ಕಾರಿ ಯೋಜನೆಗಳನ್ನು ವಿಶೇಷಚೇತನರಿಗೆ ಸರಿಯಾದ ರೀತಿಯಲ್ಲಿ ಅಧಿಕಾರಿಗಳು ಜಾರಿ ಮಾಡಬೇಕು ಎಂದರು.ಸನ್ಮಾನ:ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಜಿಲ್ಲೆಯ ಏಳು ತಾಲೂಕುಗಳ ವಿಶೇಷಚೇತನ ಸಾಧಕರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಜಿಲ್ಲೆಯ ಎಲ್ಲಾ ಎಂ.ಆರ್.ಡಬ್ಲೂ., ಯು.ಆರ್.ಡಬ್ಲೂ, ವಿ.ಆರ್.ಡಬ್ಲೂ, ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಮತ್ತು ಜಿಲ್ಲೆಯ ವಿವಿಧ ವಿಕಲಚೇತನರ ಸೇವಾ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇತರ ಪದಾಧಿಕಾರಿಗಳು, ಇತರ ಅಧಿಕಾರಿಗಳು ಹಾಗೂ ಜಿಲ್ಲೆಯ ವಿಶೇಷಚೇತನ ಶಾಲಾ ಮಕ್ಕಳು ಉಪಸ್ಥಿತರಿದ್ದರು.