ಸಾರಾಂಶ
ಹಾನಗಲ್ಲ: ಕಗ್ಗತ್ತಲಲ್ಲಿ ರಾತ್ರಿ ಇಡೀ ಕಳೆಯುವ ಹಾನಗಲ್ಲ ಒಂದು ಕಿಮೀ ಉದ್ದದ ಮುಖ್ಯ ರಸ್ತೆಗೆ ಬೆಳಕಿನ ಹಬ್ಬ ದೀಪಾವಳಿಗೂ ಮುನ್ನ ಬೆಳಕು ಮೂಡಿಸುವಲ್ಲಿ ಪುರಸಭೆ ಹರ ಸಾಹಸ ಮಾಡಿ ಯಶ ಕಂಡಿದೆ. ೧೦ ವರ್ಷಗಳ ಜನರ ಬೇಡಿಕೆ ಈಗ ಈಡೇರಿದೆ.ಪಟ್ಟಣದಲ್ಲಿರುವ ತಡಸ ಗೊಂದಿ ರಸ್ತೆ ಅಗಲೀಕರಣದ ಕೂಗಿನೊಂದಿಗೆ ನನೆಗುದಿಗೆ ಬಿದ್ದ ರಸ್ತೆ ಕಾಮಗಾರಿ ಹಾಗೂ ದೀಪ ಅಳವಡಿಸುವ ಕಾರ್ಯ ನಡೆದಿದೆ. ಅದರೊಟ್ಟಿಗೆ ನನೆಗುದಿಗೆ ಬಿದ್ದ ರಸ್ತೆ ವಿಭಜಕಗಳಲ್ಲಿ ಖಾಲಿ ಇದ್ದ ದೀಪದ ಕಂಬಗಳು ಈಗ ದೀಪದೊಂದಿಗೆ ಬೆಳಕಿಗೆ ಸಾಕ್ಷಿಯಾಗಿವೆ. ೯.೫ ಲಕ್ಷ ರು. ವೆಚ್ಚದಲ್ಲಿ ಇರುವ ಕಂಬಗಳಿಗೆ ಬಿಳಿ ಬಣ್ಣ ಬಳೆದು, ವಿದ್ಯುತ್ ತಂತಿಗಳ ದುರಸ್ತಿಯೂ ನಡೆದು, ಎಲ್‌ಇಡಿ ಬಲ್ಬ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ೩೭ ಕಂಬಗಳಿಂದ ಈಗ ಬೆಳಕು ಚೆಲ್ಲುತ್ತಿದೆ. ಲೋಕೋಪಯೋಗಿ ಸಚಿವರಾಗಿದ್ದ ಸಿ.ಎಂ. ಉದಾಸಿ ೨೦೧೦-೧೧ರಲ್ಲಿಯೇ ಪಟ್ಟಣದ ಈ ಮುಖ್ಯ ರಸ್ತೆ ನಿರ್ಮಾಣದ ಜೊತೆಗೆ ಏಕಮುಖಿ ರಸ್ತೆ ಹಾಗೂ ವಿಭಜಕ ಕಾಮಗಾರಿ ಮಾಡಿಸಿ ಝಗಮಗಿಸುವ ವಿದ್ಯುತ್‌ದೀಪ ಅಳವಡಿಸಲು ಮುಂದಾಗಿದ್ದರು. ಕೆಲವೇ ವರ್ಷಗಳಲ್ಲಿ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಸಮನ್ವಯದ ಕೊರತೆಯಿಂದ ದೀಪಗಳು ಬೆಳಗಲೇ ಇಲ್ಲ. ಸಾರ್ವಜನಿಕರು ಬೆಳಗದ ದೀಪದ ಕಂಬಗಳನ್ನು ನೋಡುತ್ತ ಬೆಳಕಿಗಾಗಿ ಕಾಯುತ್ತಿದ್ದರು. ಈಗ ಕಾಲ ಕೂಡಿ ಬಂದು ಅಂತೂ ಈ ವರ್ಷದ ದೀಪಾವಳಿ ಹೊತ್ತಿಗೆ ದಾರಿಯುದ್ದಕ್ಕೂ ಬೆಳಕು ಮೂಡಿದೆ.ಆದರೆ ಇದು ಕೇವಲ ಮಹಾತ್ಮಾಗಾಂಧಿ ವೃತ್ತದಿಂದ ಹಳೆ ಟಾಕೀಸವರೆಗೆ ಮಾತ್ರ ಸಾಧ್ಯವಾಗಿದೆ. ಹಳೆಯ ರಸ್ತೆ ವಿಭಜಕ ಮತ್ತು ವಿದ್ಯುತ್ ಕಂಬಗಳಿದ್ದಲ್ಲಿ ಮಾತ್ರ ಅದೇ ಕಂಬಗಳಿಗೆ ಎಲ್‌ಇಡಿ ಬಲ್ಬ ಅಳವಡಿಸಿ ದೀಪ ಬೆಳಗಿಸಲಾಗಿದೆ. ಆದರೆ ಮಹಾತ್ಮಾಗಾಂಧಿ ವೃತ್ತದಿಂದ ಎಪಿಎಂಸಿ ಹಾಗೂ ಬಸ್ ಡಿಪೋ ವರೆಗೆ ಮತ್ತೆ ಅದೇ ಕತ್ತಲೆಯೇ ಮುಂದುವರೆದಿದೆ. ಪಟ್ಟಣದ ಮಹಾತ್ಮಾಗಾಂಧಿ ವೃತ್ತ, ಹಳೆ ಟಾಕೀಸ್ ಬಳಿ, ಪುರಸಭೆ ಬಳಿ, ದರ್ಗಾ ಬಳಿ, ನವನಗರ ಬಳಿ ಮಾತ್ರ ಹೈಮಾಸ್ಕ ದೀಪಗಳನ್ನು ಅಳವಡಿಸಲಾಗಿದೆ. ಇವನ್ನು ಇನ್ನೂ ಹಲವೆಡೆ ವಿಸ್ತರಿಸುವ ಅಗತ್ಯವೂ ಇದೆ.