ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಆಂಧ್ರಪ್ರದೇಶ ವ್ಯಾಪ್ತಿಯ ಮಲಪನಗುಡಿ ಗಣಿ ಪ್ರದೇಶದಲ್ಲಿ 68.05 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದ್ದೇ ಜನಾರ್ದನ ರೆಡ್ಡಿಗೆ ಮುಳುವಾಯಿತು.2006ರಲ್ಲಿ ಅರ್ಜಿ ಸಲ್ಲಿಸುತ್ತಾರೆ. ಗಣಿಗಾರಿಕೆಗೆ 2008ರಲ್ಲಿ ಅನುಮತಿ ಸಿಗುತ್ತದೆ. ಗಣಿಗಾರಿಕೆಗೆ ಅನುಮತಿ ಪಡೆದುಕೊಂಡ ಪ್ರದೇಶ ಬಳ್ಳಾರಿ ಅರಣ್ಯ ನಕ್ಷೆಗೆ ಹೊಂದಾಣಿಕೆ ಆಗುವುದಿಲ್ಲ. ಹಾಗೂ ತಾವು ಬಯಸಿದಂತೆ ಗಣಿಗಾರಿಕೆ ಮಾಡಲು ಬರುವುದಿಲ್ಲ ಎಂದು ರೆಡ್ಡಿ ಕರ್ನಾಟಕ ಹಾಗೂ ಆಂಧ್ರದ ಗಡಿಯನ್ನೇ ಬದಲಾಯಿಸುತ್ತಾರೆ. ಆಂಧ್ರದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ಮಾಡುತ್ತಾರೆ.
ಕರ್ನಾಟಕಾಂಧ್ರ ಗಡಿಯನ್ನೇ ಬದಲಾಯಿಸಿರುವುದರಿಂದ ನಮಗೆ ಗಣಿಗಾರಿಕೆಗೆ 2006ರಲ್ಲಿ ಅನುಮತಿ ಸಿಕ್ಕಿರುವ ತಮಟಿ ಪ್ರದೇಶದಲ್ಲಿ ರೆಡ್ಡಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಟಿ.ನಾರಾಯಣ ರೆಡ್ಡಿ ಮೈನಿಂಗ್ ಕಂಪನಿಯ ಟಪಾಲ್ ಗಣೇಶ್ (ಟಪಾಲ್ ಗಣೇಶ್ ಟಿ.ನಾರಾಯಣರೆಡ್ಡಿ ಪುತ್ರ) ಆರೋಪಿಸುತ್ತಾರಲ್ಲದೆ, ಈ ಸಂಬಂಧ ಹೋರಾಟ ಆರಂಭಿಸುತ್ತಾರೆ.ಕೇಂದ್ರ ಸರ್ಕಾರದಿಂದ ಅನುಮೋದಿತ ಹಾಗೂ ಪರವಾನಿಗೆ ದೊರೆತ ಗಣಿಪ್ರದೇಶದಲ್ಲಿ ರೆಡ್ಡಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಟಪಾಲ್ ಗಣೇಶ್ 2006ರಲ್ಲಿ ಸಂಡೂರು ತಾಲೂಕು ತೋರಣಗಲ್ ಪೊಲೀಸ್ ಠಾಣೆಯಲ್ಲಿ ರೆಡ್ಡಿ ವಿರುದ್ಧ ದೂರು ದಾಖಲಿಸುತ್ತಾರಲ್ಲದೆ, ಕರ್ನಾಟಕಾಂಧ್ರ ಗಣಿ ಗಡಿ ಪ್ರದೇಶವನ್ನು ಬದಲಾಯಿಸಲಾಗಿದ್ದು ರೆಡ್ಡಿ ನಮ್ಮ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗುತ್ತದೆ.
2008ರಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಕ್ಕೆ ಬಂದ ಬಳಿಕ ಬಳ್ಳಾರಿ ಭಾಗದ ಗಣಿಗಾರಿಕೆ ಪ್ರದೇಶವನ್ನು ರೆಡ್ಡಿ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಇದು ಲೋಕಾಯುಕ್ತರು ನೀಡಿದ ವರದಿಯಲ್ಲಿ ಸಹ ಪ್ರಸ್ತಾಪಿಸಲಾಗಿದೆ.ತಮಗೆ ದೊರೆತ ಪರ್ಮಿಟ್‌ನ ವ್ಯಾಪ್ತಿ ಮೀರಿ ಆಂಧ್ರ ಗಡಿ ಭಾಗದಲ್ಲಿ ಓಬಳಾಪುರಂ ಮೈನಿಂಗ್ ಕಂಪನಿ ಮೂಲಕ 10,760 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಿದರು ಹಾಗೂ ಅಕ್ರಮವಾಗಿ ಮಣ್ಣು ಸಾಗಿಸಿದರು. ಆಂಧ್ರಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ, ನಾನು ಕರ್ನಾಟಕದ ಹಿಡಿ ಮಣ್ಣು ಮುಟ್ಟಿಲ್ಲ. ನಾನು ಎಲ್ಲೂ ಅಕ್ರಮ ಎಸಗಿಲ್ಲ ಎಂದು ಸಮರ್ಥಿಸಿಕೊಂಡೇ ಬಂದಿದ್ದರು. ಪ್ರತಿಬಾರಿಯೂ ತಮ್ಮ ವಿರುದ್ಧದ ಆರೋಪವನ್ನು ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದ ರೆಡ್ಡಿ ಕಾಂಗ್ರೆಸ್ ಕಡೆ ಬೆರಳು ತೋರಿಸುತ್ತಿದ್ದರು
ಟಪಾಲ್ ಗಣೇಶ್ ನೀಡಿದ ದೂರಿನ ಹಿನ್ನೆಲೆ ಆಂಧ್ರಪ್ರದೇಶ ಸರ್ಕಾರ ಐಎಫ್‌ಎಸ್ ಅಧಿಕಾರಿಗಳ ತ್ರಿಸದಸ್ಯ ಸಮಿತಿಯನ್ನೇ ನೇಮಕ ಮಾಡಿ ರೆಡ್ಡಿ ಎಸಗಿದ ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡುವಂತೆ ಸೂಚಿಸುತ್ತದೆ. ಈ ವರದಿಯಲ್ಲಿ ರೆಡ್ಡಿ ಮಾಡಿರುವ ಅಕ್ರಮ ಗಣಿಗಾರಿಕೆ ಕುರಿತು ವಿವರಿಸುತ್ತಾರಲ್ಲದೆ, ಪರವಾನಿಗೆ ಪಡೆದ ಜಾಗದಲ್ಲಿ ಮೈನಿಂಗ್ ಮಾಡದೆ, ಆಂಧ್ರದ ಪರ್ಮಿಟ್ ಪಡೆದು, ಕರ್ನಾಟಕ ಗಣಿಪ್ರದೇಶದಲ್ಲಿ ಅಕ್ರಮವಾಗಿ ಮೈನಿಂಗ್ ಮಾಡಲಾಗಿದೆ. ಅಕ್ರಮವಾಗಿ ರಸ್ತೆ ಮಾಡಿಕೊಂಡು ಕರ್ನಾಟಕದಿಂದ ಮೈನಿಂಗ್ ಮಾಡಿ ಆಂಧ್ರಕ್ಕೆ ಸಾಗಿಸಲಾಗಿದೆ ಎಂದು ತ್ರಿಸದಸ್ಯ ಸಮಿತಿ 2009ರಲ್ಲಿ ವರದಿ ನೀಡುತ್ತದೆ. ವರದಿ ನೀಡಿದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸುತ್ತದೆ. ಈ ಪ್ರಕರಣದಲ್ಲಿ ರೆಡ್ಡಿ ₹884 ಕೋಟಿಗಳಷ್ಟು ಅವ್ಯವಹಾರ ಮಾಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.2011ರ ಸೆಪ್ಟೆಂಬರ್ 5 ರಂದು ಸಿಬಿಐ ಜನಾರ್ದನ ರೆಡ್ಡಿಯನ್ನು ಬಂಧಿಸಿ ಹೈದ್ರಾಬಾದಿನ ಚಂಚಲಗುಡ್ಡ ಜೈಲಿಗೆ ಹಾಕುತ್ತದೆ. ಅಲ್ಲಿ ಮೂರು ವರ್ಷ ಸೆರೆವಾಸ ಅನುಭವಿಸಿದ್ದಾರೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ ಮತ್ತೆ 10 ವರ್ಷಗಳ ಬಳಿಕ ಜೈಲುವಾಸ ಅನುಭವಿಸುವಂತಾಗಿದೆ.