ಕನ್ನಡಪ್ರಭ ವಾರ್ತೆ ಬೆಳಗಾವಿ

ತುಂಬಿ ಹರಿಯುತ್ತಿರುವ ನದಿಗೆ ಅಂದಾಜು 120 ಅಡಿ ಎತ್ತರದ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೊಬ್ಬಳನ್ನು ತನ್ನ ಜೀವವನ್ನೇ ಪಣಕ್ಕಿಟ್ಟು ವ್ಯಕ್ತಿಯೊಬ್ಬರು ರಕ್ಷಣೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಮಾಜಸೇವಕ ಹಾಗೂ ಉರಗ ಪ್ರೇಮಿ ಮಲ್ಲಿಕಾರ್ಜುನ ಗಾಣಿಗೇರ ಅವರು ಈ ಸಾಹಸ ಮೆರೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಸಂಜೆ ನಯಾನಗರ ಸಮೀಪದ ಮಲಪ್ರಭಾ ನದಿ ಸೇತುವೆ ಬಳಿ ಯುವತಿಯು ಜೀವನದಲ್ಲಿ ಆಸೆ ಕಳೆದುಕೊಂಡು 120 ಅಡಿ ಎತ್ತರದ ಸೇತುವೆಯಿಂದ ಮಲಪ್ರಭಾ ನದಿಗೆ ಹಾರಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕೆಲ ಕ್ಷಣಗಳ ಕಾಲ ಆತಂಕಕ್ಕೆ ಒಳಗಾದರು. ನದಿಯ ನೀರಿನ ಸೆಳೆತ ಹೆಚ್ಚಿದ್ದ ಕಾರಣ ಯಾರೂ ನೀರಿಗೆ ಇಳಿದು ಆಕೆಯನ್ನು ರಕ್ಷಣೆ ಮಾಡುವ ಧೈರ್ಯ ತೋರಲಿಲ್ಲ. ಈ ವೇಳೆ ಸ್ಥಳದಲ್ಲಿದ್ದ ನಾಗರಿಕರು ಸಮಾಜಸೇವಕ ಹಾಗೂ ಉರಗ ಪ್ರೇಮಿ ಮಲ್ಲಿಕಾರ್ಜುನ ಗಾಣಿಗೇರ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಗಾಣಿಗೇರ ವಿಳಂಬ ಮಾಡದೆ ಸ್ಥಳಕ್ಕೆ ಧಾವಿಸಿ, ತಮ್ಮ ಜೀವದ ಹಂಗು ತೊರೆದು ನೇರವಾಗಿ ಮಲಪ್ರಭಾ ನದಿಗೆ ಧುಮುಕಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ಯುವತಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಪ್ರಾಥಮಿಕ ಉಪಚಾರ ನೀಡಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಮಲ್ಲಿಕಾರ್ಜುನ ಗಾಣಿಗೇರ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ಅಮೂಲ್ಯ ಜೀವ ಉಳಿದಿದ್ದು, ಸ್ಥಳದಲ್ಲಿದ್ದ ಜನರು ಅವರ ಕಾರ್ಯವನ್ನು ಶ್ಲಾಘಿಸಿದರು. ಜೀವವನ್ನೇ ಪಣಕ್ಕಿಟ್ಟು ಮತ್ತೊಬ್ಬರ ಜೀವ ಉಳಿಸುವುದು ನಿಜವಾದ ಮಾನವೀಯತೆಯ ಸ್ಪರ್ಶ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.