ಸಾರಾಂಶ
ಕಟೀಲು ಯಕ್ಷಗಾನ ಮಂಡಳಿಯ ಆರೂ ಮೇಳಗಳ ಪ್ರದರ್ಶನ ಕಾಲಮಿತಿಯಲ್ಲೇ ಮುಂದುವರಿಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಸಾದಿತ ಯಕ್ಷಗಾನ ಮಂಡಳಿಯ ಆರೂ ಮೇಳಗಳು ಕಳೆದ ವರ್ಷದಂತೆ (2022-23ನೇ ಸಾಲಿನ ತಿರುಗಾಟ) ಕಾಲಮಿತಿಯಲ್ಲೇ ಮುಂದುವರಿಯಲಿದೆ.ಕೆಲವು ದಿನಗಳ ಹಿಂದೆ ಜ.14ರಿಂದ ರಾತ್ರಿಯಿಂದ ಬೆಳಗ್ಗಿನ ವರೆಗೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆಯೆಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದು, ಈಗ ರಾತ್ರಿಯಿಂದ ಬೆಳಗ್ಗಿನ ವರೆಗಿನ ಪ್ರದರ್ಶನ ಕೈ ಬಿಡಲಾಗಿದೆ. ಮೇಳ ಆರಂಭವಾದಾಗ ಇದ್ದ ರೀತಿಯಲ್ಲಿ ರಾತ್ರಿ 12.30ರ ವರೆಗೆ ಪ್ರದರ್ಶನ ನಡೆಯಲಿದೆ ಎಂದು ತಿಳಿದುಬಂದಿದೆ.
ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್, ಯಕ್ಷಗಾನವನ್ನು ರಾತ್ರಿ ಇಡೀ ಪ್ರದರ್ಶಿಸುವಾಗ ಶಬ್ದಮಾಲಿನ್ಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳ ಅಂಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಜ.10ರಂದು ಆದೇಶ ಹೊರಡಿಸಿದ್ದರು. ರಾತ್ರಿ ಪೂರ್ತಿ ಯಕ್ಷಗಾನ ನಡೆಸುವಾಗ ಧ್ವನಿವರ್ಧಕ ಬಳಕೆಯಾದರೆ ಶಬ್ದಮಾಲಿನ್ಯ ಉಂಟಾಗುವ ಸಾಧ್ಯತೆ ಇದೆ ಎಂದು ಕಲಾವಿದರೂ ಯಕ್ಷಾಭಿಮಾನಿಗಳೂ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜೊತೆಗೆ ಮೇಳದ ಕೆಲವು ಕಲಾವಿದರೂ ಕಾಲಮಿತಿ ಪದ್ಧತಿಯನ್ನೇ ಮುಂದುವರಿಸಬೇಕೆಂದು ಆಡಳಿತ ಸಮಿತಿಗೆ ಮನವಿ ಮಾಡಿದ್ದರು. ಇದೀಗ ಜನವರಿ 14ರಿಂದ ಪೂರ್ಣ ರಾತ್ರಿ ಆಟ ನಡೆಸುವುದಾಗಿ ನಿರ್ಧರಿಸಿದ್ದ ಆಡಳಿತ ಮಂಡಳಿ ಕಾಲಮಿತಿಯಲ್ಲಿ ಮುಂದುವರಿಸುವುದಾಗಿ ತಿಳಿಸಿದೆ.ಜಿಲ್ಲಾಧಿಕಾರಿ ಆದೇಶ, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳ ಆದೇಶದ ಅಂಶವನ್ನೊಳಗೊಂಡಂತೆ ಯಕ್ಷಗಾನ ಇಡೀ ರಾತ್ರಿ ಪ್ರದರ್ಶನದ ಬಗ್ಗೆ ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಆಡಳಿತ ಸಮಿತಿ ತಿಳಿಸಿದೆ.