ಸಿ.ಟಿ. ರವಿ ಬಂಧಿಸಿದ ರೀತಿ ರಾಜ್ಯ ಸರ್ಕಾರಕ್ಕೆ ಶೋಭೆಯಲ್ಲ: ಸಂಸದ ಕೋಟ ಶ್ರೀನಿವಾಸ ಪೂಜಾರಿ

| Published : Dec 21 2024, 01:17 AM IST / Updated: Dec 21 2024, 12:25 PM IST

Kota Srinivas Poojary
ಸಿ.ಟಿ. ರವಿ ಬಂಧಿಸಿದ ರೀತಿ ರಾಜ್ಯ ಸರ್ಕಾರಕ್ಕೆ ಶೋಭೆಯಲ್ಲ: ಸಂಸದ ಕೋಟ ಶ್ರೀನಿವಾಸ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನಲ್ಲಿ ಪ್ರತಿಭಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ನಾಯಕರನ್ನು ಬಂಧಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ಸರ್ಕಾರಕ್ಕೆ ಗೌರವ, ಶೋಭೆ ತರುವುದಿಲ್ಲ ಎಂದವರು ಹೇಳಿದರು

 ಉಡುಪಿ :  ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಅಂದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಹೇಳಿದಾಗ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಾಬೀತಾದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯದ ಕಾಂಗ್ರೆಸ್ ತಳ್ಳಿ ಹಾಕಿತ್ತು. ಆದರೆಸಿ.ಟಿ.ರವಿ ಅವರು ವಿಧಾನಪರಿಷತ್‌ನಲ್ಲಿ ಯಾವುದೇ ಅಶ್ಲೀಲ ಪದ ಬಳಕೆ ಮಾಡಿರುವುದಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸದೆ, ಅವರನ್ನು ಸುವರ್ಣ ಸೌಧದಲ್ಲಿಯಲ್ಲಿಯೇ ಅಟ್ಟಾಡಿಸಿ ಬಂಧಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಸರ್ಕಾರ ವಿಪಕ್ಷ ನಡೆಸಿಕೊಳ್ಳುವ ಈ ರೀತಿ ಸರಿಯಲ್ಲ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಸಿ.ಟಿ. ರವಿ ಅವರೇ ನಾನು ಯಾವುದೇ ಅಶ್ಲೀಲ ಶಬ್ದ ಬಳಸಿಲ್ಲ ಸ್ಪಷ್ಟಪಡಿಸಿದ್ದಾರೆ, ಸಭಾಪತಿಗಳ ಸುಪರ್ದಿಯಲ್ಲಿರುವ ಎಲ್ಲ ಕಡತಗಳನ್ನು ತರಿಸಿ, ನಡೆದಿರುವ ವಿದ್ಯಮಾನ, ಆಡಿರುವ ಮಾತು ಪ್ರಯೋಗಾಲಯದಲ್ಲಿ ಪರಿಶೀಲನೆ ಆಗಲಿ, ಆರೋಪ ಸಾಬೀತಾದರೆ ಕ್ರಮ ತೆಗೆದುಕೊಳ್ಳಬೇಕು, ಆದರೆ ಸಾಕ್ಷ್ಯಗಳೇ ಇಲ್ಲದೆ ಭಯೋತ್ಪಾದಕನ ರೀತಿಯಲ್ಲಿ ಸಿ.ಟಿ. ರವಿಯನ್ನು ಪೊಲೀಸರು ಹೊತ್ತೊಯ್ದಿದ್ದಾರೆ, ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ, ಅವರ ತಲೆಗೂ ಗಾಯಗಳಾಗಿವೆ, ಈ ಎಲ್ಲ ವಿದ್ಯಮಾನಗಳ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಡಬೇಕು ಎಂದವರು ಆಗ್ರಹಿಸಿದರು.

ಚಿಕ್ಕಮಗಳೂರಿನಲ್ಲಿ ಪ್ರತಿಭಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷರ ಸಹಿತ ನಾಯಕರನ್ನು ಬಂಧಿಸಿದ್ದಾರೆ. ಈ ಬೆಳವಣಿಗೆ ರಾಜ್ಯ ಸರ್ಕಾರಕ್ಕೆ ಗೌರವ, ಶೋಭೆ ತರುವುದಿಲ್ಲ ಎಂದವರು ಹೇಳಿದರು ಸದನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾರೆ. ಸದನ ಇರುವುದು ಜನಸಾಮಾನ್ಯರ ಸಮಸ್ಯೆಗಳ ಬಗೆಗೆ ಚರ್ಚೆ ಮಾಡುವುದಕ್ಕೆ, ಅಲ್ಲಿ ಯಾವುದೇ ವೈಯಕ್ತಿಕ ಟೀಕೆ ಟಿಪ್ಪಣಿಗಳು ಆಗಬಾರದು, ಏನಾಗಿದೆ ಎಂದು ಪರಿಶೀಲಿಸದೆ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿರುವುದು ಸರಿಯಲ್ಲ, ಯಾರ ಮನಸ್ಸಿಗೂ ನೋವಾಗದಂತೆ ಸತ್ಯದರ್ಶನವಾಗಬೇಕು ಎಂದು ಕೋಟ ಹೇಳಿದರು. 

ಲೋಕಸಭಾ ಪ್ರಕರಣ: ಲೋಕಸಭಾ ಅಧಿವೇಶನ ವೇಳೆ ಅಂಬೆಡ್ಕರ್‌ ವಿಚಾರದಲ್ಲಿ ನಡೆದ ಗಲಾಟೆಯ ಬಗ್ಗೆ ಮಾತನಾಡಿದ ಸಂಸದ ಕೋಟ, ಕಾಂಗ್ರೆಸ್ ಸರ್ಕಾರ ಯಾವತ್ತೂ ಅಂಬೇಡ್ಕರ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವೇ ಸೋಲಿಸಿತ್ತು. ಅವರ ಪಾರ್ಥಿವ ಶರೀರಕ್ಕೂ ಕಾಂಗ್ರೆಸ್ ಗೌರವ ಕೊಟ್ಟಿಲ್ಲ. ಬಿಜೆಪಿ ಪ್ರಧಾನಿ ವಾಜಪೇಯಿ ಅವರ ಶಿಫಾರಸಿನ ಮೇರೆಗೆ ಅಂಬೇಡ್ಕರ್‌ಗೆ ಭಾರತ ರತ್ನ ನೀಡಲಾಯಿತು. ಈಗ ಅದೇ ಕಾಂಗ್ರೆಸ್ ಅಂಬೇಡ್ಕರ್ ಹೆಸರಲ್ಲಿ ಎನ್‌ಡಿಎ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದೆ ಎಂದವರು ಆರೋಪಿಸಿದರು.