ರಾಮನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಶುಕ್ರವಾರ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು

ರಾಮನಗರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಶುಕ್ರವಾರ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಈ ವೇಳೆ ಮಹಾನ್ ಪುರುಷರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎನ್.ಆರ್. ವೆಂಕಟೇಶ್, ದೇಶದ ಸ್ವಾತಂತ್ರ್ಯ, ಸೌಹಾರ್ದತೆ ಮತ್ತು ಸಮಗ್ರತೆಗೆ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆಗಳು ಸದಾ ಆದರ್ಶ ಪ್ರಾಯವಾಗಿವೆ ಎಂದು ಸ್ಮರಿಸಿದರು.

ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ವರ್ಣಬೇದ ನೀತಿ, ಶಾಂತಿ ಮಂತ್ರಗಳು ಇಡೀ ವಿಶ್ವಕ್ಕೇ ದಾರಿ ದೀಪವಾಗಿವೆ. ದೇಶದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಗಾಂಧಿ ತತ್ವಗಳ ಅಗತ್ಯತೆ ಎಂದಿಗಿಂತಲೂ ಹೆಚ್ಚಾಗಿದೆ. ಸ್ವಾತಂತ್ರ್ಯ ಚಳವಳಿಯ ಹಾದಿಯಲ್ಲಿ ಸರ್ವರನ್ನೂ ಒಗ್ಗೂಡಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ದೊರಕಬೇಕೆಂಬ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.

ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶಕ್ಕೆ ಅನ್ನ ನೀಡುವ ರೈತರು ಮತ್ತು ದೇಶ ಕಾಯುವ ಯೋಧರಿಗೆ ಸಮಾನ ಗೌರವವನ್ನು ತಂದು ಕೊಟ್ಟ ಧೀಮಂತ ನಾಯಕ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಎಂದು ಬಣ್ಣಿಸಿದರು.

ದೇಶ ತೀವ್ರ ಆಹಾರ ಸಂಕಷ್ಟ ಮತ್ತು ಯುದ್ಧದ ಸವಾಲನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಶಾಸ್ತ್ರೀಜಿಯವರು ತೋರಿದ ದಿಟ್ಟ ನಾಯಕತ್ವ ಹಾಗೂ ಸರಳ ಜೀವನಶೈಲಿ ಇಂದಿನ ಯುವ ಪೀಳಿಗೆಗೆ ಮತ್ತು ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಶಾಸ್ತ್ರೀ ಅವರ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯನ್ನು ಸಿ.ಎನ್.ಆರ್. ವೆಂಕಟೇಶ್ ಶ್ಲಾಘಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿ, ವಕೀಲ ವೃತ್ತಿ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಗಾಂಧೀಜಿ ಅವರು ಸರಳ, ಸಾತ್ವಿಕ ಆಹಾರ ಪದ್ದತಿಯೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದು‌ಕೊಟ್ಟರು. ಗಾಂಧೀಜಿ ತಂದು ಕೊಟ್ಟ ಸ್ವಾತಂತ್ರ್ಯ ಇಂದು ಇಲ್ಲವಾಗಿದೆ ಎಂದು‌ ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವು ಸದಾ ಇಂತಹ ಮಹಾ ಪುರುಷರ ತ್ಯಾಗ ಮತ್ತು ಸಿದ್ಧಾಂತಗಳ ಬುನಾದಿಯ ಮೇಲೆ ನಿಂತಿದೆ. ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಮತ್ತು ಸಮಗ್ರತೆಯನ್ನು ಕಾಪಾಡಲು ಕಾರ್ಯಕರ್ತರು ಅವರ ಆದರ್ಶಗಳನ್ನು ನಿತ್ಯ ಜೀವನ ಹಾಗೂ ಸಾರ್ವಜನಿಕ ರಂಗದಲ್ಲಿ ಎಲ್ಲರೂ ಅಳವಡಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಯಂತಿ ಆಚರಣೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಡಿಸಿಸಿ ಜಿಲ್ಲಾ ಕಾರ್ಯದರ್ಶಿ ಷಡಕ್ಷರದೇವ, ನಗರಸಭೆ ಮಾಜಿ ಅಧ್ಯಕ್ಷ ಬಾಬು, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು, ತಾಲೂಕು ಅಧ್ಯಕ್ಷ ಕುರುಬಳ್ಳಿ ದೇವರಾಜು, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ನಾಗಮ್ಮ, ಮುಖಂಡರಾದ ಜಯಣ್ಣ, ನಾಗರಾಜು, ಗಂಗಾಧರಗೌಡ (ಗುಂಡಪ್ಪ), ಉಮೇಶ್, ವಸಂತ, ಹೆಚ್.ನರಸಿಂಹಯ್ಯ, ಅಪ್ಪಿ, ಶಿವಲಿಂಗಯ್ಯ, ಕೃಷ್ಣ, ಕಚೇರಿ ಕಾರ್ಯದರ್ಶಿ ತಿಮ್ಮಯ್ಯ ಮತ್ತಿತರರು ಹಾಜರಿದ್ದರು.

2ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು.