ನೇಪಥ್ಯಕ್ಕೆ ಸರಿದ ಚೇಳೂರಿನ ಮಾರುಕಟ್ಟೆ

| Published : May 19 2024, 01:59 AM IST

ಸಾರಾಂಶ

ಇಲ್ಲಿನ ಜಾನುವಾರುಗಳು ಸಂತೆಯ ದಿನ ಲಕ್ಷಾಂತರ ರೂಪಾಯಿ ವ್ಯವಹಾರಗಳು ನಡೆಯುತ್ತವೆ.ಇದು ಜಿಲ್ಲೆಯಾದ್ಯಂತ ಹೆಸರುವಾಸಿ ಕೂಡ ಆದರೆ ಮೂಲ ಸೌಕರ್ಯಗಳಿಲ್ಲದೆ ವ್ಯಾಪಾರಸ್ಥರು ಮಳೆ ಹಾಗೂ ಬಿಸಿಲಿಗೆ ಪರದಾಡುವಂತಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರೈತರು ಮತ್ತು ಕೊಳ್ಳುವವರ ಪಾಲಿಗೆ ವರದಾನವಾಗಿದ್ದ ಜಿಲ್ಲೆಯ ನೂತನ ತಾಲೂಕು ಚೇಳೂರಿನ ಸಂತೆಯಲ್ಲಿ ಯಾವುದೇ ಸೌಲಭ್ಯಗಳು ಇಲ್ಲದ ಕಾರಣ ಇಂದು ನೇಪಥ್ಯಕ್ಕೆ ಸರಿದಿವೆ. ಚೇಳೂರು ಸಂತೆ ಎಂದರೆ, ಕುರಿ, ಮೇಕೆಗಳ ಸಂತೆಗೆ ಎಂದೆ ಹೆಸರು. ದೂರದ ಜಿಲ್ಲೆ ಹಾಗೂ ಆಂಧ್ರದ ಕಡೆಯಿಂದ ವ್ಯಾಪಾರಸ್ಥರು ಹಾಗೂ ಸಾಕಾಣಿಕೆದಾರರು ಶುಕ್ರವಾರ ಮುಂಜಾನೆಯೇ ಬಯಲಿನಲ್ಲಿ ತಮ್ಮ ತಮ್ಮ ಪ್ರಾಣಿಗಳೊಂದಿಗೆ ಬಂದು ಬೀಡುಬಿಡುತ್ತಾರೆ. ಬಿಸಿಲು ಏರಿದಂತೆಲ್ಲಾ ಸಂತೆಯಲ್ಲಿ ಮಾರುವವರ ಮತ್ತು ಕೊಳ್ಳುವವರ ನಡುವೆ ಬಿರುಸಿನ ವ್ಯವಹಾರ ನಡೆಯುತ್ತದೆ.

ಇಲ್ಲಿನ ಜಾನುವಾರುಗಳು ಸಂತೆಯ ದಿನ ಲಕ್ಷಾಂತರ ರೂಪಾಯಿ ವ್ಯವಹಾರಗಳು ನಡೆಯುತ್ತವೆ.ಇದು ಜಿಲ್ಲೆಯಾದ್ಯಂತ ಹೆಸರುವಾಸಿ ಕೂಡ ಆದರೆ ಮೂಲ ಸೌಕರ್ಯಗಳಿಲ್ಲದೆ ವ್ಯಾಪಾರಸ್ಥರು ಮಳೆ ಹಾಗೂ ಬಿಸಿಲಿಗೆ ಪರದಾಡುವಂತಾಗಿದೆ.

ಸಂತೆ ಜಾಗದಲ್ಲಿ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಹಾಗೂ ಶೌಚಾಲಯ ವ್ಯವಸ್ಥೆ ಕೂಡ ಕಲ್ಪಿಸಿಲ್ಲ. ಇದರಿಂದ ವ್ಯಾಪಾರಸ್ಥರು ಹಾಗೂ ಸಂತೆಗೆ ಬರುವ ಗ್ರಾಹಕರು ಸಂತೆಯ ಬಯಲನ್ನೇ ಬಹಿರ್ದೆಸೆಯ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಈಚೆಗಷ್ಟೇ ಎರಡು ಕಡೆಗಳಲ್ಲಿ ಪ್ರಾಂಗಣ ನಿರ್ಮಿಸಲಾಗಿದೆ. ಸಂತೆಯ ಎಲ್ಲ ವ್ಯಾಪಾರಸ್ಥರಿಗೆ ಪ್ರಾಂಗಣ ಸಾಲುತ್ತಿಲ್ಲದ ಕಾರಣ ಕೆಲವು ವ್ಯಾಪಾರಸ್ಥರು ಬಿಸಿಲಿನಲ್ಲಿ ಹಾಗೂ ಮಳೆ ಗಾಳಿ ಲೆಕ್ಕಿಸದೇ ವ್ಯಾಪಾರ ಮಾಡಬೇಕಾಗಿದೆ.

ಪ್ರತಿ ವಾರ ನೂರಾರು ಸಂಖ್ಯೆಯಲ್ಲಿ ಜನರು ಸೇರುವ ಈ ಸ್ಥಳದಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಕುಡಿಯುವ ನೀರು, ಶೌಚಾಲಯ ಹಾಗೂ ನೆರಳಿನ ವ್ಯವಸ್ಥೆಯಿಲ್ಲದೇ ಖರೀದಿ ಹಾಗೂ ಮಾರಾಟಗಾರರು ಇಡೀ ದಿನ ಬಿರುಬಿಸಿಲಿನಲ್ಲೇ ನಿಲ್ಲಬೇಕಾಗಿದೆ. ಇನ್ನಾದರೂ ಸ್ಥಳೀಯ ಶಾಸಕರು ಹಾಗೂ ಚೇಳೂರು ನೂತನ ತಹಸೀಲ್ದಾರ್ ಸಂತೆಗೆ ಬರುವ ಮಂದಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು ಮತ್ತು ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಿ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಿ ಎಂಬುದು ವ್ಯಾಪಾರಿಗಳ ಒತ್ತಾಯವಾಗಿದೆ.