ಗುಂಡೂರ ಗುಡುಗಿಗೆ ಬೆಚ್ಚಿದ ಮೇಯರ್‌

| Published : Nov 30 2024, 12:45 AM IST

ಸಾರಾಂಶ

ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಮೈಕ್‌ ಕಿತ್ತೆಸೆದು, ಅಜೆಂಡಾ ಪ್ರತಿಗಳನ್ನು ಹರಿದು ಚಿಲ್ಲಾಪಿಲ್ಲಿ ಮಾಡಿದರು. ಗುಂಡೂರ ಗುಡುಗಿಗೆ ಮೇಯರ್‌ ರಾಮಣ್ಣ ಬಡಿಗೇರ ಬೆಚ್ಚಿಬಿದ್ದರೆ, ಪಾಲಿಕೆ ಸದಸ್ಯರೆಲ್ಲರೂ ಕಕ್ಕಾಬಿಕ್ಕಿಯಾದರು.

ಹುಬ್ಬಳ್ಳಿ: ಆಡಳಿತಾರೂಢ ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಅವರೇ ಅಕ್ಷರಶಃ ರುದ್ರಾವತಾರ ತಾಳಿ ಪಾಲಿಕೆ ಸಾಮಾನ್ಯ ಸಭೆಯನ್ನೇ ದಂಗಾಗಿಸಿದರು. ಮೈಕ್‌ ಕಿತ್ತೆಸೆದು, ಅಜೆಂಡಾ ಪ್ರತಿಗಳನ್ನು ಹರಿದು ಚಿಲ್ಲಾಪಿಲ್ಲಿ ಮಾಡಿದರು. ಗುಂಡೂರ ಗುಡುಗಿಗೆ ಮೇಯರ್‌ ರಾಮಣ್ಣ ಬಡಿಗೇರ ಬೆಚ್ಚಿಬಿದ್ದರೆ, ಪಾಲಿಕೆ ಸದಸ್ಯರೆಲ್ಲರೂ ಕಕ್ಕಾಬಿಕ್ಕಿಯಾದರು.

ವಾರ್ಡ್‌ ನಂಬರ್‌ 35ರಲ್ಲಿ ಚರಂಡಿ ನೀರು ಉಣಕಲ್‌ ಕೆರೆ ಸೇರುತ್ತದೆ. ಈ ಭಾಗದ ನಿವಾಸಿಗಳು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಬಜೆಟ್‌ನಲ್ಲಿ ಈ ಚರಂಡಿಯನ್ನು ಕಾಲುವೆಯನ್ನಾಗಿಸಲು, ತಡೆಗೋಡೆ ನಿರ್ಮಾಣಕ್ಕೆ ₹5 ಕೋಟಿ ಮೀಸಲಿಡಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು, ಮೇಯರ್‌ ಸೇರಿದಂತೆ ಎಲ್ಲರ ಗಮನಕ್ಕೆ ತಂದಿದ್ದೇನೆ. ಆದರೂ ಇವತ್ತಿನ ಸಭೆಯ ವಿಷಯ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ಮೈಕ್‌ ಕಿತ್ತೆಸೆದರು

ತಮ್ಮ ವಿಷಯ ಪ್ರಸ್ತಾಪಿಸುತ್ತಲೇ ಏಕಾಏಕಿ ಟೇಬಲ್‌ ಕುಟ್ಟಿ ಕುಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್‌ನಲ್ಲೇ ಈ ಕಾಮಗಾರಿ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಆದರೂ ಆಯುಕ್ತರು ಸಹಿ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಅವರನ್ನು ತೆಗೆದುಹಾಕಿ, ನೀವು ಉತ್ತರ ಹೇಳಿ ಎಂದು ಆಗ್ರಹಿಸಿದರು. ಇದಕ್ಕೆ ಸಮಜಾಯಿಷಿ ನೀಡಲು ಮೇಯರ್‌ ಮುಂದಾದರು. ಆದರೆ ಅವರ ಉತ್ತರದಿಂದ ಸಮಾಧಾನಗೊಳ್ಳದ ಗುಂಡೂರ, ಅಜೆಂಡಾ ಪ್ರತಿಯನ್ನು ಹರಿದು ತೂರಾಡಿದರು. ಬಳಿಕ ಎಲ್ಲ ವಾರ್ಡ್‌ಗಳಲ್ಲಿನ ಚರಂಡಿ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ತಿಳಿಸಿ, ಮುಂದೆ ಮಾತನಾಡಲು ಶಿವು ಮೆಣಸಿನಕಾಯಿ ಅವರಿಗೆ ಅವಕಾಶ ಕೊಟ್ಟರು. ಇದರಿಂದ ಮತ್ತಷ್ಟು ಸಿಡಿಮಿಡಿಗೊಂಡ ಗುಂಡೂರ, ಶಿವು ಮೆಣಸಿನಕಾಯಿ ಅವರ ಬಳಿಯಿದ್ದ ಮೈಕ್‌ನ್ನು ಕಿತ್ತೆಸೆದರು. ಮೊದಲು ನನ್ನ ಪ್ರಶ್ನೆಗೆ ಉತ್ತರಿಸಬೇಕು ಎಂದು ಹೇಳುತ್ತಲೇ ಮೇಯರ್‌ ಪೀಠದ ಬಳಿಯೇ ತೆರಳಿದರು.

ಅದಕ್ಕೆ ಪ್ರತಿಪಕ್ಷದ ಸದಸ್ಯರೆಲ್ಲರೂ ಸಭೆಗೆ ಗೌರವ ಕೊಡುತ್ತಿಲ್ಲ. ಕೂಡಲೇ ಅವರನ್ನು ಸಭೆಯಿಂದ ಹೊರಗೆ ಹಾಕಿ ಎಂದು ಆಗ್ರಹಿಸಿದರೆ, ವೀರಣ್ಣ ಸವಡಿ, ಶಿವು ಮೆಣಸಿನಕಾಯಿ, ಉಮೇಶಗೌಡ ಕೌಜಗೇರಿ ಮತ್ತಿತರರ ಸದಸ್ಯರು ಸಮಾಧಾನಪಡಿಸಿದರು. ಆಗ ಇನ್ನೊಂದು ವಾರದಲ್ಲಿ ಕೆಲಸ ಶುರುವಾಗದಿದ್ದರೆ ಯಾರು ನಿರೀಕ್ಷೆ ಮಾಡಲಾರದಂತಹ ಉಗ್ರ ಹೋರಾಟ ಮಾಡಿ ನಾನು ಯಾರು ಎಂಬುದನ್ನು ತೋರಿಸುತ್ತೇನೆ ಎಂದು ಎಚ್ಚರಿಕೆ ನೀಡಿ ತಮ್ಮ ಆಸನದಲ್ಲಿ ಕುಳಿತರು.

ಇದೆಲ್ಲ ಘಟನೆಯಿಂದ ಎಲ್ಲ ಸದಸ್ಯರು ಕಕ್ಕಾಬಿಕ್ಕಿಯಾದರು. ಬೆಚ್ಚಿ ಬಿದ್ದ ಮೇಯರ್‌ ಊಟಕ್ಕೆ ಬಿಡುವು ನೀಡಿ ಸಭೆಯನ್ನು ಮುಂದೂಡಿದರು.