ಸಾರಾಂಶ
ನರಗುಂದ: ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಅಂಕುಡೊಂಕು ತಿದ್ದುವ ಮಹತ್ವದ ಕಾರ್ಯ ಮಾಡುವ ಶಕ್ತಿ ಮಾಧ್ಯಮಕ್ಕೆ ಇದೆ ಎಂದು ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಜಿ.ಬಿ. ಹಿರೇಮಠ ಹೇಳಿದರು.
ಅವರು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ, ಮುರುಘರಾಜೇಂದ್ರ ಫ್ರೀ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶರಣ ಸಂಗಮ ಹಾಗೂ ಪತ್ರಿಕಾ ದಿನಾಚರಣೆ ಪ್ರಯುಕ್ತ ತಾಲೂಕಿನ ಕಾರ್ಯನಿರತ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ್ಯದಲ್ಲಿ ಮೊದಲು ಮಂಗಳೂರು ಸಮಾಚಾರ ಪತ್ರಿಕೆ ಪ್ರಾರಂಭವಾದ ನಂತರ ವಿವಿಧ ಪತ್ರಿಕೆಗಳು ಪ್ರಾರಂಭವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿವೆ. ಸ್ವಾತಂತ್ರ್ಯ ಸಿಕ್ಕ ನಂತರ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯವನ್ನು ಮಾಡಿದ್ದರಿಂದ ಇಂದು ಸಮಾಜದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಳ ಜೊತೆ ಈ ಮಾಧ್ಯಮರಂಗವು ಕೂಡ ಒಂದು ಅಂಗವೆಂದು ನಾವು ಹೇಳುತ್ತೇವೆ ಎಂದರು.
ಇಂದು ಈ ಆಧುನಿಕ ಯುಗದಲ್ಲಿ ಪತ್ರಿಕೆ ನಡೆಸಿಕೊಂಡು ಹೋಗುವದು ಬಹಳ ಕಷ್ಟವಿದೆ. ಇಂಥ ಕಷ್ಟದ ಸಮಯದಲ್ಲಿ ಕೂಡ ಪತ್ರಿಕಾ ಸಂಸ್ಥೆಗಳು ಈ ಸಮಾಜ ಸುಧಾರಣೆಗೆ ಶ್ರಮಿಸುತ್ತಿರುವುದು ಸಂತೋಷ ತಂದಿದೆ ಎಂದರು.ಈ ತಾಲೂಕಿನಲ್ಲಿ ಮುರುಘರಾಜೇಂದ್ರ ಟ್ರಸ್ಟ್ ಹಾಗೂ ಬಸವ ಕೇಂದ್ರದ ಪದಾಧಿಕಾರಿಗಳು ಕಳೆದ ನಾಲ್ಕು ದಶಕಗಳಿಂದ ಹತ್ತು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿ ಸಮಾಜದ ಸುಧಾರಣೆಗೆ ಶ್ರಮಿಸುತ್ತಿವೆ ಎಂದರು.
ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರ.ಕು. ಪ್ರಭಕ್ಕನವರು ಮಾತನಾಡಿ, ನಮ್ಮ ಇಂದಿನ ಸಮಾಜದಲ್ಲಿ ಯುವ ಸಮುದಾಯ ಆಧುನಿಕ ಸಂಸ್ಕೃತಿಯನ್ನು ಅಳವಡಿಸಿಕೊಂಡು ದಾರಿ ತಪ್ಪುತ್ತಿದ್ದಾರೆ. ಆದ್ದರಿಂದ ಯುವ ಸಮುದಾಯ ನಮ್ಮ ಹಿಂದು ಧರ್ಮದ ಬಸವಾದಿ ಶಿವಶರಣ ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಈ ದೇಶಕ್ಕೆ ಉತ್ತಮ ನಾಗರೀಕರಾಗಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಬಸವ ಕೇಂದ್ರ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಮುರುಘರಾಜೇಂದ್ರ ಫ್ರೀ ಟ್ರಸ್ಟನ ನಿರ್ದೇಶಕರಾದ ಸಿ.ಎಚ್.ಕೋರಿ, ಎಸ್.ವೈ.ಹುಂಬಿ, ಎಸ್.ಈ. ಬ್ಯಾಹಟ್ಟಿ, ಜಿ.ಕೆ. ಹಸಬಿ, ಎಸ್.ವಿ. ಗೋವೇಶ್ವರ, ಎಂ.ಎಸ್. ಅಸೂಟಿ, ವಿ.ಎನ್. ಕೊಳ್ಳಿಯವರ, ಶಂಕ್ರಣ್ಣ ವಾಳದ, ಎಸ್.ಎಚ್. ಪಾಟೀಲ, ಚನ್ನು ನಂದಿ, ಟಿ.ಆರ್. ಉಳ್ಳಾಗಡ್ಡಿ, ಸಂಗಪ್ಪ ಪೂಜಾರ, ಪ್ರೊ. ಆರ್.ಎಚ್. ತಿಗಡಿ, ಆರ್.ಬಿ. ಚಿನಿವಾಲರ, ಶಿಕ್ಷಕ ಬಿ.ಎಚ್. ಕ್ಯಾರಕೊಪ್ಪ, ಶಿವಲೀಲ ಕೊಳ್ಳಿಯವರ, ಡಾ. ಕಲಾಶ್ರೀ ಹಾದಿಮನಿ, ಪತ್ರಕರ್ತರಾದ ಉಮೇಶ ಬೋಳಶಟ್ಟಿ, ಡಾ. ಬಸವರಾಜ ಹಲಕುರ್ಕಿ, ಎಸ್.ಜಿ. ತೆಗ್ಗಿನಮನಿ, ಸಿ.ಬಿ. ಸುಬೇದಾರ, ಪ್ರಭು ಗುಡಾರದ, ರಾಜೇಸಾಬ ಹೊಸಮನಿ, ಪತ್ರಪ್ಪ ಹಡಪದ, ಸೇರಿದಂತೆ ಮುಂತಾದವರು ಇದ್ದರು.