ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಅಗತ್ಯವಾದ ಜ್ಞಾನ, ಕೌಶಲ್ಯ ಪಡೆದು ದೇವರ ರೂಪದಲ್ಲಿ ಮನುಷ್ಯನ ಜೀವ ರಕ್ಷಿಸುವ ವೈದ್ಯಕೀಯ ವೃತ್ತಿಗೆ ಸಮಾಜದಲ್ಲಿ ಅಪಾರ ಗೌರವವಿದೆ ಎಂದು ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.ತಾಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಎಂಬಿಬಿಎಸ್ ಪ್ರಥಮ ವರ್ಷದ ವೈಟ್‌ಕೋಟ್ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ, ಸಹಕಾರಿ, ಔದ್ಯೋಗಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ನಾನು ಸೇವೆ ಸಲ್ಲಿಸಿದ್ದೇನೆ. ಆದರೆ, ವೈದ್ಯಕೀಯ ಕ್ಷೇತ್ರ ನೀಡಿದಷ್ಟು ಖುಷಿ ಬೇರ್ಯಾವುದೇ ಕ್ಷೇತ್ರ ನೀಡಿಲ್ಲ. ಎಲ್ಲ ವೃತ್ತಿಯಲ್ಲಿನ ಆನಂದಕ್ಕಿಂತ ಹೆಚ್ಚು ವೈದ್ಯಕೀಯ ಸೇವೆ ಮತ್ತು ವೃತ್ತಿಯಲ್ಲಿ ನನಗೆ ತಪ್ತಿ ತಂದಿದೆ. ವೈದ್ಯಕೀಯ ಶಿಕ್ಷಣವು ವಾಸ್ತವವಾಗಿ ವೃತ್ತಿಪರ ದೀಕ್ಷೆ ಒಂದು ರೂಪವಾಗಿದೆ ಎಂದರು.ವೈಟ್ ಕೋಟ್ ಸಮಾರಂಭವು ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಇತರ ಆರೋಗ್ಯ-ಸಂಬಂಧಿತ ಕ್ಷೇತ್ರಗಳಲ್ಲಿ ಒಂದು ಆಚರಣೆಯಾಗಿದೆ. ಇದು ವಿದ್ಯಾರ್ಥಿಯು ಪೂರ್ವಭಾವಿ ಅಧ್ಯಯನದಿಂದ ಕ್ಲಿನಿಕಲ್ ಆರೋಗ್ಯ ವಿಜ್ಞಾನಕ್ಕೆ ಪರಿವರ್ತನೆ ಸೂಚಿಸುತ್ತದೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ವೈದ್ಯರಾಗಿ ಗುರುತಿಸಿಕೊಳ್ಳುವ ಮೂಲಕ ಜನ್ಮ ನೀಡಿದ ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಈ ಸಂಸ್ಥೆಗೆ ಕೀರ್ತಿ ಬರುವಂತೆ ಆದರ್ಶ ವೈದ್ಯರಾಗಿ ಹೊರಹೊಮ್ಮಿ ಎಂದು ಶುಭ ಕೋರಿದರು.ಕಾರ್ಯಕ್ರಮದ ಮುಖ್ಯ ಅತಿಥಿ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ, ವಿದ್ಯೆ ಜತೆಗೆ ವಿವೇಕ ಮುಖ್ಯ. ಕೇವಲ ವೈದ್ಯರಾದರೇ ಸಾಲದು ಗುಣಮಟ್ಟದ ಸೇವೆ ಸಲ್ಲಿಸುವ ವೈದ್ಯರಾಗಿ. ಎಸ್.ಆರ್.ಪಾಟೀಲರು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾರೋ ಅಲ್ಲಿ ಶಿಸ್ತು, ಸಮಯ ಪರಿಪಾಲನೆ, ಸಮರ್ಪಣಾ ಮನೋಭಾವ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಅವರ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಣ್ಣಿಸಿದರು.ವೈದ್ಯಕೀಯ ಕಾಲೇಜಿನ ಮುಖ್ಯಾಧಿಕಾರಿ ಧರ್ಮರಾಯ ಇಂಗಳೆ, ವೈದ್ಯಕೀಯ ವ್ಯವಸ್ಥಾಪಕ ವಿಜಯಾನಂದ ಹಳ್ಳಿ, ಆಡಳಿತ ಅಧಿಕಾರಿ ರಾಘವೇಂದ್ರ ಪಾಟೀಲ, ಬಾಪೂಜಿ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎನ್.ಪಾಟೀಲ, ಬಾಪೂಜಿ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರಾದ ಅನುಷಾ ಪಾಟೀಲ, ಎಸ್.ಎಸ್.ರಂಗನಗೌಡ್ರ, ಮಂಜುನಾಥ ಅರಳಿಕಟ್ಟಿ, ಪ್ರವೀಣ ಕಂಠಿ ಹಾಗೂ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ವೃತ್ತಿಪರ ವಿಷಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಯೋಗಾಲಯಗಳು, ಗ್ರಂಥಾಲಯಗಳು, ಬೋಧನಾ ಕೊಠಡಿಗಳು ಹಾಗೂ ಕಲಿಕೆ ಬೇಕಾಗುವ ಎಲ್ಲ ಮೂಲಸೌಲಭ್ಯ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಬಾಡಗಂಡಿಯಲ್ಲಿ ವೈದ್ಯಕಿಯ ಲೋಕವನ್ನೇ ಸೃಷ್ಟಿ ಮಾಡಬೇಕು.-ಎಸ್.ಆರ್.ಪಾಟೀಲ,
ಮಾಜಿ ಸಚಿವರು.ಎಸ್.ಆರ್.ಪಾಟೀಲರು ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾರೋ ಅಲ್ಲಿ ಶಿಸ್ತು, ಸಮಯ ಪರಿಪಾಲನೆ, ಸಮರ್ಪಣಾ ಮನೋಭಾವ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಅವರ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.-ಡಾ.ಜಯಶ್ರೀ ಎಮ್ಮಿ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ.