ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳದಿ. ವಿಮಲ್ ಚಂದ್ ಮೇಹತಾ ಅವರ ಕುಟಂಬದ ನಾಲ್ವರು ಸಹ ತಮ್ಮೆಲ್ಲ ಕೋಟ್ಯಂತರ ರುಪಾಯಿ ಬೆಲೆಬಾಳುವ ಆಸ್ತಿ ದಾನ ಮಾಡಿ, ಜೈನ ದೀಕ್ಷೆ ಪಡೆದಿದ್ದಾರೆ.
ತಾಯಿ ಅನಿತಾ ದೇವಿ, ಹಿರಿಮಗಳು ಪೂಜಾ, ಹಿರಿಯ ಮಗ ವಿಶಾಲಕುಮಾರ ಹಾಗೂ ಕಿರಿಯ ಪುತ್ರ ವಿನಯಕುಮಾರ ತಮ್ಮೆಲ್ಲ ಆಸ್ತಿ ದಾನ ಮಾಡಿ, ಸರ್ವವನ್ನು ಪರಿತ್ಯಾಗ ಮಾಡಿದ್ದಾರೆ.ವಿಮಲ್ ಚಂದ್ ಮೆಹತಾರ ಇಡೀ ಪರಿವಾರ ಈಗ ಸಂಪೂರ್ಣ ಗೃಹಸ್ಥಾಶ್ರಮವನ್ನು ತ್ಯಾಗ ಮಾಡಿ, ತಮಗೆ ಸೇರಿದ್ದ ಅಷ್ಟು ಆಸ್ತಿಯನ್ನು ಸಹ ಒಂದು ಬಿಡಿಕಾಸು ಉಳಿಸಿಕೊಳ್ಳದೆ ದಾನ ಮಾಡಿದೆ.
ತಮ್ಮಿಂದ ಅರ್ಜಿತ ಹಾಗೂ ಪಿತ್ರಾರ್ಜಿತದಲ್ಲಿ ಬಳುವಳಿಯಾಗಿದ್ದ ಸಕಲ ಐಶ್ವರ್ಯದ ಸೌಭಾಗ್ಯಮಯ ಸಿರಿ ಸಂಪತ್ತಿನ ಸಂಪೂರ್ಣ ಆಸ್ತಿಯನ್ನು ದಾನ ಧರ್ಮ ಮಾಡಿ, ಬಂಧು ಬಳಗದ ಹಿತೈಷಿಗಳಿಗೆ ಹಂಚಿ ತಮ್ಮ ಇಡೀಯ ಭವಿಷ್ಯದ ಜೀವನವನ್ನೇ ಜೈನ ಸನ್ಯಾಸತ್ವದೊಂದಿಗೆ ಶುದ್ಧ, ಶ್ವೇತ ವಸ್ತ್ರಧಾರಿ ಭಗವತೀ ಜಿನ ದೀಕ್ಷೆಯ ಸದ್ಧರ್ಮ ಮಾರ್ಗದಲ್ಲಿ ಪರಿವರ್ತನೆ ಹೊಂದಿರುತ್ತಾರೆ.ಸುಮಾರು ನೂರಾರು ವರ್ಷಗಳ ಹಿಂದೆಯೇ ಶ್ವೇತಾಂಬರ ಜೈನ ಸಮುದಾಯದ ಮೆಹತಾ ಪರಿವಾರದ ಪೂರ್ವಜರು ರಾಜಸ್ಥಾನದಿಂದ ವಲಸೆಯಾಗಿ ಕೊಪ್ಪಳಕ್ಕೆ ಬಂದು ನೆಲೆಸಿದ್ದು, ಅವರ 9ರಿಂದ 10ನೇ ತಲೆಮಾರಿನ ಮರಿ ಮೊಮ್ಮೊಕ್ಕಳು ರೈತರ ಬೆಳೆಗಳಿಗೆ ಪ್ರೇರಕವಾದ ಅತ್ಯವಶ್ಯಕ ಪೋಷಕಯುಕ್ತ ರಸಗೊಬ್ಬರ ವ್ಯವಸಾಯದಲ್ಲಿ ವಿಮಲ್ ಫರ್ಟಿಲೈಜರ್ ಹೆಸರಿನ ವ್ಯವಸಾಯವನ್ನು ಕಳೆದ 45-50 ವರ್ಷಗಳಿಂದ ನಡೆಸುತ್ತಿದ್ದರು. ಕಳೆದ ಏಳೆಂಟು ವರ್ಷಗಳ ಹಿಂದೆ ಕುಟುಂಬದ ಯಜಮಾನ. ವಿಮಲ್‌ಚಂದ್ ಮೆಹತಾ ತಮ್ಮ ಮಧ್ಯ ವಯಸ್ಸಿನಲ್ಲಿಯೇ ಅನಾರೋಗ್ಯದ ಕಾರಣ ನಿಧನರಾದರು. ನಂತರ ಅವರ ಪುತ್ರರು ನಿಧಾನವಾಗಿ ತಂದೆ ಬಿಟ್ಟು ಹೋದ ಪಾರಂಪರಿಕ ವ್ಯವಸಾಯವನ್ನು ಮುತುವರ್ಜಿ ವಹಿಸಿ ಮುಂದುವರೆಸಿದ್ದರು ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿತ್ತು.
ಈ ಸಮಯದಲ್ಲೊಂದು ವಿಧಿಯ ಶುಭ ಘಳಿಗೆಯಲ್ಲಿ ಜೈನ ಆಚಾರ್ಯ ಸಂತ ಮುನಿವರ್ಯರ ಸಾನಿಧ್ಯದ ಸದ್ ಪ್ರೇರಣೆಯಿಂದ ಇವರ ಸಂಪೂರ್ಣ ಕುಟುಂಬವೇ ತಮ್ಮ ಮಧ್ಯ ವಯಸ್ಸಿನಲ್ಲಿಯೇ ಧಾರ್ಮಿಕ ಪರಿವರ್ತನೆಯತ್ತ ಒಲಿಯತೊಡಗಿತು.ಇವರ ಕೊನೆಯ ಪುತ್ರ 2022ನೇ ಇಸವಿಯಲ್ಲಿ ಹಿರಿಯ ಜೈನ ಆಚಾರ್ಯ ಮುನಿವರ್ಯರ ಸಾನಿಧ್ಯದಲ್ಲಿ ಭೌತಿಕ ಸಂಸಾರ ತ್ಯಜಿಸಿದ್ದರು.
ಮಹಾರಾಷ್ಟ್ರ ಧೂಳಿಯಾ ಮಹಾನಗರದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ದೀಕ್ಷೆ ಪಡೆದಿದ್ದಾರೆ.