ಧಾರವಾಡದಂತಹ ಒಂದೇ ಪ್ರದೇಶದ ಹಿಂದೂಸ್ತಾನಿ ಗಾಯಕರಿಗೆ, ಸಾಹಿತಿಗಳಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಬಂದಷ್ಟು, ದೇಶದಲ್ಲಿಯೇ ಬೇರಾವ ಪ್ರದೇಶಕ್ಕೆ ಬಂದಿಲ್ಲ. ಧಾರವಾಡಕ್ಕೆ ಸಂಗೀತ ಕ್ಷೇತ್ರದಿಂದ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಹೆಸರು ತಂದುಕೊಟ್ಟಿದ್ದಾರೆ.

ಧಾರವಾಡ:

ಪಂ. ಪಂಚಾಕ್ಷರಿ ಗವಾಯಿಗಳು, ಪಂ. ಮಲ್ಲಿಕಾರ್ಜುನ ಮನಸೂರ, ಪಂ. ಭೀಮಸೇನ್ ಜೋಶಿ, ಪಂ. ಬಸವರಾಜ ರಾಜಗುರು, ಪಂ. ಪುಟ್ಟರಾಜ ಗವಾಯಿಗಳು, ಡಾ. ಗಂಗೂಬಾಯಿ ಹಾನಗಲ್‌ರಂತಹ ಅನೇಕ ಗಾಯಕರು ಎಂದಿಗೂ ಪ್ರಚಾರದ ಹಿಂದೆ ಬೀಳದೇ ಸಂಗೀತ ಸಿದ್ಧಿಗೆ ಆದ್ಯತೆ ನೀಡಿದ್ದು, ಅವರ ಕಷ್ಟದ ಫಲವನ್ನು ಇಂದಿನ ಗಾಯಕರು ಪಡೆಯುತ್ತಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕ ಪಂ. ಎಂ. ವೆಂಕಟೇಶಕುಮಾರ ಹೇಳಿದರು.

ಕುಲಪುರೋಹಿತ ಆಲೂರ ವೆಂಕಟರಾವ್ ಸಭಾಂಗಣದಲ್ಲಿ ಸ್ವರಸೇನ ಪಂ. ಸಂಗಮೇಶ್ವರ ಗುರವ ಸಂಗೀತ ಪ್ರತಿಷ್ಠಾನ ಉದ್ಘಾಟಿಸಿದ ಅವರು, ಹಿಂದಿನ ಗಾಯಕರಿಂದಲೇ ಇಂದು ಸಂಗೀತ ಉಳಿದು ಬೆಳೆಯುತ್ತಿದೆ. ತಮ್ಮ ಪ್ರತಿಭೆಯಿಂದ ಧಾರವಾಡದ ಹಿರಿಮೆ ಹೆಚ್ಚಿಸಿರುವುದಲ್ಲದೇ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಧಾರವಾಡಕ್ಕೆ ವಿಶ್ವದೆತ್ತರದ ಗೌರವ ತಂದ ಗಾಯಕರನ್ನು ಸ್ಮರಿಸಬೇಕು ಎಂದರು.

ಹಳ್ಳಿಯಲ್ಲಿ ಹುಟ್ಟಿದ ನನ್ನನ್ನು ಇಡೀ ಪ್ರಪಂಚಕ್ಕೆಲ್ಲ ಸಂಗೀತದ ಮೂಲಕ ಸುತ್ತಾಡಿಸಿದವರು ನಮ್ಮ ಗುರುಗಳಾದ ಪಂ. ಪುಟ್ಟರಾಜ ಗವಾಯಿಗಳು ಸದಾ ಸ್ಮರಣೀಯರು. ಪ್ರತಿಷ್ಠಾನದಿಂದ ಪ್ರತಿ ವರ್ಷ ಒಬ್ಬರಿಗೆ ಪ್ರಶಸ್ತಿ ನೀಡುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಖ್ಯಾತ ಉದ್ಯಮಿ ಡಾ. ವಿಎಸ್‌ವಿ ಪ್ರಸಾದ್ ಮಾತನಾಡಿ, ಧಾರವಾಡದಂತಹ ಒಂದೇ ಪ್ರದೇಶದ ಹಿಂದೂಸ್ತಾನಿ ಗಾಯಕರಿಗೆ, ಸಾಹಿತಿಗಳಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಬಂದಷ್ಟು, ದೇಶದಲ್ಲಿಯೇ ಬೇರಾವ ಪ್ರದೇಶಕ್ಕೆ ಬಂದಿಲ್ಲ. ಧಾರವಾಡಕ್ಕೆ ಸಂಗೀತ ಕ್ಷೇತ್ರದಿಂದ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಹೆಸರು ತಂದುಕೊಟ್ಟಿದ್ದಾರೆ. ಇಲ್ಲಿ ಸಂಗೀತ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಪಂ. ಸಂಗಮೇಶ್ವರ ಗುರವ ಸ್ಮರಣೆಯಲ್ಲಿ ಸ್ಥಾಪನೆಗೊಂಡ ಪ್ರತಿಷ್ಠಾನಕ್ಕೆ ₹ 2.5 ಲಕ್ಷ ದೇಣಿಗೆ ಘೋಷಿಸಿದರು. ಅಲ್ಲದೇ ತಮ್ಮ ತಂದೆಯವರ ಹೆಸರಿನಲ್ಲಿ ವಾರ್ಷಿಕ ₹ 25 ಸಾವಿರ ಮೊತ್ತದ ಪ್ರಶಸ್ತಿಯನ್ನು ಪ್ರತಿಷ್ಠಾನದ ವತಿಯಿಂದ ನೀಡುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಶಿಧರ ತೋಡಕರ, ಸ್ವರ ಸಾಧಕರ ಹೆಸರಿನಲ್ಲಿ ಸ್ಥಾಪಿಸಿದ ಪ್ರತಿಷ್ಠಾನದ ಅಧ್ಯಕ್ಷತೆಯ ಬಹುದೊಡ್ಡ ಜವಾಬ್ದಾರಿ ನನಗಿದೆ. ಪ್ರೊ. ಸದಾನಂದ ಕನವಳ್ಳಿ ಅವರು ಸಂಘಟನಾ ಕ್ಷೇತ್ರದಲ್ಲಿ ನಮಗೆ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಷ್ಠಾನದ ಕಾರ್ಯಚಟುವಟಿಕೆ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಶಶಿಧರ ಸಾಲಿ ಮಾತನಾಡಿದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಯಾ ರಾಮನ್ ರೂಪಿಸಿದರು. ಉಪಾಧ್ಯಕ್ಷ ಪಿ.ಎಚ್. ನೀರಲಕೇರಿ ಸ್ವಾಗತಿಸಿದರು. ಧನಶ್ರೀ ಗುರವ ಭಟ್ಟ್ ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ವಂದಿಸಿದರು. ಉಪಾಧ್ಯಕ್ಷ ಪಂ. ಕೈವಲ್ಯಕುಮಾರ ಗುರವ, ಸದಸ್ಯರಾದ ವಿದುಷಿ ಸುಜಾತಾ ಗುರವ, ನಂದಿಕೇಶ್ವರ ಗುರವ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ವಿನಯ ನಾಯಕ, ಡಾ. ಉಮೇಶ ಮುಕ್ತಾಮಠ ವೇದಿಕೆಯಲ್ಲಿದ್ದರು. ಸಂಗೀತೋತ್ಸವದಲ್ಲಿ ಪಂ. ಎಂ. ವೆಂಕಟೇಶಕುಮಾರ ಗಾಯನದಲ್ಲಿ ರಾಗ ಹಮೀರ ಮತ್ತು ರಾಗ ತಿಲಕ ಕಾಮೋದ ಪ್ರಸ್ತುತಪಡಿಸಿದರೆ, ಪುಣೆಯ ಉಸ್ತಾದ್ ಶಾಕೀರ್ ಖಾನ್ ಅವರು ಸಿತಾರವಾದನದಲ್ಲಿ ರಾಗ ಜೋಗ್ ಪ್ರಸ್ತುತಪಡಿಸಿದರು. ತಬಲಾದಲ್ಲಿ ಡಾ. ಉದಯ ಕುಲಕರ್ಣಿ, ಶ್ರೀಧರ ಮಾಂಡ್ರೆ ಹಾಗೂ ಹಾರ್ಮೊನಿಯಂದಲ್ಲಿ ಸತೀಶ ಭಟ್ ಹೆಗ್ಗಾರ ಸಾಥ್ ಸಂಗತ್ ನೀಡಿದರು.