ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಸತ್ತು ದಶಕ ಕಳೆದರೂ ನಿಮಗೆ ಈಗ ಮರಣ ಪತ್ರ ಬೇಕಾ? ಹುಟ್ಟಿ ದಶಕವಾದರೂ ಜನನ ಪತ್ರಬೇಕಾ? ಏನು ಯೋಚನೆ ಮಾಡದೆ ಮಾಲೂರು ಪಟ್ಟಣದ ಮಿನಿ ವಿಧಾನಸೌಧದ ಹಿಂದಿನ ರಸ್ತೆಗೆ ಹೋದರೆ ಸಾಕು. ಜನನ- ಮರಣ ಪತ್ರವು ಆಸ್ಪತ್ರೆ ಅಥವಾ ಪುರಸಭೆಗೆ ಅರ್ಜಿ ಹಾಕದೆ ನಿಮ್ಮ ಕೈಗೆ ಸಿಗಲಿದೆ. ಇದಕ್ಕಾಗಿಯೇ ಏಜೆಂಟ್ ಗಳ ಮಳಿಗೆಗಳಿದ್ದು, ಮೂರು- ನಾಲ್ಕು ಸಾವಿರ ರು. ಹಣ ಖರ್ಚು ಮಾಡಿದರೆ ಸಾಕು, ನಿಮ್ಮ ಕೈಗೆ ಜನನ- ಮರಣದ ನಕಲಿ ಪ್ರಮಾಣ ಪತ್ರ ಸಿಗಲಿದೆ ಸಿಗಲಿದೆ.ತಹಸೀಲ್ದಾರ್ ಕಚೇರಿಯ ಮೂಗಿನ ಕೆಳಗೆ ಈ ದಂಧೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಾಜಾರೋಷವಾಗಿ ಅವ್ಯವಹಾರ ಮಾಡುತ್ತಿದ್ದಾರೆ. ಈಗ ತಾಲೂಕಿನಲ್ಲಿ ಭೂಮಿಗಾಗಿ ನಕಲಿ ದಾಖಲೆ ಸೃಷ್ಟಿಯಾಗುತ್ತಿದ್ದು, ಪೂರಕವಾಗಿ ಸತ್ತವನ ಹೆಸರಿನಲ್ಲಿಯೂ ಮರಣ ಪತ್ರಗಳಿಗೆ ನಕಲಿ ಮರಣ ಪತ್ರ ತಯಾರಿಸುತ್ತಿದ್ದಾರೆ. ಈ ದಂಧೆಗೆ ಕನ್ನಡ ಪರ ಸಂಘಟನೆಯೊಂದರ ಮುಖಂಡನ ಬಲ ಇದ್ದು, ಎಗ್ಗಿಲ್ಲದೇ ಈ ದಂಧೆ ನಡೆಯುತ್ತಿದೆ ಎನ್ನಲಾಗಿದೆ. ಇಲ್ಲಿನ ಪುರಸಭೆ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ನಕಲಿ ಪ್ರಮಾಣಪತ್ರಗಳನ್ನು ಕಂಡು ಹಿಡಿದು ವಾಪಸ್ಸು ಕಳುಹಿಸಲಾಗುತ್ತಿದ್ದರೂ ಈ ಎರಡು ಸೇವಾ ಕೇಂದ್ರಗಳು ಈ ಬಗ್ಗೆ ಇದುವರೆಗೂ ದೂರು ನೀಡದಿರುವುದು ಅನುಮಾನಕ್ಕೆ ಅಸ್ಪದ ಮಾಡಿಕೊಟ್ಟಿದೆ.
ಈ ದಂಧೆ ಬಗ್ಗೆ ಬೆಳಕು ಚೆಲ್ಲಿರುವ ಪುರಸಭೆ ಸದಸ್ಯ ಭಾನುತೇಜಾ ಮಾತನಾಡಿ, ಈ ದಂಧೆ ಬಗ್ಗೆ ಈಗಾಗಲೇ ಆಸ್ವತ್ರೆ ವೈದ್ಯಾಧಿಕಾರಿಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಆದರೆ ಅವರಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿಲ್ಲ, ಪೊಲೀಸ್ ಇಲಾಖೆ ಈ ದಂಧೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಮಾತನಾಡಿ, ನಕಲಿ ದಾಖಲೆಗಳ ಬಗ್ಗೆ ಹಲವು ಪ್ರಕರಣಗಳು ನನ್ನ ಗಮನಕ್ಕೆ ಬಂದಿದ್ದು, ಈ ದಂಧೆ ನಡೆಯುತ್ತಿರುವ ಸ್ಥಳದ ಬಗ್ಗೆ ಮಾಹಿತಿ ಇಲ್ಲದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಗಮನಕ್ಕೆ ತರಲಾಗಿದೆ. ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.