ಕಾಲ, ಕಾಯಕ ಮತ್ತು ಕಾಸು ಇವುಗಳಿಗೆ ಮಹತ್ವ ಕೊಡಬೇಕು ಎಂಬುದು ಶರಣರ ಸಂದೇಶವಾಗಿದೆ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.
- ತೋಂಟದ ಸಿದ್ಧಲಿಂಗ ಶ್ರೀ ಪ್ರಶಸ್ತಿ ಸ್ವೀಕರಿಸಿ ಡಾ.ಪಂಡಿತಾರಾಧ್ಯ ಸ್ವಾಮೀಜಿ । ಶ್ರೀ ಸಿದ್ಧಲಿಂಗೇಶ್ವರ ಜಯಂತ್ಯುತ್ಸವ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಕಾಲ, ಕಾಯಕ ಮತ್ತು ಕಾಸು ಇವುಗಳಿಗೆ ಮಹತ್ವ ಕೊಡಬೇಕು ಎಂಬುದು ಶರಣರ ಸಂದೇಶವಾಗಿದೆ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಪಿ.ಬಿ. ರಸ್ತೆಯ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಶ್ರೀ ಸಿದ್ಧಲಿಂಗೇಶ್ವರ ಜಯಂತ್ಯುತ್ಸವ, ಸಮಗ್ರ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತೋಂಟದ ಸಿದ್ಧಲಿಂಗ ಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.12ನೇ ಶತಮಾನದ ಸಮಾಜದಲ್ಲಿದ್ದ ಅಜ್ಞಾನವನ್ನು ನಿವಾರಣೆ ಮಾಡಿ ಸಮಸಮಾಜ ಕಟ್ಟುವಂತಹ ಕಾರ್ಯದಲ್ಲಿ ಶರಣರು ನಿರತರಾದರು. ಅಂತಹ ಶರಣರ ವಚನ ಸಾಹಿತ್ಯ ಕಲ್ಯಾಣದ ಕ್ರಾಂತಿ ನಂತರ ಕಣ್ಮರೆಯಾಗಿತ್ತು. ಮತ್ತೆ 15ನೇ ಶತಮಾನದಲ್ಲಿ ತೋಂಟದ ಸಿದ್ದಲಿಂಗ ಶಿವಯೋಗಿಗಳು, ಇತರರು ವಚನ ಸಾಹಿತ್ಯಕ್ಕೆ ಹೊಸ ಮೆರಗನ್ನು ತಂದುಕೊಟ್ಟರು. ತೋಂಟದ ಸಿದ್ದಲಿಂಗ ಶಿವಯೋಗಿಗಳು ಸ್ವತಃ 701 ವಚನಗಳನ್ನು ರಚನೆ ಮಾಡಿದರು. ಅವರ ವಚನಗಳು ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆ ತತ್ವಗಳನ್ನು ಒತ್ತಿ ಹೇಳುತ್ತವೆ ಎಂದರು.
ನಮ್ಮ ಜನ ನದಿವಾಸಿ, ಗುಹೆ ವಾಸಿ, ಗುಡ್ಡವಾಸಿಗಳಾಗಿ ತಪಸ್ಸು ಮಾಡುವುದುಂಟು. ಶ್ರೀ ಸಿದ್ದಲಿಂಗ ಶಿವಯೋಗಿಗಳು ಅಂಗದ ಮೇಲೆ ಇಷ್ಟಲಿಂಗವ ಧರಿಸಿ ಅದನ್ನೇ ನಿಷ್ಠೆಯಿಂದ ಪೂಜೆ ಮಾಡಿದರೆ ಅಲ್ಲಿಯೇ ಶಿವ ಸಾಕ್ಷಾತ್ಕಾರ ಸಿಗುತ್ತೆ, ಈ ಲೋಕ ಬಿಟ್ಟು ಎಲ್ಲಿಗೂ ಹೋಗಬೇಕಿಲ್ಲ ಎಂದಿದ್ದಾರೆ. ಅಂತಹ ಶಿವಯೋಗಿಗಳ ಸ್ಮರಣೆ ಮಾಡುವಂತಹ ಕಾರ್ಯವನ್ನು ಪವಾಡ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಕಳೆದ 8 ವರ್ಷಗಳಿಂದ ಮಾಡುತ್ತಿದ್ದಾರೆ. ಬಸವತತ್ವ ಪ್ರೇಮಿಗಳಾಗಿದ್ದಾರೆ. 1 ಸಾವಿರ ವಚನಗಳನ್ನು ಹಾಡಿರುವಂತಹವರು ವಚನ ಪರಂಪರೆ ಮುಂದುವರಿಸುವಂತೆ ಮಾಡಿದವರು. ಅನೇಕ ಶಾಲಾ- ಕಾಲೇಜುಗಳ ತೆರೆದು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಸೇವೆ ಎಂದರು.ಬೆಂಗಳೂರು ಬೇಲಿ ಮಠದ ಚರಮೂರ್ತಿ ಶ್ರೀ ಶಿವರುದ್ರ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಮ್ಮುಖ ವಹಿಸಿ ಮಾತನಾಡಿ, ಈ ಕಾರ್ಯಕ್ರಮ 8ನೇ ಬಾರಿ ನಡೆಯುತ್ತಿದೆ. ಸಾಣೆಹಳ್ಳಿ ಎಂದರೆ ನಮ್ಮಂತವರನ್ನು ಸಾಣೆ ಹಿಡಿದು ಹರಿತ ಮಾಡುವಂತಹ ಹಳ್ಳಿ. 12ನೇ ಶತಮಾನದ ಕಲ್ಯಾಣದ ಕ್ರಾಂತಿ ನಂತರ ಬಸವಾದಿ ಶರಣರು ಬಿಟ್ಟುಹೋದಾಗ ಚನ್ನಬಸವಣ್ಣನವರು ವಚನಗಳ ರಕ್ಷಣೆಗೆ ಉಳವಿ ಕಡೆಗೆ, ಸಿದ್ದರಾಮ ಶಿವಯೋಗಿಗಳು ಸೊಲ್ಲಾಪುರದ ಕಡೆಗೆ, ಹಿರಿಯರು ಶ್ರೀಶೈಲದ ಕಡೆಗೆ ಹೋದರು. ಕಾಯಕದ ಭಕ್ತರು ಎಲ್ಲಿಗೆ ಹೋದರು ಎಂಬ ಕುರಿತು ಯಾವುದೇ ದಾಖಲೆಗಳು, ಪುರಾಣಗಳಲ್ಲಿ ಸಿಗುವುದಿಲ್ಲ. ಎಲ್ಲ ಕಾಯಕದ ಶರಣರು ಕಲ್ಯಾಣ ಬಿಟ್ಟು ದಕ್ಷಿಣದ ಕಡೆಗೆ ಬಂದರು. ಹರಳಯ್ಯ ಶರಣರನ್ನು ಈ ಕಾಯಕದ ಶರಣರು ಜೊತೆಗೆ ಕರೆತಂದರು. ಅನುಭವ ಮಂಟಪ ಸಾಕಾರಗೊಳಿಸಿಕೊಟ್ಟ ಕಾರಣದಿಂದಾಗಿ ಎಲ್ಲ ಕವಿಗಳು ತೋಂಟದ ಸಿದ್ದಲಿಂಗ ಶರಣರನ್ನು ದ್ವಿತೀಯ ಅಲ್ಲಮ ಎಂದು ಕರೆದರು. ಅಂತಹ ಶಿವಯೋಗಿಗಳು ತಮಿಳುನಾಡಿನಿಂದ ಹಿಡಿದು ಎಲ್ಲಡೆ ಬಸವ ತತ್ವವನ್ನು ಸಾರಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪವಾಡಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಬೆಟ್ಟದ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೆಬ್ಬಾಳು ಮಹಾಂತರುದ್ರ ಮಹಾಸ್ವಾಮಿಗಳು, ಸೇರಿದಂತೆ ನಾಡಿನ ಅನೇಕ ಜಗದ್ಗುರುಗಳು, ಮಹಾಸ್ವಾಮಿಗಳು, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಮಹಿಮಾ ಪಟೇಲ್ , ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ದೇವರಮನಿ ಶಿವಕುಮಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ, ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಅಥಣಿ ಎಸ್.ವೀರಣ್ಣ, ಎ.ಎಚ್. ಸಿದ್ದಲಿಂಗ ಸ್ವಾಮಿ, ಶಶಿಧರ ಬಸಾಪುರ, ಎಂ.ಟಿ. ಸುಭಾಷಚಂದ್ರ, ಬಿ.ಜಿ. ಅಜಯಕುಮಾರ, ದೇವರಮನಿ ಗಿರೀಶ, ಅವಿನಾಶ್, ಶಂಭು ಉರೆಕೊಂಡಿ, ಅಜಿತ್ ಆಲೂರು ಸೇರಿದಂತೆ ಇತರರು ಭಾಗವಹಿಸಿದ್ದರು.- - -
(ಬಾಕ್ಸ್-1) * ಸಿದ್ದಗಂಗೆಯ ಕರಕಮಲ ಸಂಜಾತರು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಒಬ್ಬೊಬ್ಬರು ಒಂದೊಂದು ಸಾಧನೆ ಮೂಲಕ ಯೋಗ ಸಾಧನೆ ಪಡೆದುಕೊಂಡರು. ಎಲ್ಲ ಯೋಗಗಳು ಶ್ರೇಷ್ಠವಾದ ಯೋಗಗಳೇ ಆಗಿವೆ. 12ನೇ ಶತಮಾನಕ್ಕಿಂತ ಮುಂಚೆ ಬಹಳಷ್ಟು ಯೋಗಗಳಿದ್ದವು. ಅವು ಜನಸಾಮಾನ್ಯರಿಗೆ ಅನುಕೂಲ ಆಗುವುದು ಅಷ್ಟು ಸುಲಭವಾಗಿರಲಿಲ್ಲ. ಅಷ್ಟಾಂಗ ಯೋಗ ಬಹಳ ಕಷ್ಟದ ಯೋಗ, ಬಸವಣ್ಣ ಕೊಟ್ಟಿದ್ದು ಇಷ್ಟಲಿಂಗ. ನಮ್ಮ ಈ ಶತಮಾನದ ಯೋಗಿಗಳು. ಯಡೆಯೂರು ಸಿದ್ದಲಿಂಗೇಶ್ವರರನ್ನು ನಾವಾರೂ ಶಾರೀರಿಕವಾಗಿ ನೋಡಿಲ್ಲ. ಆದರೆ, ಸಿದ್ಧಗಂಗೆಯನ್ನು ಶುದ್ಧಗಂಗೆಯನ್ನಾಗಿ ಮಾಡಿದ ಶ್ರೀ ಶಿವಕುಮಾರ ಸ್ವಾಮಿಗಳನ್ನು ನೋಡಿದ ಕೂಡಲೇ ನಮಗೆ ಶ್ರೀ ಯಡೆಯೂರು ಸಿದ್ದಲಿಂಗೇಶ್ವರರು ಎಂದು ಎನಿಸುತ್ತಿತ್ತು. ಅಂತಹ ಸಿದ್ದಗಂಗೆಯ ಕರಕಮಲ ಸಂಜಾತರು ಈ ಎಲ್ಲ ಸ್ವಾಮಿಗಳು ಎಂದು ಹೇಳಿದರು.- - -
(ಬಾಕ್ಸ್-2) * ಲಿಂಗಾಯತ ಧರ್ಮ ಉಳಿಸಿದರು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಯಡೆಯೂರು ಸಿದ್ದಲಿಂಗೇಶ್ವರರು ಬಸವ ತತ್ವವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ ಮಹಾನ್ ದಾರ್ಶನಿಕರು. 12ನೇ ಶತಮಾನದಲ್ಲಿ ಬಸವಣ್ಣ ಎಲ್ಲರಿಗೂ ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿ ಎಲ್ಲರಿಗೂ ಸಮಾನತೆ ನೀಡಿ ಸಮಾನತೆಯ ಸಾಮ್ರಾಜ್ಯ ಕಟ್ಟಿದ್ದು ಒಂದು ಪರ್ವ ಕಾಲವಾದರೆ, ಇನ್ನೊಂದು 16ನೇ ಶತಮಾನದ ಕಾಲ ಕರ್ನಾಟಕದ ಪರ್ವ ಕಾಲ. ಅಂತಹ ಪರ್ವ ಕಾಲವನ್ನು ಕಟ್ಟಿದ ಕೀರ್ತಿ ಯಡೆಯೂರು ಸಿದ್ದಲಿಂಗೇಶ್ವರರಿಗೆ ಸಲ್ಲುತ್ತದೆ. 701 ವಿರಕ್ತರನ್ನು ಕಟ್ಟಿಕೊಂಡು ಇಡೀ ನಾಡಿನಾದ್ಯಂತ ಲಿಂಗಾಯತ ಧರ್ಮವನ್ನು ಪ್ರಚಾರ ಮಾಡಿದ ಕೀರ್ತಿ, ಲಿಂಗಾಯತ ಧರ್ಮ ಉಳಿಸಿದಂತಹ ಕೀರ್ತಿ ಎಡೆಯೂರು ಸಿದ್ದಲಿಂಗೇಶ್ವರರಿಗೆ ಸಲ್ಲುತ್ತದೆ ಎಂದರು.- - -
-11ಕೆಡಿವಿಜಿ45: ದಾವಣಗೆರೆಯಲ್ಲಿ ನಡೆದ ಸಿದ್ಧಲಿಂಗೇಶ್ವರ ಜಯಂತ್ಯುತ್ಸವದಲ್ಲಿ ವಿವಿಧ ಮಠಾಧೀಶರು, ಗಣ್ಯರು ಭಾಗವಹಿಸಿದ್ದರು. -11ಕೆಡಿವಿಜಿ46: ದಾವಣಗೆರೆಯಲ್ಲಿ ನಡೆದ ಸಿದ್ಧಲಿಂಗೇಶ್ವರ ಜಯಂತ್ಯುತ್ಸವದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ತೋಂಟದ ಸಿದ್ಧಲಿಂಗ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.