ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾನಗರ ಪಾಲಿಕೆಯ ಭ್ರಷ್ಟಾಚಾರಗಳು ಕೊನೆಗೊಳ್ಳಬೇಕು, ಪಾಲಿಕೆ ಸಾರ್ವಜನಿಕ ಸ್ನೇಹಿಯಾಗಬೇಕು ಎಂದು ಪಾಲಿಕೆಯ ಮಾಜಿ ಸದಸ್ಯ ಹಾಗೂ ರಾಷ್ಟ್ರಭಕ್ತ ಬಳಗದ ಮುಖಂಡ ಈ.ವಿಶ್ವಾಸ್ ಹೇಳಿದರು.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಿದ್ದು ಮತ್ತು ಶಶಿಧರ್ ಎಂಬಾತನ ವಿರುದ್ಧ ದೂರು ದಾಖಲಿದ್ದು, ಈ ಹಿಂದೆ ಕೃಷ್ಣಪ್ಪ ಅವರು ಕೂಡ ಲೋಕಾಯುಕ್ತರ ಬಲೆಗೆ ಬಿದ್ದಿದ್ದು ಸಾಕ್ಷಿಯಾಗಿದೆ. ಸಾರ್ವಜನಿಕರ ಕೆಲಸಗಳು ನಡೆಯುತ್ತಲೇ ಇಲ್ಲ. ತಮ್ಮ ದುಡಿಯನ್ನು ಬಿಟ್ಟು ಹಣ ಖರ್ಚುಮಾಡಿಕೊಂಡು ಪಾಲಿಕೆ ಮೆಟ್ಟಿಲು ಹತ್ತಿದರೆ ಅಲ್ಲಿನ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇಲ್ಲ ಲಂಚ ಕೇಳುತ್ತಾರೆ. ಸಾರ್ವಜನಿಕರ ಯಾವ ಕೆಲಸಗಳೂ ಆಗುತ್ತಿಲ್ಲ. ಅದರಲ್ಲೂ ಇ-ಖಾತೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಿದೆ ಎಂದು ಆರೋಪಿಸಿದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಸುಮಾರು 3600 ಮನೆಗಳಿವೆ. ಇವತ್ತಿಗೂ ಆಶ್ರಯ ನಿವಾಸಿಗಳು ಎನ್‌ಒಸಿಗೆ, ಖಾತೆಗೆ ಮತ್ತು ವಿವಿಧ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇವರೆಲ್ಲಾ ಕೂಲಿ ಕಾರ್ಮಿಕರು ಅವರು ಒಂದು ದಿನದ ಕೂಲಿ ಬಿಟ್ಟು ಆಟೋ ಹಿಡಿದು ಬಂದರೆ ಸಾವಿರ ರೂ. ಖರ್ಚಾಗುತ್ತದೆ ಆದರೂ ಕೆಲಸ ಆಗುವುದಿಲ್ಲ. ಈಗ ಸಸ್ಪೆಂಡ್ ಆಗಿರುವ ಶಶಿಧರ್ ಎಂಬ ಅಧಿಕಾರಿಗೆ ಈ ಹಿಂದೆಯೇ ನಾವು ಹೇಳಿದ್ದೆವು. ಆದರೂ ಸ್ಪಂದನೆ ನೀಡಿರಲಿಲ್ಲ ಎಂದರು.ರಾಷ್ಟ್ರಭಕ್ತ ಬಳಗದ ಮುಖಂಡ ವಕೀಲ ವಾಗೀಶ್ ಮಾತನಾಡಿ, ಡಿಸಿ ಕಚೇರಿ ಎದುರು ಇರುವ ಆಟದ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಎಂಟು ವಾರದೊಳಗೆ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಅವಧಿ ಮುಗಿದು ಒಂದು ತಿಂಗಳಾಗಿದೆ. ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಜಾಗ ಪಾಲಿಕೆಯದು ಎಂದು ಹೇಳಿಲ್ಲ. ಆದ್ದರಿಂದ ರಾಷ್ಟ್ರಭಕ್ತ ಬಳಗದಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲಾಗುವುದು ಮತ್ತು ವಾರದೊಳಗೆ ತೀರ್ಮಾನ ಕೈಗೊಳ್ಳದಿದ್ದರೆ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಇನ್ನೊಬ್ಬ ಮುಖಂಡ ಶ್ರೀಕಾಂತ್ ಮಾತನಾಡಿ, ಧರ್ಮಸ್ಥಳದ ನಾಟಕ ಕೊನೆಗೊಂಡಿದೆ. ಧರ್ಮವೇ ಗೆದ್ದಿದೆ. ಧರ್ಮಸ್ಥಳದ ಪರವಾಗಿ ಮೊದಲ ಹೋರಾಟ ರೂಪಿಸಿದವರೇ ರಾಷ್ಟ್ರಭಕ್ತ ಬಳಗ. ಅದರ ಪ್ರತಿಫಲ ಈಗ ಸಿಕ್ಕಿದೆ. ಧರ್ಮಸ್ಥಳಕ್ಕೆ ಇದ್ದ ಕಳಂಕ ಕಳಚಿದೆ ಈ ಹಿನ್ನೆಲೆಯಲ್ಲಿ ಕೆ.ಈ. ಕಾಂತೇಶ್‌ರವರ ನೇತೃತ್ವದಲ್ಲಿ ಸೆ.2ರ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಭಕ್ತ ಬಳಗದ ಸಂಚಾಲಕ ಈಶ್ವರಪ್ಪ ಅವರ ನಿವಾಸದಿಂದ ಧರ್ಮಸ್ಥಳಕ್ಕೆ ಸುಮಾರು 300 ವಾಹನಗಳಲ್ಲಿ ರಾಷ್ಟ್ರಭಕ್ತ ಬಳಗದ ಸದಸ್ಯರು ಹಾಗೂ ಧರ್ಮಸ್ಥಳ ಭಕ್ತರು ತೆರಳಿ ವಿಶೇಷ ಪೂಜೆ ಧರ್ಮಸ್ಥಳದಲ್ಲಿ ಸಲ್ಲಿಸಲಾಗುವುದು ಎಂದರು.